ವಿಷಾದಗೀತೆ ಜತೆ ‘ಕೃಷ್ಣ’ ನಡಿಗೆ

4
ಕೊಡೈಕೆನಾಲ್ ಪರಿಸರ ಮಾಲಿನ್ಯ ವಿರೋಧಿ ಚಳವಳಿಗೆ ಹೊಸಶಕ್ತಿ

ವಿಷಾದಗೀತೆ ಜತೆ ‘ಕೃಷ್ಣ’ ನಡಿಗೆ

Published:
Updated:
ನಗರದಲ್ಲಿ ಗುರುವಾರ 'ಐಐಎಂಬಿ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರ ಟಿ.ಎಂ. ಕೃಷ್ಣ ಉಪನ್ಯಾಸ ನೀಡಿದರು -ಪ್ರಜಾವಾಣಿ ಚಿತ್ರ

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳ ಉತ್ಪನ್ನಗಳನ್ನು ಬಹಿಷ್ಕರಿಸುವುದರ ಬದಲು, ಪ್ರಶ್ನಿಸುವ ಮೂಲಕ ಅವುಗಳ ಹುನ್ನಾರಗಳ ವಿರುದ್ಧ ಆಂದೋಲನ ರೂಪಿಸಬೇಕಿದೆ ಎಂದು ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕ ಟಿ.ಎಂ. ಕೃಷ್ಣ ಹೇಳಿದರು.

ಕೊಡೈಕೆನಾಲ್‌ನಲ್ಲಿನ ಪರಿಸರ ಮಾಲಿನ್ಯದ ಬಗ್ಗೆ ಜನರ ಗಮನಸೆಳೆಯುವ ಉದ್ದೇಶದಿಂದ ರೂಪಿಸಲಾದ Kodaikanal: still wont ಗೀತೆಯ‌ನ್ನು ಭಾರತೀಯ‌ ಆಡಳಿತ ಸಂಸ್ಥೆಯಲ್ಲಿ ಪ್ರಸ್ತುತಪಡಿಸಿದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

‘ನಮಗೆ ಹಿತಾನುಭವ ನೀಡುವ ಸವಲತ್ತುಗಳು ಮತ್ತೊಬ್ಬರ ಸಂಕಟಕ್ಕೆ ಕಾರಣವಾಗಿರಬಹುದು ಎನ್ನುವ ನೈತಿಕತೆ ಈ ಕ್ಷಣದ ಅಗತ್ಯ’ ಎಂದವರು ಪ್ರತಿಪಾದಿಸಿದರು.

ಶುದ್ಧೀಕರಿಸಲು ಒತ್ತಾಯ: ಥರ್ಮಾಮೀಟರ್ ಉತ್ಪಾದಿಸುತ್ತಿದ್ದ ಕಾರ್ಖಾನೆ ಕೊಡೈಕೆನಾಲ್ ಪರಿಸರದಲ್ಲಿ ಪಾದರಸದ ವಿಷವನ್ನು ದೊಡ್ಡ ಪ್ರಮಾಣದಲ್ಲಿ ಸೇರಿಸಿದೆ. ಈ ಮಾಲಿನ್ಯವನ್ನು ಶುದ್ಧೀಕರಿಸುವ ಹೊಣೆಗಾರಿಕೆಯನ್ನು ಮಾಲಿನ್ಯಕ್ಕೆ ಕಾರಣರಾದವರೇ ಹೊರುವಂತೆ ನಾವೆಲ್ಲ ಒತ್ತಾಯಿಸಬೇಕಿದೆ ಎಂದರು.

‘ಬಹುರಾಷ್ಟ್ರೀಯ ಕಂಪನಿಗಳ ಕಬಂಧ ಬಾಹುಗಳ ಕುರಿತು ಮಾತನಾಡಿದ ಅವರು, ವಿಶ್ವಸಂಸ್ಥೆಗಿಂತಲೂ ಮಿಗಿಲಾದ ಈ ಸಂಸ್ಥೆಗಳು ನಮಗೆ ಯಾವುದು ಹಿತ-ಅಹಿತ ಎನ್ನುವುದನ್ನು ತೀರ್ಮಾನಿಸುತ್ತಿವೆ. ನಾವು ಆಡಬೇಕಾದ‌ ಮಾತು, ನಮ್ಮ ರಕ್ತದಲ್ಲಿನ ಗ್ಲುಕೋಸ್ ಪ್ರ‌ಮಾಣವನ್ನೂ ನಿರ್ಣಯಿಸುತ್ತಿವೆ’ ಎಂದವರು ವಿಷಾದಿಸಿದರು.

ಪರಿಸರದ ವರ್ಣಭೇದ: ಕೊಡೈಕೆನಾಲ್‌ನ ಮಣ್ಣು ಮತ್ತು ನೀರಿನಲ್ಲಿ ಬೆರೆತಿರುವ ಪಾದರಸವನ್ನೊಳಗೊಂಡ ತ್ಯಾಜ್ಯಗಳನ್ನು ಶುದ್ಧೀಕರಿಸಲು ಅಂತರರಾಷ್ಟ್ರೀಯ ಮಾನದಂಡ ಅನುಸರಿಸಬೇಕಾಗಿದೆ. ಆದರೆ ಭಾರತದಂಥ ದೇಶಗಳಲ್ಲಿ ಪರಿಸರ ಶುಚಿಗೊಳಿಸುವ ಚಟುವಟಿಕೆಗಳು ಕಳಪೆಯಾಗಿರುತ್ತವೆ. ಈ 'ಪರಿಸರ ವರ್ಣಭೇದ'ದ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ Kodaikanal: still wont ಹಾಡಿನ ಆಂದೋಲನದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದರು.

ದಕ್ಷಿಣ ಭಾರತದ ಸುಂದರ ಗಿರಿಧಾಮದಲ್ಲಿ ಬಹುರಾಷ್ಟ್ರೀಯ ಸಂಸ್ಥೆ ಉಂಟುಮಾಡಿರುವ ಅನಾಹುತವನ್ನು ಚಿತ್ರಿಸುವ ಈ ಗೀತೆಯಲ್ಲಿ ಕೃಷ್ಣ ಅವರು ಕಾಣಿಸಿಕೊಂಡಿದ್ದಾರೆ ಹಾಗೂ ಹಾಡಿದ್ದಾರೆ. ಇದನ್ನು ‘ಯುಟ್ಯೂಬ್’ನಲ್ಲಿ ನೋಡಬಹುದು.

**

ಪರಿಹಾರ ಇನ್ನೂ ಸಿಕ್ಕಿಲ್ಲ

ಥರ್ಮಾಮೀಟರ್‌ಗಳನ್ನು ತಯಾರಿಸುವ ಕಾರ್ಖಾನೆ‌ ನಾಗರಿಕರ ಪ್ರತಿಭಟನೆಯಿಂದಾಗಿ 2001ರಲ್ಲಿ ಬಾಗಿಲು ಮುಚ್ಚಿದೆ. ಆದರೆ, ಈವರೆಗೂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸಮರ್ಪಕ ಪರಿಹಾರ ದೊರೆತಿಲ್ಲ ಎಂದು ಕೃಷ್ಣ ಅವರಿಗೆ ಸಂವಾದದಲ್ಲಿ ಜೊತೆಯಾಗಿದ್ದ ಚೆನ್ನೈನ ಪರಿಸರ ಕಾರ್ಯಕರ್ತ ನಿತ್ಯಾನಂದ‌ ಜಯರಾಮನ್ ಹೇಳಿದರು.

ಪಾದರಸದ ಸಂಪರ್ಕದಿಂದ 45 ಕಾರ್ಮಿಕರು ಸಾವಿಗೀಡಾಗಿದ್ದಾರೆ. ನೂರಾರು ಮಂದಿ ರೋಗಗ್ರಸ್ತರಾಗಿದ್ದಾರೆ. ಭ್ರೂಣಗಳ ಮೆದುಳಿನ ಬೆಳವಣಿಗೆಯ ಮೇಲೂ ಈ ಮಾಲಿನ್ಯ ದುಷ್ಪರಿಣಾಮ ಉಂಟು ಮಾಡಲಿದೆ ಎಂದರು.

ಹದಿನೈದು ವರ್ಷಗಳಿ‌ಂದ ನಡೆಯುತ್ತಿರುವ ಜನಾಂದೋಲನವನ್ನು ಮತ್ತೆ ಚುರುಕುಗೊಳಿಸಲಾಗಿದೆ. ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿ ಕೊಡೈಕೆನಾಲ್ ಪರಿಸರವನ್ನು ಶುದ್ಧೀಕರಿಸುವುದು, ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರ ಸಹಭಾಗಿತ್ವದಲ್ಲಿ ಪಾರದರ್ಶಕ ತನಿಖೆ ನಡೆಸುವುದು ನಮ್ಮ ಆಂದೋಲನದ ಬೇಡಿಕೆಗಳಾಗಿವೆ ಎಂದು ಹೇಳಿದರು. ಬಹುರಾಷ್ಟ್ರೀಯ ಕಂಪನಿಗಳನ್ನು ಪ್ರಶ್ನಿಸುವ ಈ ಆಂದೋಲನದಲ್ಲಿ ಎಲ್ಲ ಪ್ರಜ್ಞಾವಂತರು ದನಿಗೂಡಿಸಬೇಕಾಗಿದೆ ಎಂದವರು ಆಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !