ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಭಾವನೆಗಳೊಂದಿಗೆ ಆಟವಾಡುವ ಬಿಜೆಪಿ

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಟೀಕೆ
Last Updated 31 ಮಾರ್ಚ್ 2018, 9:09 IST
ಅಕ್ಷರ ಗಾತ್ರ

ಸಾಗರ: ಜಾತಿ–ಧರ್ಮಗಳ ಹೆಸರು, ಜನರನ್ನು ಒಡೆದು ಆಳುವುದೇ ಬಿಜೆಪಿಯ ಬಂಡವಾಳವಾಗಿದ್ದು, ಅದು ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಟೀಕಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ನ ಕಾರ್ಯಸೂಚಿಯ ಪ್ರಕಾರವೇ ಬಿಜೆಪಿ ಯಾವಾಗಲೂ ಕೆಲಸಮಾಡುವುದು. ಎಲ್ಲಾ ಜಾತಿ, ಧರ್ಮದವರನ್ನು ಒಟ್ಟಿಗೆ ಒಯ್ಯುವ ಶಕ್ತಿ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ’ ಎಂದರು.

‘ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವು ತಾನು ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಸರ್ಕಾರದ ಹಲವು ಯೋಜನೆಗಳ ಪ್ರಯೋಜನ ರಾಜ್ಯದ ಬಹುಸಂಖ್ಯಾತ ವರ್ಗದವರಿಗೆ ತಲುಪಿದೆ. ಬರಲಿರುವ ಚುನಾವಣೆಯಲ್ಲಿ ಈ ಅಂಶ ಕಾಂಗ್ರೆಸ್‌ ಪಕ್ಷಕ್ಕೆ ವರವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ನಾನು ವಿಧಾನಸಭಾಧ್ಯಕ್ಷನಾಗಿದ್ದಾಗ ಆ ಸ್ಥಾನದ ಘನತೆಯನ್ನು ಹೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡಿದ ತೃಪ್ತಿ ಇದೆ. ಕಂದಾಯ ಸಚಿವನಾದ ನಂತರ ಎಲ್ಲಾ ವರ್ಗಗಳ ಬಡವರಿಗೆ ಭೂಮಿಯ ಹಕ್ಕು ದೊರಕುವ ರೀತಿಯಲ್ಲಿ ಕಾನೂನಿನ ತಿದ್ದುಪಡಿ ಮಾಡಿಸಿದ್ದೇನೆ. ರಾಜಕೀಯ ಎಂದರೆ ದುಡ್ಡು ಹೊಡೆಯಲು ಇರುವ ಮಾರ್ಗ ಎಂದು ನಂಬಿರುವವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು’ ಎಂದು ಸಲಹೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಲ್‌.ಟಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಡಾ.ರಾಜನಂದಿನಿ, ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ತೀ.ನ.ಶ್ರೀನಿವಾಸ್‌, ಪಕ್ಷದ ಪ್ರಮುಖರಾದ ಮಲ್ಲಿಕಾರ್ಜುನ ಹಕ್ರೆ, ಶಿವಲಿಂಗ ಸ್ವಾಮಿ, ಮಕ್ಬುಲ್‌ ಅಹ್ಮದ್‌, ಕಾಗೋಡು ಅಣ್ಣಪ್ಪ, ಬಿ.ಆರ್‌ ಜಯಂತ್‌, ಅನಿತಾಕುಮಾರಿ, ಡಿ.ದಿನೇಶ್‌, ಅನ್ವರ್‌ ಭಾಷಾ, ಮೈಕೆಲ್‌ ಡಿಸೋಜ, ಗಣಪತಿ ಹೆನಗೆರೆ ಹಾಜರಿದ್ದರು.

**

‘ಪ್ರಾಮಾಣಿಕವಾಗಿ ಸೇವೆ ಮಾಡಿದ ತೃಪ್ತಿ ಇದೆ’

ಹೊಸನಗರ: ‘ಜಡ್ಡು ಹಿಡಿದು ಮೊಂಡಾಗಿದ್ದ ಕಂದಾಯ ಇಲಾಖೆಗೆ ಸಾಣೆ ಹಿಡಿದು ಚುರುಕುಗೊಳಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಿದ್ದೇನೆ’ ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಪಟ್ಟಣದ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಶುಕ್ರವಾರ ತಾಲ್ಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

‘ಕಂದಾಯ ಸಚಿವನಾಗಿ ರಾಜ್ಯದಾದ್ಯಂತ ಬಗರ್‌ಹುಕುಂ, ಅಕ್ರಮ ಸಕ್ರಮ, 94ಸಿ, 94ಸಿಸಿ, ಅರಣ್ಯ ಹಕ್ಕು ಕಾಯ್ದೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡಿದ ತೃಪ್ತಿ ನನಗೆ ಸಿಕ್ಕಿದೆ. ಹಕ್ಕುಪತ್ರ ನೀಡುವಲ್ಲಿ ಧರ್ಮ, ಜಾತಿ, ಬಡವ, ಬಲ್ಲಿದ ಎಂದು ನೋಡದೆ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಿದ್ದೇನೆ’ ಎಂದರು.

ಮುಂಬರುವ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರವನ್ನು ಮುಂದಿಟ್ಟುಕೊಂಡು ಎದುರಿಸಲು ಸಜ್ಜಾಗಬೇಕು ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಆಡಳಿತದಲ್ಲಿ ಸ್ವಚ್ಛತೆ, ಪಾರದರ್ಶಕತೆ ಇರುವಂತೆ ಮಾಡಲಾಗಿದೆ. ಭ್ರಷ್ಟಾಚಾರದ ಆರೋಪ ಮುಕ್ತ ರಾಜ್ಯವನ್ನಾಗಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ ಅಧ್ಯಕ್ಷತೆ ವಹಿಸಿ, ಪಕ್ಷ ಸಂಘಟನೆಯ ಕುರಿತು ಮಾತನಾಡಿದರು.

ಜಿಲ್ಲಾಧ್ಯಕ್ಷ ತಿ.ನಾ.ಶ್ರೀನಿವಾಸ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಕಲಗೊಡು ರತ್ನಾಕರ, ಶ್ವೇತಾ ಬಂಡಿ, ಎಪಿಎಂಸಿ ಅಧ್ಯಕ್ಷ ಬಿ.ಪಿ.ರಾಮಚಂದ್ರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ, ಪ್ರಚಾರ ಸಮಿತಿ ಅಧ್ಯಕ್ಷ ಜಯಶೀಲಪ್ಪಗೌಡ, ಪ್ರಮುಖರಾದ ಬಿ.ಜಿ. ಚಂದ್ರಮೌಳಿ, ಎರಿಗೆ ಉಮೇಶ್, ರತ್ನಾಕರ ಶೆಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT