ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ನೂರಾರು; ಬಗೆಹರಿದವು ಹತ್ತಾರು!

ಹಲವು ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ * ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ಹೊಸ ಯೋಜನೆ
Last Updated 5 ಜನವರಿ 2019, 20:22 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಒಳಚರಂಡಿ ಯಾವಾಗಲೂ ಕಟ್ಟಿಕೊಳ್ಳುತ್ತದೆ. ಸಂಚಾರ ದಟ್ಟಣೆಯಂತೂ ನಿತ್ಯದ ಗೋಳು. ಕಸದ ನಿರ್ವಹಣೆಯೂ ಸಮರ್ಪಕವಾಗಿ ಆಗುತ್ತಿಲ್ಲ...

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳ ನಿವಾಸಿಗಳನ್ನು ದಶಕಗಳಿಂದ ಕಾಡುತ್ತಿರುವ ಪ್ರಮುಖ ಸಂಕಟಗಳಿವು. ಈ ಸಮಸ್ಯೆಗಳಿಂದ ಹೈರಾಣಾಗಿದ್ದ ಸ್ಥಳೀಯ ನಿವಾಸಿಗಳಲ್ಲಿ ಪರಿಹಾರ ಸಿಗುವ ಹೊಸ ಭರವಸೆ ಮೂಡಿದೆ.

ಇದಕ್ಕೆ ಅವಕಾಶ ಕಲ್ಪಿಸಿದ್ದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ವತಿಯಿಂದ ಪಾಟರಿ ಟೌನ್‌ನಲ್ಲಿ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮ. ಜನರ ಅಹವಾಲುಗಳನ್ನು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿ ವರ್ಗಕ್ಕೆ ತಲುಪಿಸಲುಈ ಕಾರ್ಯಕ್ರಮ ವೇದಿಕೆ ಒದಗಿಸಿತು. ಮುಖಾಮುಖಿ ಸಂವಾದದ ಮೂಲಕ ಸಮಸ್ಯೆಯ ಗಂಭೀರತೆಯನ್ನು ಮನದಟ್ಟುಮಾಡುವುದಕ್ಕೂ ನೆರವಾಯಿತು.

ಜನರ ಅಹವಾಲುಗಳನ್ನು ಶಾಂತಚಿತ್ತದಿಂದ ಆಲಿಸಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ಇಲ್ಲಿನ ವಾರ್ಡ್‌ಗಳ ಪಾಲಿಕೆ ಸದಸ್ಯರು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಅನೇಕ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ವಾಗ್ದಾನ ನೀಡಿದರು.

ಭಾರತೀ ನಗರ, ರಾಬರ್ಟ್‌ಸನ್‌ ರಸ್ತೆ ಬಳಿಯೇ ಕಸ ರಾಶಿ ಹಾಕುತ್ತಾರೆ. ಹಸಿ ಮತ್ತು ಒಣ ಕಸ ವಿಂಗಡಣೆ ಮಾಡಿಕೊಟ್ಟರೂ ಪೌರ ಕಾರ್ಮಿಕರು ಅದನ್ನು ಮತ್ತೆ ಮಿಶ್ರ ಮಾಡುತ್ತಾರೆ. ಕೆಲವರಂತೂ ವಾಹನಗಳಲ್ಲಿ ಕಸ ತಂದು ರಸ್ತೆ ಬದಿ ಬಿಸಾಡುತ್ತಾರೆ ಎಂದು ನಳಿನಿ ಅಯ್ಯರ್ ದೂರಿದರು.

ಪ್ರಾಮಿನಂಟ್‌ ರಸ್ತೆ ಬಳಿಯೂ ಕಸ ರಾಶಿ ಹಾಕುತ್ತಾರೆ. ಬೆಸ್ಕಾಂನವರು ಗಿಡಮರಗಳ ಕೊಂಬೆ ಕತ್ತರಿಸಿದ ಬಳಿಕ ಕಸವನ್ನು ಹಾಗೆಯೇ ಬಿಟ್ಟು ಹೋಗುತ್ತಾರೆ. ಪೌರಕಾರ್ಮಿಕರು ಅವುಗಳನ್ನು ತೆರವುಗೊಳಿಸುವುದಿಲ್ಲ ಎಂದು ಜುನೇದಾ ಜಯಂತ್‌ ಬೇಸರ ವ್ಯಕ್ತಪಡಿಸಿದರು.

ಪೌರಕಾರ್ಮಿಕರು ಮಧ್ಯಾಹ್ನ 12 ಗಂಟೆ ಒಳಗೆ ಕಸವನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ, ಕೆಲವರು ಮಧ್ಯಾಹ್ನ 12.30ರ ನಂತರ ಕಸ ತಂದು ಸುರಿಯುತ್ತಾರೆ ಇದರಿಂದಾಗಿ ಸಮಸ್ಯೆ ಎದುರಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ಮೇಲೆ ನಿಗಾ ಇಡಲು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಇಬ್ಬರು ಮಾರ್ಷಲ್‌ಗಳು ಮಾತ್ರ ಇದ್ದಾರೆ. ಮಾರ್ಷಲ್‌ಗಳ ಸಂಖ್ಯೆ ಹೆಚ್ಚಿಸಬೇಕಾಗಿದೆ. ಕಸ ರಾಶಿ ಹಾಕುವ ಕಡೆಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಪುಲಿಕೇಶಿನಗರ ವಾರ್ಡ್‌ ಪಾಲಿಕೆ ಸದಸ್ಯ ಅಬ್ದುಲ್‌ ರಕೀಬ್‌ ಝಾಕೀರ್‌ ತಿಳಿಸಿದರು.

‘ಮೇಲ್ವಿಚಾರಕರು ಬದಲಾಗಿದ್ದರಿಂದ ಕಸ ವಿಲೇವಾರಿ ವ್ಯವಸ್ಥೆಯಲ್ಲಿ ತೊಡಕು ಎದುರಾಗಿದ್ದು ನಿಜ. ಇನ್ನು ಈ ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ’ ಎಂದು ಪಾಲಿಕೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಅಧಿಕಾರಿ ತಿಳಿಸಿದರು.

ಪುಲಿಕೇಶಿನಗರ ವಾರ್ಡ್‌ನಲ್ಲಿ ಅನೇಕ ಕಡೆ ಮ್ಯಾನ್‌ಹೋಲ್‌ಗಳು 50–60 ವರ್ಷ ಹಳೆಯವು. ಕಿತ್ತುಹೋಗಿರುವ ಅವುಗಳನ್ನು ದುರಸ್ತಿಪಡಿಸಬೇಕು ಎಂದು ಗಂಗಾಧರನ್‌ ಒತ್ತಾಯಿಸಿದರು.

ಎಸ್‌.ಕೆ.ಗಾರ್ಡನ್‌ನ ಕೆಲವೆಡೆ ಪದೇ ಪದೇ ಒಳಚರಂಡಿ ಕಟ್ಟಿಕೊಳ್ಳುತ್ತದೆ. ಇಲ್ಲಿ ಮೂರು ಒಳಚರಂಡಿ ಕೊಳವೆಗಳೂ ಭರ್ತಿಯಾಗುತ್ತವೆ ಎಂದು ಶೇಖ್‌ ಇಸ್ಮಾಯಿಲ್‌ ಹಾಗೂ ಆದರ್ಶ ಸಂಪತ್‌ ಗಮನ ಸೆಳೆದರು. ಗಾಂಧಿಗ್ರಾಮದಲ್ಲೂ ಚೇಂಬರ್‌ ಕಟ್ಟಿಕೊಳ್ಳುತ್ತದೆ ಎಂದು ಜ್ಯೋತಿ ದೂರಿದರು.

ವಾರ್ಡ್‌ನ ಬಹುತೇಕ ಕಡೆ ಒಳಚರಂಡಿ ಮೇಲ್ದರ್ಜೆಗೇರಿಸಲಾಗಿದೆ. ಕೆಲವು ಕಡೆ ಮ್ಯಾನ್‌ ಹೋಲ್‌ ದುರಸ್ತಿ ಬಾಕಿ ಇದೆ. ಅವುಗಳನ್ನು ಶೀಘ್ರವೇ ದುರಸ್ತಿ ಮಾಡಿಸುವುದಾಗಿ ಪಾಲಿಕೆ ಸದಸ್ಯ ಮೊಹಮ್ಮದ್‌ ಜಮೀರ್‌ ಷಾ ಭರವಸೆ ನೀಡಿದರು.

‘ಒಳಚರಂಡಿ ಕಟ್ಟಿಕೊಳ್ಳುವ ಸಮಸ್ಯೆಯ ಅರಿವಿದೆ. ರಾಬರ್ಟ್ಸನ್‌ ಟೌನ್‌ ಮತ್ತು ಮುನೀಶ್ವರ ದೇವಸ್ಥಾನ ಬಳಿ ಶೇ 80ರಷ್ಟು ಒಳಚರಂಡಿ ಕೊಳವೆಗಳನ್ನು ಬದಲಾಯಿಸಲಾಗಿದೆ. ಬಂಬೂಬಜಾರ್‌ ಬಳಿಯೂ ಕಾಮಗಾರಿ ನಡೆದಿದೆ. ಮುಂದಿನ ಬಜೆಟ್‌ನಲ್ಲಿ ಈ ಪ್ರದೇಶದ ಸಬ್‌ಲೈನ್‌ನ ಕೊಳವೆಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಿದ್ದೇವೆ’ ಎಂದು ಜಲಮಂಡಳಿ ಅಧಿಕಾರಿ ಸುಹಾಸ್‌ ಮಾಹಿತಿ ನೀಡಿದರು.

ಲಿಂಗರಾಜಪುರ ರೈಲ್ವೆ ಅಂಡರ್‌ಪಾಸ್‌ ಬಳಿ ನಿತ್ಯವೂ ಟ್ರಾಫಿಕ್‌ ಜಾಮ್‌ನಿಂದ ವಾಹನ ಸವಾರರು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಈ ಪರಿಸರದಲ್ಲಿ ಐದಾರು ಶಾಲೆಗಳಿವೆ. ವಿದ್ಯಾರ್ಥಿಗಳಿಗೂ ಅನನುಕೂಲವಾಗುತ್ತಿದೆ. ಆಂಬುಲೆನ್ಸ್‌ಗಳು ಇಲ್ಲಿನ ದಟ್ಟಣೆಯಲ್ಲಿ ಸಿಲುಕಿಕೊಳ್ಳುತ್ತವೆ ಎಂದು ಜಾನ್‌ ಫ್ರಾನ್ಸಿಸ್‌ ಸಮಸ್ಯೆಯ ಗಂಭೀರತೆ ಬಿಚ್ಚಿಟ್ಟರು.

ಇಲ್ಲಿ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸುವಂತೆ ಸಂಚಾರ ವಿಭಾಗದ ಪೊಲೀಸರಿಗೆ ಶಾಸಕರು ಸೂಚಿಸಿದರು.

‘ಸಿ.ಎಲ್‌ ರಸ್ತೆಯಿಂದ ಟ್ಯಾನರಿ ರಸ್ತೆವರೆಗೆ 60 ಅಡಿ ರಸ್ತೆ ನಿರ್ಮಿಸುವ ಪ್ರಸ್ತಾವ ಇದೆ. ಇದನ್ನು ಆದಷ್ಟು ಬೇಗ ಜಾರಿಗೊಳಿಸಲಿದ್ದೇವೆ. ಇದರಿಂದ ಲಿಂಗರಾಜಪುರ ಹಾಗೂ ನಾಗವಾರ ಕಡೆಗೆ ಕಡೆಗೆ ಹೋಗುವ ವಾಹನ ಸವಾರರಿಗೂ ಅನುಕೂಲವಾಗಲಿದೆ’ ಎಂದರು.

ಎ.ಕೆ.ಎಸ್‌ ಜಂಕ್ಷನ್‌ನಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕು. ಇಲ್ಲಿ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಕೋಮಲಾ ಜಂಕ್ಷನ್‌ನಲ್ಲಿ ಸಿಗ್ನಲ್‌ಮುಕ್ತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಮಸೀದಿ ರಸ್ತೆಯ ಸೇತುವೆ ವಿಸ್ತರಣೆ ಆಗಬೇಕು ಎಂದು ಮುರಳಿ ಒತ್ತಾಯಿಸಿದರು.

ರಂಕಾನಗರದಲ್ಲಿ ರಸ್ತೆಗೆ ಅರ್ಧಂಬರ್ಧ ಡಾಂಬರ್‌ ಹಾಕಿದ್ದಾರೆ. ಇಲ್ಲಿ ಪೂರ್ತಿ ರಸ್ತೆಗೆ ಡಾಂಬರು ಹಾಕಬೇಕು ಎಂದು ಡಾ.ಮಲಿಕ್‌ ಇಂಗಳಗಿ ಮನವಿ ಮಾಡಿದರು. ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ವಾಹನಗಳು ವೇಗವಾಗಿ ಸಾಗಿ ಬರುತ್ತಿವೆ. ಅಲ್ಲಲ್ಲಿ ರಸ್ತೆಯುಬ್ಬುಗಳನ್ನು ನಿರ್ಮಿಸುವಂತೆ ಕೆಲವರು ಸಲಹೆ ನೀಡಿದರು.

ಕ್ಷೇತ್ರದ ಅನೇಕ ಕಡೆ ನೀರು ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಎಸ್‌.ಕೆ.ಗಾರ್ಡನ್‌ನ ಜ್ಯೋತಿ, ಕುಶಾಲನಗರ ವಾರ್ಡ್‌ನ ಮೆಹಬೂಬ್‌, ಎ.ಕೆ.ಕಾಲೊನಿ ಸಗಾಯ್‌ರಾಜ್‌ ದೂರಿದರು. ಇದಕ್ಕೆ ಕುಶಾಲನಗರ ವಾರ್ಡ್‌ನ ಪಾಲಿಕೆ ಸದಸ್ಯೆ ಉಮೇಸಲ್ಮ ಹಾಗೂ ಮುನೇಶ್ವರ ನಗರವಾರ್ಡ್‌ನ ಸದಸ್ಯೆ ಸೈಯದ್‌ ಸಾಜಿದಾ ಅವರೂ ಧ್ವನಿಗೂಡಿಸಿದರು.

‘ನೀರಿನ ಸಮಸ್ಯೆ ನೀಗಿಸಲು ನೆಲಮಟ್ಟದ ಜಲಾಗರ’

‘ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಗಾಯಪುರದಲ್ಲಿ 50 ಲಕ್ಷ ಲೀಟರ್‌ ಸಾಮರ್ಥ್ಯದ ನೆಲಮಟ್ಟದ ಜಲಾಗರ ನಿರ್ಮಿಸಲಿದ್ದೇವೆ. ₹ 10 ಕೋಟಿ ವೆಚ್ಚದ ಈ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ’ ಎಂದು ಶಾಸಕ ಅಖಂಡ ಆರ್‌.ಶ್ರೀನಿವಾಸಮೂರ್ತಿ ತಿಳಿಸಿದರು.

‘ಈ ಜಲಾಗರ ನಿರ್ಮಾಣವಾದ ಬಳಿಕ ಕ್ಷೇತ್ರದ ಪ್ರತಿವಾರ್ಡ್‌ನಲ್ಲೂ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಸಾಧ್ಯವಾಗಲಿದೆ’ ಎಂದರು.

‘ಕ್ಷೇತ್ರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ನೀಗಿಸುವ ಉದ್ದೇಶದಿಂದ ಟ್ಯಾನರಿರಸ್ತೆಯಿಂದ ನಾಗವಾರ ವರ್ತುಲ ರಸ್ತೆವರೆಗೆ 80 ಅಡಿ ಅಗಲದ ರಸ್ತೆ ನಿರ್ಮಿಸುವ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ₹ 48 ಕೋಟಿ ವೆಚ್ಚದ ಈ ಕಾಮಗಾರಿಗೆ ಶೀಘ್ರವೇ ಟೆಂಡರ್‌ ಕರೆಯಲಾಗುತ್ತದೆ’ ಎಂದು ಶಾಸಕರು ಮಾಹಿತಿ ನೀಡಿದರು.

‘ಆರ್‌.ಟಿ.ನಗರ ಪೊಲೀಸ್‌ ಠಾಣೆ ಬಳಿಯಿಂದ ದಿಣ್ಣೂರು ರಸ್ತೆವರೆಗೂ 80 ಅಡಿ ರಸ್ತೆ ನಿರ್ಮಿಸುವ ಪ್ರಸ್ತಾವ ಇದೆ’ ಎಂದರು.

ಮೆಟ್ರೊ ಮಾರ್ಗ: ‘ಮೆಟ್ರೊ ಸುರಂಗ ಮಾರ್ಗವೂ ಪಾಟರಿ ಟೌನ್‌ ಮೂಲಕ ಹಾದು ಹೋಗಲಿದೆ. ನಮ್ಮ ಕ್ಷೇತ್ರದಲ್ಲೂ ನಾಲ್ಕೈದು ಕಡೆ ಮೆಟ್ರೊ ನಿಲ್ದಾಣಗಳು ನಿರ್ಮಾಣವಾಗಲಿವೆ’ ಎಂದು ಅವರು ಮಾಹಿತಿ ನೀಡಿದರು.

‘ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ಏಳುಮಲೈ ಹೆಸರು’

‘ಸಗಾಯಪುರದಲ್ಲಿ ₹20 ಕೋಟಿ ವೆಚ್ಚದಲ್ಲಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಇದಕ್ಕೆ ಈಗಾಗಲೇ ₹ 10 ಕೋಟಿ ಮಂಜೂರಾಗಿದೆ. ಈ ಆಸ್ಪತ್ರೆಗೆ ಇತ್ತೀಚೆಗೆ ನಿಧನರಾದ ಪಾಲಿಕೆ ಸದಸ್ಯ ವಿ.ಏಳುಮಲೈ ಅವರ ಹೆಸರು ಇಡಲಿದ್ದೇವೆ’ ಎಂದು ಶಾಸಕರು ತಿಳಿಸಿದರು.

‘ಬೌರಿಂಗ್‌ ಆಸ್ಪತ್ರೆಯ ತಜ್ಞವೈದ್ಯರು ಈ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲೂ ಸೇವೆ ಒದಗಿಸಲಿದ್ದಾರೆ’ ಎಂದರು.

‘₹ 3 ಕೋಟಿ ವೆಚ್ಚದಲ್ಲಿ ಡಯಾಲಿಸಿಸ್‌ ಕೇಂದ್ರವನ್ನೂ ಆರಂಭಿಸಲಿದ್ದೇವೆ. ಕ್ಷೇತ್ರದ ಬಡವರಿಗೆ ಆರೋಗ್ಯ ಕಾರ್ಡ್‌ ವಿತರಿಸುವ ಕಾರ್ಯಕ್ರಮವನ್ನೂ ಶೀಘ್ರವೇ ಹಮ್ಮಿಕೊಳ್ಳಲಿದ್ದೇವೆ. ಬಡವರು ₹ 5 ಲಕ್ಷ ವರೆಗೆ ಉಚಿತ ಚಿಕಿತ್ಸೆ ಪಡೆಯಲು ಇದು ನೆರವಾಗಲಿದೆ’ ಎಂದರು.

‘₹ 7.80 ಕೋಟಿ ವೆಚ್ಚದಲ್ಲಿ ಕ್ರೀಡಾ ಸಮುಚ್ಚಯವನ್ನೂ ನಿರ್ಮಿಸಲಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT