ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರವು ಮಾಡಲಿರುವ ಮರಗಳಿಗೆ ಗುರುತು

ಎತ್ತರಿಸಿದ ಮಾರ್ಗ ನಿರ್ಮಾಣಕ್ಕೆ ಸದ್ದಿಲ್ಲದ ಸಿದ್ಧತೆ: ಪರಿಸರಪ್ರಿಯರಿಂದ ವಿರೋಧ
Last Updated 26 ಜನವರಿ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ಎತ್ತರಿಸಿದ ಮಾರ್ಗ ನಿರ್ಮಿಸಲು ಉದ್ದೇಶಿಸಲಾದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮಾರ್ಗದಲ್ಲಿ ಮರಗಳಿಗೆ ಗುರುತು ಹಾಕುವ ಕೆಲಸ ಆರಂಭಿಸಲಾಗಿದ್ದು, ಈ ನಡೆಗೆ ಪರಿಸರ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಬಸವೇಶ್ವರ ವೃತ್ತ ಹಾಗೂ ಮೇಖ್ರಿ ವೃತ್ತದ ನಡುವಿನ ಮಾರ್ಗದಲ್ಲಿಯೇ 144 ಮರಗಳನ್ನು ತೆರವುಗೊಳಿಸಲು ಉದ್ದೇಶಿಸಲಾಗಿದೆ.

‘ಕಾನೂನು ಪ್ರಕಾರ ಅನುಮತಿ ಪಡೆಯದೇ ಮರ ಮುಟ್ಟುವುದೂ ತಪ್ಪು. ಈ ಬಗ್ಗೆ ನ್ಯಾಯಾಲಯಗಳ ಸ್ಪಷ್ಟ ಆದೇಶ ಇದೆ. ಹಾಗಿದ್ದರೂ ಮರಗಳಿಗೆ ಗುರುತು ಹಾಕಲು ಮುಂದಾಗಿರುವುದು ಕೋರ್ಟ್ ಆದೇಶದ ಉಲ್ಲಂಘನೆ’ ಎಂದುಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ ಸಂಸ್ಥಾಪಕ ಲಿಯೊ ಸಲ್ದಾನ ಆಕ್ರೋಶ ವ್ಯಕ್ತಪಡಿಸಿದರು.

ಸಿಟಿಜನ್‌ ಫಾರ್‌ ಬೆಂಗಳೂರು ಸಂಘಟನೆ ಈಗಾಗಲೇ ಐದು ಸಾವಿರಕ್ಕೂ ಹೆಚ್ಚು ಪೋಸ್ಟ್‌ ಕಾರ್ಡ್‌ಗಳನ್ನು ಮುಖ್ಯಮಂತ್ರಿಗೆ ರವಾನಿಸಿದೆ.

‘ಇಂಥ ಬೃಹತ್‌ ಯೋಜನೆಯನ್ನು ಜಾರಿಗೆ ತರುವಾಗ ಜನಾಭಿಪ್ರಾಯವನ್ನೂ ಕೇಳದೆ ತನ್ನದೇ ಆದ ರೀತಿಯಲ್ಲಿ ಮುಂದುವರಿದಿದೆ. ಇಂಥ ನೀತಿ ನಿರೂಪಕರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ’ ಎಂದು ಸಲ್ಡಾನ ಹೇಳಿದರು.

ಗುರುತು ಹಾಕುವುದು ಮರ ಕಡಿಯಲೋ ಅಥವಾ ಅಲ್ಲಿಂದ ಸ್ಥಳಾಂತರಿಸಲೋ ಎಂಬುದು ಆ ಕಾರ್ಯ ನಡೆಸುತ್ತಿದ್ದವರಿಗೂ ಖಚಿತವಾಗಿಲ್ಲ. ‘ಪರಿಸರ ಪರಿಣಾಮದ ವರದಿ ಬಂದ ಬಳಿಕ ಈ ಬಗ್ಗೆ ಮೇಲಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಈ ಕಾಮಗಾರಿ ವಹಿಸಿಕೊಂಡ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಯೊಬ್ಬರು ಹೇಳಿದರು.

ವಿಮಾನ ಹಾರಾಟಕ್ಕೂ ತೊಂದರೆ: ‘ಈ ಮಾರ್ಗದಲ್ಲಿ ಬೇಕಾಬಿಟ್ಟಿ ಮರ ಕಡಿದರೆ ಮುಂದೆ ವಿಮಾನ ಹಾರಾಟಕ್ಕೇ ಸಂಚಕಾರ ಒದಗಲಿದೆ. ಗಾಳಿಯಲ್ಲಿ ಸೇರುವ ಕಾರ್ಬನ್‌ ಕಣ, ಹೊಗೆ, ಮಾಲಿನ್ಯಕಾರಕ ಅಂಶಗಳನ್ನೊಳಗೊಂಡ ದೂಳು, ಮಂಜು ದಟ್ಟವಾಗಿ ‘ಹೊಂಜು’ ಸೃಷ್ಟಿಯಾಗಲಿದೆ. ಇದರಿಂದ ನಿರಂತರವಾಗಿ ವಿಮಾನ ಟೇಕಾಫ್‌ ಮತ್ತು ಲ್ಯಾಂಡಿಂಗ್‌ಗೆ ತೊಂದರೆ ಉಂಟುಮಾಡಲಿದೆ. ಒಂದೆಡೆ ನಿಲ್ದಾಣಕ್ಕೆ ಹೋಗುವ ಹಾದಿ ಸುಗಮವಾಗಬಹುದು. ಆದರೆ, ವಿಮಾನ ಸಂಚಾರದ ಮೇಲೇ ಪರಿಣಾಮವಾಗಲಿದೆ’ ಎಂದರುಪರಿಸರ ತಜ್ಞ ಹಾಗೂ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಯಲ್ಲಪ್ಪ ರೆಡ್ಡಿ.

‘ಒಂದು ವೇಳೆ ಮರ ತೆರವುಗೊಳಿಸಲು ಮುಂದಾದರೆ ನಗರದಲ್ಲಿ ಆಮ್ಲಜನಕದ ಮಟ್ಟ ಗಣನೀಯವಾಗಿ ಇಳಿಮುಖವಾಗಲಿದೆ. ಈ ಯೋಜನೆಯು ಇಲ್ಲಿನ ಪರಿಸರ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮಾತ್ರವಲ್ಲ, ಈ ಪ್ರದೇಶವಿಡೀ ರೋಗಗಳ ಗೂಡಾಗಲಿದೆ. ಮರ ತೆಗೆಯುವ ಕೆಟ್ಟ ಆಲೋಚನೆಗೆ ಬರುವುದಕ್ಕೆ ಮುನ್ನ ಇನ್ನೊಮ್ಮೆ ಪರಿಶೀಲಿಸುವುದು ಉತ್ತಮ. ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ’ ಎಂದು ಅವರು ಹೇಳಿದರು.

ತಪ್ಪು ಹೆಜ್ಜೆ ಇಟ್ಟ ಸರ್ಕಾರ ‘ಉದ್ದೇಶಿತ ಮಾರ್ಗ ನಿರ್ಮಾಣವಾಗುವುದಾದರೆ ಸುಮಾರು 2 ಸಾವಿರಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಅದು ಒಂದೋ ಕಡಿದುರುಳಿಸುವುದು ಅಥವಾ ಸ್ಥಳಾಂತರಿಸುವುದು. ಎಲ್ಲ ಮರಗಳನ್ನು ಸ್ಥಳಾಂತರಿಸುವುದು ಅಸಾಧ್ಯ. ಮರಗಳು ತುಂಬಾ ಹಳೆಯವಾಗಿದ್ದಲ್ಲಿ ಹೊಸ ಸ್ಥಳಗಳಲ್ಲಿ ಜೀವ ತಳೆಯುವುದು ಅಸಾಧ್ಯ. ಸರ್ಕಾರ ತುಂಬಾ ತಪ್ಪು ಹೆಜ್ಜೆ ಇಟ್ಟಿದೆ’ ಎಂದರು ಸಸ್ಯತಜ್ಞ ವಿಜಯ್‌ ನಿಶಾಂತ್‌.

ಸಿಟಿಜನ್‌ ಫಾರ್‌ ಬೆಂಗಳೂರು ಸಂಘಟನೆಯ ಮುಖಂಡ ಶ್ರೀನಿವಾಸ ಅಲವಲ್ಲಿ ಪ್ರತಿಕ್ರಿಯಿಸಿ, ‘ನಾಗರಿಕ ಸಂಘಟನೆಗಳು ಉಕ್ಕಿನ ಸೇತುವೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು. ಆ ಯೋಜನೆಯನ್ನು ಕೈಬಿಡಲಾಗಿತ್ತು. ಅಂತಹ ಯೋಜನೆಗೆ ಮತ್ತೆ ಜೀವ ನೀಡಿರುವುದು ಸೋಜಿಗ ಉಂಟುಮಾಡಿದೆ’ ಎಂದು ಹೇಳಿದರು.

‘ಒಂದೆಡೆ ಜನರ ಸಲಹೆ ಪಡೆಯಲು ವಿಧಾನಸೌಧದ ಬಾಗಿಲು ತೆರೆದಿದೆ ಎಂದು ಹೇಳುವ ಸರ್ಕಾರ, ಇನ್ನೊಂದೆಡೆ ಯೋಜನೆಯನ್ನು ಸದ್ದಿ
ಲ್ಲದೇ ಕೈಗೆತ್ತಿಕೊಂಡಿದೆ. ಈ ಯೋಜನೆಗೆ ಪರಿಸರ ಇಲಾಖೆಯಿಂದ ಆಕ್ಷೇಪವಿದೆ. ಅದಕ್ಕಾಗಿ ಸರ್ಕಾರವು ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಮೊರೆ ಹೋಗಿದೆ. ಆದರೆ, ಈ ಪ್ರಾಧಿಕಾರಕ್ಕೆ ಈ ಯೋಜನೆ ಸಂಬಂಧಿಸಿ ನಿರಾಕ್ಷೇಪಣಾ ಪ್ರಮಾಣ
ಪತ್ರ ಕೊಡುವ ಅಧಿಕಾರ ಇಲ್ಲ. ಇದಕ್ಕಾಗಿಯೇ ನಮ್ಮ ಸಂಘಟನೆ ಹಲವು ಸಂಘಟನೆಗಳ ಜತೆ ಸೇರಿ ಈ ಯೋಜನೆ ಕೈಬಿಡುವಂತೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT