ಬುಧವಾರ, ಆಗಸ್ಟ್ 21, 2019
28 °C
ಐಎಂಎ ವಂಚನೆ ಪ್ರಕರಣ ಕುರಿತು ವಿಶೇಷ ತನಿಖಾ ದಳ ವಿಚಾರಣೆ

ರಾಜಕಾರಣಿಗಳ ಹೆಸರು ಹೇಳಿದ ಮನ್ಸೂರ್‌

Published:
Updated:

ಬೆಂಗಳೂರು: ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ಬಂಧಿತನಾಗಿರುವ ಐಎಂಎ ಸಮೂಹ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್‌ ಖಾನ್‌ ತನ್ನಿಂದ ‘ಅಕ್ರಮ ಲಾಭ’ ಪಡೆದಿರುವ ಕೆಲವು ಪ್ರಭಾವಿ ರಾಜಕಾರಣಿಗಳ ಹೆಸರನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಾನೆ.

ಮನ್ಸೂರ್‌ ಖಾನ್‌ನನ್ನು ಶನಿವಾರ ವಶಕ್ಕೆ ಪಡೆದ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದು, ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ಮತ್ತು ಚಾಮರಾಜಪೇಟೆ ಶಾಸಕ ಜಮೀರ್‌ ಅಹಮದ್‌ ಅವರಲ್ಲದೆ, ಇನ್ನೂ ಕೆಲವು ಪ್ರಭಾವಿ ರಾಜಕಾರಣಿಗಳ ಹೆಸರನ್ನು ಹೇಳಿದ್ದಾನೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಅನೇಕ ರಾಜಕಾರಣಿಗಳು ತನ್ನಿಂದ ನೇರ ‘ಲಾಭ’ ಪಡೆದಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದ ಒಂದಿಬ್ಬರು ಪ್ರಭಾವಿಗಳ ಆಪ್ತ ವಲಯಕ್ಕೆ ರುಷುವತ್ತು ತಲುಪಿಸಲಾಗಿದೆ ಎಂಬ ಸಂಗತಿಯನ್ನು ಖಾನ್‌ ಬಿಚ್ಚಿಟ್ಟಿದ್ದಾನೆ. ‘ಬಂಧಿತನ ಹೇಳಿಕೆಯ ಸತ್ಯಾಸತ್ಯತೆಯ ಪರಿಶೀಲನೆ ನಡೆಯುತ್ತಿದೆ. ಆರೋಪಕ್ಕೆ ಪೂರಕವಾದ ದಾಖಲೆಗಳಿವೆಯೇ ಎಂಬುದನ್ನು ಶೋಧಿಸಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ನಗರದ ರಾಜಕಾರಣಿಯೊಬ್ಬರ ವಿರುದ್ಧ ಆರೋಪಿ ಅಸಮಾಧಾನ ಹೊಂದಿದ್ದು, ಅವರು ಅಕ್ಷರಶಃ ತನ್ನನ್ನು ಸುಲಿಗೆ ಮಾಡಿದ್ದಾರೆ. ರೌಡಿಗಳು, ಪಾಲಿಕೆ ಸದಸ್ಯರು ಮತ್ತು ಮೌಲ್ವಿಗಳ ಹೆಸರಿನಲ್ಲಿ ವಸೂಲು ಮಾಡಿದ್ದಾರೆ. ಭಾರಿ ಬೆಲೆಯ ಉಡುಗೊರೆಗಳನ್ನು ಪಡೆದಿದ್ದಾರೆ. ಮನ್ಸೂರ್‌ ಹೇಳಿಕೆಗಳನ್ನು ಜಾಗರೂಕತೆಯಿಂದ ದಾಖಲು ಮಾಡಿಕೊಳ್ಳಲಾಗುತ್ತಿದೆ’ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಜಮೀರ್‌ ಅಹಮದ್‌ ಜತೆ ನಡೆಸಿರುವ ವ್ಯವಹಾರ ಪಾರದರ್ಶಕವಾಗಿದೆ. ಅವರ ಜತೆ ತೆರೆಮರೆಯಲ್ಲಿ ಯಾವುದೇ ವ್ಯವಹಾರ ನಡೆಸಿಲ್ಲ ಎಂದು ಐಎಂಎ ಮಾಲೀಕ ಖಚಿತಪಡಿಸಿದ್ದಾನೆ.

ಈತನ ಅಕ್ರಮ ವ್ಯವಹಾರಕ್ಕೆ ಸಹಕರಿಸಿದ್ದ ಅಧಿಕಾರಿಗಳ ಬಗ್ಗೆ ಮಾಹಿತಿ ಇದ್ದು, ಆ ಬಗ್ಗೆ ವಿಚಾರಣೆ ನಡೆಸಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬಿಗಿ ಭದ್ರತೆಯಲ್ಲಿ ವಿಚಾರಣೆ

* ಭಾರಿ ಭದ್ರತೆಯಲ್ಲಿ ಮನ್ಸೂರ್‌ ಖಾನ್‌ ವಿಚಾರಣೆ ನಡೆಯುತ್ತಿದೆ. ಎಸ್‌ಐಟಿ ಅಧಿಕಾರಿಗಳ ಮೂರು ತಂಡಗಳು ಆತನನ್ನು ಪ್ರಶ್ನಿಸುತ್ತಿದೆ.

* ಬಂಧಿತ ಆರೋಪಿ ಆರೋಗ್ಯದ ಮೇಲೆ ನಿಗಾ ಇಡಲು ತಜ್ಞ ವೈದ್ಯರ ತಂಡ ರಚಿಸಲಾಗಿದೆ. ದಿನದ 24 ಗಂಟೆಯೂ ವೈದ್ಯರು ಲಭ್ಯರಿದ್ದಾರೆ.

* ಖಾನ್‌ಗೆ ಕೊಡುತ್ತಿರುವ ತಿಂಡಿ, ಊಟ, ಕಾಫಿ, ಚಹಾ ಹಾಗೂ ನೀರನ್ನು ಪರೀಕ್ಷಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

* ಎಸ್‌ಐಟಿ ಮುಖ್ಯಸ್ಥ ಬಿ.ಆರ್‌. ರವಿಕಾಂತೇಗೌಡ, ಅಪರಾಧ ವಿಭಾಗದ ಡಿಸಿ‍ಪಿ ಗಿರೀಶ್‌ ವಿಚಾರಣೆ ನೇತೃತ್ವ ವಹಿಸಿದ್ದಾರೆ.

Post Comments (+)