ಹೋಟೆಲ್ ಉದ್ಯಮಿ ಸಮೀರ ಉಚ್ಚಿಲ ಅನುಮಾನಾಸ್ಪದ ಸಾವು

7
ಅಪಾರ್ಟ್‌ಮೆಂಟ್ ಆವರಣದಲ್ಲಿ ಶವ ಪತ್ತೆ: ದೇಹದ ಮೇಲೆ ಗಾಯದ ಗುರುತುಗಳಿಲ್ಲ

ಹೋಟೆಲ್ ಉದ್ಯಮಿ ಸಮೀರ ಉಚ್ಚಿಲ ಅನುಮಾನಾಸ್ಪದ ಸಾವು

Published:
Updated:
Deccan Herald

ಹುಬ್ಬಳ್ಳಿ: ನಗರದ ಹೋಟೆಲ್ ಉದ್ಯಮಿ ಸಮೀರ ಉಚ್ಚಿಲ (48) ಅವರು ಬುಧವಾರ ಮಧ್ಯರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಅವರು ವಾಸವಿದ್ದ ಭವಾನಿನಗರದ ಆಕೃತಿ ಅಪಾರ್ಟ್‌ಮೆಂಟಿನ ನೆಲಮಹಡಿಯ ಜನರೇಟರ್‌ ಬಳಿ ಶವ ಪತ್ತೆಯಾಗಿದೆ. ದೇಹದ ಮೇಲೆ ಗಾಯಗಳಿಲ್ಲ. ಅವರ ಜೇಬಿನಲ್ಲಿ ಸುಮಾರು ₹60 ಸಾವಿರ ಹಣ ಸಿಕ್ಕಿದೆ.

ಗೆಳೆಯರ ಜೊತೆ ತಮ್ಮ ಉಡ್‌ಲ್ಯಾಂಡ್‌ ಹೋಟೆಲ್‌ನಲ್ಲಿದ್ದ ಸಮೀರ ಅವರು ಮಧ್ಯರಾತ್ರಿ 12 ಗಂಟೆಯ ನಂತರ ಅಪಾರ್ಟ್‌ಮೆಂಟ್‌ಗೆ ಕಾರಿನಲ್ಲಿ ಬಂದಿದ್ದರು. ಬಲ ಭಾಗದಲ್ಲಿ ವಾಹನ ನಿಲ್ಲಿಸಿದ ಅವರು ಶೌಚಾಲಯ ಹಾಗೂ ಜನರೇಟರ್ ಇರುವ ಸ್ಥಳದೆಡೆಗೆ ಹೋಗಿರುವ ದೃಶ್ಯಗಳು ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ದಾಖಲಾಗಿವೆ.

ಅಪಾರ್ಟ್‌ಮೆಂಟ್‌ಗೆ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿದ್ದು, ದಿನದ 24 ಗಂಟೆಯೂ ಕಾವಲು ಕಾಯುತ್ತಾರೆ. ಆದ್ದರಿಂದ ಗೇಟ್ ಮೂಲಕ ಅಪರಿಚಿತರು ಒಳಗೆ ಬರಲು ಸಾಧ್ಯವಿಲ್ಲ. ಆದರೆ, ಸುಮಾರು ಐದು ಅಡಿ ಎತ್ತರದ ಕಾಂಪೌಂಡ್ ಇದ್ದು, ಅದರಿಂದಾಚೆ ಖಾಲಿ ಜಾಗವಿದೆ. ಅಲ್ಲಿಂದ ಒಳಗೆ ಬರಲು ಅವಕಾಶ ಇದೆ. ಆದರೆ ಅಪರಿಚಿತರು ಬಂದಿರುವ ಬಗ್ಗೆ ಯಾವುದೇ ಕುರುಹು ಪೊಲೀಸರಿಗೆ ಸಿಕ್ಕಿಲ್ಲ ಎನ್ನಲಾಗಿದೆ.

‘ದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಕುಸಿದು ಬಿದ್ದ ರೀತಿಯಲ್ಲಿ ಶವ ಪತ್ತೆಯಾಗಿದೆ. ಸಮೀರ ಅವರ ಕುಟುಂಬದವರು ಸಹ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಆಸ್ತಿ ವಿವಾದ ಇತ್ತು ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಶವ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಎಸಿಪಿ ಪಠಾಣ್ ಅವರ ನೇತೃತ್ವದ ವಿಶೇಷ ತಂಡ ಪ್ರಕರಣದ ತನಿಖೆ ನಡೆಸಲಿದೆ’ ಎಂದು ಕಮಿಷನರ್ ಎಂ.ಎನ್. ನಾಗರಾಜ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

‘ಗೆಳೆಯ ಸಮೀರ ನಾನು ರಾತ್ರಿ ಜೊತೆಗಿದ್ದೆವು. ಹೋಟೆಲ್‌ನಿಂದ ಆತ ಅಪಾರ್ಟ್‌ಮೆಂಟ್‌ಗೆ ಹೊರಟ ನಾನೂ ಸಹ ಅಲ್ಲಿಂದ ಹೊರಟೆ. ಬೆಳಿಗ್ಗೆ ಪರಿಚಯಸ್ಥರೊಬ್ಬರು ಕರೆ ಮಾಡಿ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದರು’ ಎಂದು ವೈದ್ಯ ಎಂಬುವರು ತಿಳಿಸಿದರು.

ರಾಮಚಂದ್ರ ಉಚ್ಚಿಲ ಮತ್ತು ಸುಮತಿ ಅವರ ಮಗನಾದ ಸಮೀರ ಹುಬ್ಬಳ್ಳಿಯಲ್ಲಿಯೇ ಹುಟ್ಟಿ ಬೆಳೆದವರು. ಕೇಶ್ವಾಪುರದಲ್ಲಿ ಉಡ್‌ಲ್ಯಾಂಡ್ ಹೋಟೆಲ್ ನಡೆಸುತ್ತಿದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ. ಶವ ಪರೀಕ್ಷೆ ನಡೆಸಿದ ವೈದ್ಯರು, ತೀವ್ರ ಹೃದಯಾಘಾತ ಆಗಿರುವ ಬಗ್ಗೆ ಮೌಖಿಕವಾಗಿ ಪೊಲೀಸರಿಗ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !