ಮೌಲ್ವಿಯ ಅಪಹರಿಸಿದ ಯುವತಿ ಗ್ಯಾಂಗ್!

ಭಾನುವಾರ, ಮೇ 26, 2019
27 °C
₹ 8.13 ಲಕ್ಷ ಸುಲಿಗೆ ಮಾಡಿದ ಆರೋಪ * ಆನ್‌ಲೈನ್ ಮೂಲಕವೂ ಹಣ ವರ್ಗಾವಣೆ

ಮೌಲ್ವಿಯ ಅಪಹರಿಸಿದ ಯುವತಿ ಗ್ಯಾಂಗ್!

Published:
Updated:

ಬೆಂಗಳೂರು: ಮೌಲ್ವಿಯೊಬ್ಬರನ್ನು ಅಪಹರಿಸಿ ₹ 8.13 ಲಕ್ಷ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಯುವತಿ ನೇತೃತ್ವದ ಗ್ಯಾಂಗ್‌ನ ಬಂಧನಕ್ಕೆ ರಾಜರಾಜೇಶ್ವರಿನಗರ ಪೊಲೀಸರು ಬಲೆ ಬೀಸಿದ್ದಾರೆ.

ಈ ಸಂಬಂಧ ನಗರದ ಮೌಲ್ವಿ ಭಾನುವಾರ ದೂರು ಕೊಟ್ಟಿದ್ದು, ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಹಾಗೂ ಸಿಡಿಆರ್ (ಕರೆ ವಿವರ) ಸುಳಿವು ಆಧರಿಸಿ ಆರೋಪಿಗಳ ಶೋಧ ನಡೆಸುತ್ತಿದ್ದಾರೆ.

ವಾಟ್ಸ್‌ಆ್ಯಪ್ ಸ್ನೇಹ: ‘ನಾನು ಪ್ರಾರ್ಥನಾ ಮಂದಿರದಲ್ಲಿ ಪ್ರವಚನ ಮಾಡುತ್ತೇನೆ. 2016ರಲ್ಲಿ ಕರೆ ಮಾಡಿದ್ದ ಗೀತಾ ಪಾಟೀಲ ಎಂಬಾಕೆ, ‘ನಾನು ಸಲ್ಮಾನ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಆತ ಈಗ ಬಿಟ್ಟು ಹೋಗಿದ್ದಾನೆ. ಇದರಿಂದ ತುಂಬ ನೋವುಂಟಾಗಿದೆ. ನನಗೆ ನಿಮ್ಮ ಸಲಹೆ ಬೇಕು’ ಎಂದು ಹೇಳಿಕೊಂಡು ಪರಿಚಯಿಸಿಕೊಂಡಳು. ಆ ನಂತರ ಹೆಚ್ಚೆಂದರೆ ಎರಡು ವರ್ಷಗಳಲ್ಲಿ 2–3 ಬಾರಿ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿ ಮಾತನಾಡಿರಬಹುದು ಅಷ್ಟೇ’ ಎಂದು ಮೌಲ್ವಿ ದೂರಿನಲ್ಲಿ ವಿವರಿಸಿದ್ದಾರೆ.

‘ಫೆ.10ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನನಗೆ ಕರೆ ಮಾಡಿದ್ದ ಆಕೆ, ‘ರಾಜರಾಜೇಶ್ವರಿನಗರದ ರಿಲಯನ್ಸ್ ಡಿಜಿಟಲ್ ಬಳಿ ಬನ್ನಿ’ ಎಂದಳು. ಅಂತೆಯೇ ನಾನು ಸ್ಕೂಟರ್‌ನಲ್ಲಿ ತೆರಳಿದೆ. ಅಲ್ಲಿ ಗೀತಾ ಪಾಟೀಲ ಇನ್ನೂ ನಾಲ್ವರು ಹುಡುಗರೊಂದಿಗೆ ಕಾರಿನಲ್ಲಿ ಕುಳಿತಿದ್ದಳು. ‘ಕಾರಿನಲ್ಲೇ ಬಂದು ಕುಳಿತುಕೊಳ್ಳಿ. ಕಾಫಿ ಕುಡಿಯಲು ಹೋಗೋಣ’ ಎಂದಳು. ನಾನು ಒಪ್ಪದಿದ್ದಾಗ ಆಕೆಯ ಹುಡುಗರು ಬಲವಂತವಾಗಿ ನನ್ನನ್ನು ಕಾರಿನೊಳಗೆ ಎಳೆದುಕೊಂಡು ಕೂರಿಸಿಕೊಂಡರು.’

‘ಮೈಸೂರು ಕಡೆಗೆ ಹೊರಟ ಅವರು, ಕಾರಿನಲ್ಲೇ ಮನಸೋಇಚ್ಛೆ ಹಲ್ಲೆ ನಡೆಸಿದರು. ಬಳಿಕ ನನ್ನ ಬ್ಯಾಗ್‌ನಲ್ಲಿದ್ದ ₹ 2 ಲಕ್ಷ ನಗದು, ಮೊಬೈಲ್ ಹಾಗೂ ಮೂರು ಡೆಬಿಟ್ ಕಾರ್ಡ್‌ಗಳನ್ನೂ ಕಿತ್ತುಕೊಂಡರು. ಆನ್‌ಲೈನ್ ಮೂಲಕ ಹಣವನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡ ಅವರು, ನಂತರ ರಾಮನಗರದ ಎಟಿಎಂ ಘಟಕದಲ್ಲೂ ಹಣ ಡ್ರಾ ಮಾಡಿಕೊಂಡರು.’

‘ಸಂಜೆ ವೇಳೆ ರಾಜರಾಜೇಶ್ವರಿನಗರಕ್ಕೇ ವಾಪಸ್ ಕರೆದುಕೊಂಡು ಬಂದ ಅಪಹರಣಕಾರರು, ‘ಪೊಲೀಸರಿಗೆ ದೂರು ಕೊಟ್ಟರೆ ಪ್ರಾಣ ತೆಗೆಯುತ್ತೇವೆ’ ಎಂದು ಚಾಕುವಿನಿಂದ ಬೆದರಿಸಿ ಹೊರಟು ಹೋದರು. ಒಟ್ಟು ₹ 8.13 ಲಕ್ಷ ಸುಲಿಗೆ ಮಾಡಿರುವ ಗೀತಾ ಪಾಟೀಲ ಹಾಗೂ ಆಕೆಯ ಸಹಚರರನ್ನು ಪತ್ತೆ ಮಾಡಿ, ನನ್ನ ಹಣ ವಾಪಸ್ ಕೊಡಿಸಿ’ ಎಂದು ಮೌಲ್ವಿ ಮನವಿ ಮಾಡಿದ್ದಾರೆ.

ಹಣಕಾಸು ವೈಷಮ್ಯ

‘ಗೀತಾಗೆ ಸಲಹೆಗಳನ್ನು ಕೊಡಲು ಮೌಲ್ವಿ ಶುಲ್ಕದ ರೂಪದಲ್ಲಿ ಹಣ ಪಡೆದಿದ್ದರಂತೆ. ಆ ಹಣ ವಾಪಸ್ ಕೊಡಲು ನಿರಾಕರಿಸಿದ್ದಕ್ಕೆ ಗೀತಾ ಅಪಹರಿಸಿ ಸುಲಿಗೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮೌಲ್ವಿ ಅದನ್ನು ಒಪ್ಪುತ್ತಿಲ್ಲ. ಆರೋಪಿಗಳು ಸಿಕ್ಕ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ರಾಜರಾಜೇಶ್ವರಿನಗರ ಪೊಲೀಸರು ಮಾಹಿತಿ ನೀಡಿದರು.

Tags: 

ಬರಹ ಇಷ್ಟವಾಯಿತೆ?

 • 19

  Happy
 • 6

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !