‘ಇಸಂ’ಗಳಿಗೆ ತಲೆಬಾಗಬೇಕಿಲ್ಲ: ಬರಗೂರು

ಬುಧವಾರ, ಮಾರ್ಚ್ 20, 2019
25 °C

‘ಇಸಂ’ಗಳಿಗೆ ತಲೆಬಾಗಬೇಕಿಲ್ಲ: ಬರಗೂರು

Published:
Updated:
Prajavani

‌ಬೆಂಗಳೂರು: ‘ಪ್ರಕಾಶ್ ಕೊಡಗನೂರ್ ಅವರಂತಹ ಬರಹಗಾರರು ಯಾವುದೇ ‘ಇಸಂ’ಗಳಿಲ್ಲದೆ ಬರೆಯುವಂತಾಗಬೇಕೆಂಬ ಹಂಬಲದಲ್ಲಿರುವುದನ್ನು ಸಮಕಾಲೀನ ಬಿಕ್ಕಟ್ಟಿಗೆ ಉದಾಹರಿಸಬಹುದಾದರೂ ಇಸಂಗಳಿಗೆ ತಲೆಬಾಗದೆ ಅವುಗಳನ್ನು ಜೀರ್ಣಿಸಿಕೊಂಡು ಬರೆಯಬೇಕು’ ಎಂದು ಬರಗೂರು ರಾಮಚಂದ್ರಪ್ಪ ಆಶಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜನ ಪ್ರಕಾಶನ ಮತ್ತು ಪ್ರಕೃತಿ ಪ್ರಕಾಶನ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡಗನೂರ್ ಅವರ ‘ಏಟ್ಸ್ ಮತ್ತು ನಾನು’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಪಂಪನ ಕಾಲದಲ್ಲಿ ಯಾವ ಸಿದ್ಧಾಂತವಿತ್ತು? ಆದರೂ, ಮನುಷ್ಯ ಜಾತಿ ತಾನೊಂದೇ ಕುಲಂ ಎಂದು ಬರೆಯಲಿಲ್ಲವೆ? ಕುವೆಂಪು ಅವರ ಕೃತಿಗಳಲ್ಲಿ ಸಮಾಜವಾದದ ಆಶಯಗಳು ಅಡಗಿದ್ದವು. ಇದನ್ನು ಇಂದಿನವರು ಅರಿಯಬೇಕು’ ಎಂದು ಹೇಳಿದರು.

‘ಬರೆಯುವವರಿಗೆ ಜಾಗೃತ ಪ್ರಜ್ಞೆ ಮತ್ತು ತೊಡಗಿಸಿಕೊಳ್ಳುವಿಕೆ ಎರಡೂ ಇರಬೇಕು. ಇಲ್ಲದಿದ್ದರೆ ‘ಕಾವ್ಯ ಕಟ್ಟುವ ಕಲೆ’ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಕೇವಲ ಭಾವಾನಾತ್ಮಕವಾಗಿ ಇಲ್ಲವೆ ವಿಚಾರಾತ್ಮಕವಾಗಿ ಉಮ್ಮಳಿಸುವ ಸಾಲುಗಳನ್ನು ಗೀಚುತ್ತಾ ಹೋದರೆ ಕಾವ್ಯವಾಗದು. ಇದಕ್ಕೆ ಬುದ್ಧಿ ಮತ್ತು ಭಾವದ ಸಮನ್ವಯದ ಜೊತೆಗೆ ಕಲಾತ್ಮಕತೆಯ ಕೌಶಲ ಇದ್ದರೆ ಕಾವ್ಯ ಸ್ಫಟಿಕದಂತೆ ರಾರಾಜಿಸುತ್ತದೆ’ ಎಂದು ವಿವರಿಸಿದರು.

ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ, ‘ಶೋಷಿತ, ಅಲ್ಪಸಂಖ್ಯಾತ, ದಲಿತ ಮತ್ತಿತರ ಸಂಘಟನೆಗಳ ಸಂಘಟಕರು ಆದರ್ಶ, ಹೋರಾಟದ ಮುಖವಾಡಗಳನ್ನು ಧರಿಸಿ ಸಂಘಟನಾ ಭಯೋತ್ಪಾದಕರಾಗಿರುವ ಕುರಿತು ಪ್ರಕಾಶ್‌ ತಮ್ಮ ಕವಿತೆಗಳಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !