ಭಾನುವಾರ, ಸೆಪ್ಟೆಂಬರ್ 26, 2021
21 °C
ಅಪಾಯ ಆಹ್ವಾನಿಸುತ್ತಿವೆ ತೆರೆದ ಚರಂಡಿಗಳು

ಕುಂಟುತ್ತಾ ಸಾಗುತ್ತಿದೆ ಹೂಳೆತ್ತುವ ಕೆಲಸ: ಪ್ರವಾಹವೇ ಸಮಸ್ಯೆ

ವಿದ್ಯಾಶ್ರೀ ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಿಸಿಲ ಧಗೆ ತಣಿಸಲು ವರುಣ ಧರೆಗಿಳಿದನೆಂಬ ಖುಷಿಗಿಂತ, ಮಳೆನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದ ಕಾರಣ ಸೃಷ್ಟಿಯಾಗುವ ಅವಾಂತರಗಳೇ ಕೋಡಿಚಿಕ್ಕನಹಳ್ಳಿ ನಿವಾಸಿಗಳಲ್ಲಿ ಆತಂಕ ಸೃಷ್ಟಿಸುತ್ತಿದೆ.

ಮಳೆಗಾಲ ಶುರುವಾಯಿತೆಂದರೆ ಇಲ್ಲಿಯ ಜನರ ಪಡಿಪಾಟಲು ಹೇಳತೀರದು. ಈ ಸಮಸ್ಯೆ ಇಂದು ನಿನ್ನೆಯದಲ್ಲ. 2016ರಲ್ಲಿ ಉಂಟಾದ ‍ಪ್ರವಾಹದಿಂದ ಜನರು ಜಾಗರಣೆ ಮಾಡಿದ್ದರು. ಆ ಮಳೆ ದುಸ್ವಪ್ನದಂತೆ ಕಾಡಿತ್ತು. ಈಗ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಪ್ರವಾಹ ತಡೆಗೆ ಹಲವು ಕಾಮಗಾರಿಗಳನ್ನು ನಡೆಸಲಾಗಿದೆ. ಇನ್ನೂ ಕೆಲವು ಕೆಲಸಗಳು ಪ್ರಗತಿಯಲ್ಲಿವೆ. ಆದರೂ ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರ ದೊರಕಿಲ್ಲ.

‌ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆಯ ಶನಿ ಮಹಾತ್ಮ ದೇವಸ್ಥಾನದಿಂದ ಅನುಗ್ರಹ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪ್ರದೇಶ ಇಳಿಜಾರಿನಲ್ಲಿದೆ. ರಸ್ತೆಯೂ ಕಿರಿದಾಗಿದೆ. ಹಾಗಾಗಿ ಪ್ರತಿ ಮಳೆಗಾಲದಲ್ಲಿಯೂ ಮನೆಗಳಿಗೆ ನೀರು ನುಗ್ಗುವುದು, ರಾತ್ರಿ ಪೂರ್ತಿ ನಿದ್ದೆಗೆಟ್ಟು ಕೊಳಚೆ ನೀರನ್ನು ಹೊರಹಾಕುವುದು ಸ್ಥಳೀಯ ನಿವಾಸಿಗಳಿಗೆ ಅಭ್ಯಾಸವಾಗಿ ಬಿಟ್ಟಿದೆ.

ಕೋಡಿಚಿಕ್ಕನಹಳ್ಳಿ ಮುಖ್ಯರಸ್ತೆಯಲ್ಲಿ ಒಳಚರಂಡಿಯ ಸಮಸ್ಯೆ ಗಂಭೀರ ಸ್ವರೂಪದಲ್ಲಿದೆ. ಎಂಟು ವರ್ಷಗಳಿಂದ ಒಳಚರಂಡಿ ಹೂಳೆತ್ತಿಲ್ಲ. ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವರಿಕೆ ಮಾಡಿಕೊಟ್ಟ ನಂತರವಷ್ಟೇ ಹೂಳೆತ್ತುವ ಕಾರ್ಯಕ್ಕೆ ಅಸ್ತು ಎಂದಿದ್ದಾರೆ. ಬೇಸಿಗೆಯಲ್ಲಿಯೇ ನಡೆಯಬೇಕಾದ ಹೂಳು ತೆಗೆಯುವ ಕಾಮಗಾರಿಯನ್ನು ಮಳೆಗಾಲ ಅಡಿ ಇಡುವ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದೇ ಹೊತ್ತಿಗೆ ಜಲಮಂಡಳಿಯೂ ಈ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಕೈಗೊಂಡಿದೆ. ಇದು ಕೂಡಾ ಆಮೆಗತಿಯಲ್ಲಿ ಸಾಗುತ್ತಿದೆ.

ಹೂಳೆತ್ತುವ ನೆಪದಲ್ಲಿ ಚರಂಡಿಯನ್ನು ಅಗೆಯಲಾಗಿದ್ದು, ಕೆಲಸ ಮಾತ್ರ ತ್ವರಿತವಾಗಿ ಆಗುತ್ತಿಲ್ಲ. ಇದರಿಂದ ವಾಹನ ಸವಾರರು ಮಾತ್ರವಲ್ಲದೇ ಪಾದಚಾರಿಗಳು ಜೀವ ಬಿಗಿ ಹಿಡಿದು ಸಂಚರಿಸುವ ಪರಿಸ್ಥಿತಿ ಇದೆ. ಇತ್ತೀಚೆಗೆ ಮಹಿಳೆಯರಿಬ್ಬರು ಚರಂಡಿಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಇತ್ತೀಚೆಗೆ ಸುರಿದ ಮಳೆಯಿಂದ ವೆಂಕಟೇಶ್ವರ ದೇವಸ್ಥಾನದ ಬಳಿ ಚರಂಡಿ ಪಕ್ಕದಲ್ಲೇ ಇರುವ ಕೆಲವು ಅಂಗಡಿಗಳು ಹಾಗೂ ಅಂಗನವಾಡಿ ಕೇಂದ್ರಕ್ಕೂ ನೀರು ನುಗ್ಗಿತ್ತು. ಮನೆಗಳ ನೀರಿನ ಸಂಪುಗಳಿಗೂ ಚರಂಡಿ ನೀರು ಸೇರಿತ್ತು.

ಸಾಧಾರಣ ಮಳೆ ಬಂದರೂ, ಕೋಡಿಚಿಕ್ಕನಹಳ್ಳಿಯಿಂದ ಹಾದುಹೋಗುವ ಬಿಲೇಕಹಳ್ಳಿ ಮುಖ್ಯರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

‘ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆಯೇ ಬಿಟ್ಟು ಹೋಗುತ್ತಾರೆ. ಆ ಮಣ್ಣು ಚರಂಡಿ ಸೇರಿ ಮೂರು ಅಡಿಗಳಷ್ಟು ಹೂಳು ತುಂಬುತ್ತದೆ. ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ನಡೆಸುತ್ತಿರುವುದರಿಂದ, ಸಾಧಾರಣ ಮಳೆಗೂ ಮನೆಯೊಳಗೆ ನೀರು ನುಗ್ಗುತ್ತದೆ. ಮಳೆ ಸುರಿಯಲು ಆರಂಭಿಸಿದರೆ ಸ್ಥಳೀಯರು ಕೋಲು ಹಿಡಿದು ಚರಂಡಿಯಲ್ಲಿರುವ ಹೂಳು ತೆಗೆಯುತ್ತೇವೆ. ರಾತ್ರಿಯೆಲ್ಲ ಚರಂಡಿಯ ಕಸ ತೆಗೆದ ಉದಾಹರಣೆಯೂ ಇದೆ’ ಎಂದು ಸ್ಥಳೀಯ ನಿವಾಸಿ ನಟರಾಜ್‌ ಬವಣೆ ಹೇಳಿಕೊಂಡರು. 

‘ಚರಂಡಿಯಲ್ಲಿ ಮೂರು–ನಾಲ್ಕು ಅಡಿಗಳಷ್ಟು ಮಣ್ಣು ಸೇರಿಕೊಂಡಿದೆ. ಸ್ವಚ್ಛಗೊಳಿಸುವುದಾದರೂ ಹೇಗೆ’ ಎಂದು ಹೆಸರು ಪಾಲಿಕೆಯ ಕಾರ್ಮಿಕರೊಬ್ಬರು ಪ್ರಶ್ನಿಸಿದರು.

‘ಇಲ್ಲಿನ 800 ಮೀಟರ್‌ ಉದ್ದದ ರಸ್ತೆಯೂ ಮೂರೂವರೆ ಮೀಟರ್‌ಗಳಷ್ಟು ಇಳಿಜಾರಿನಲ್ಲಿದೆ. ರಸ್ತೆ ಅಗಲ 16 ಅಡಿ ಅಷ್ಟೇ. ಹಾಗಾಗಿ ಇಲ್ಲಿ ರಸ್ತೆ ಮತ್ತು ಚರಂಡಿ ವಿಸ್ತರಣೆ ಕಷ್ಟ ಎಂದು ಪಾಲಿಕೆಯ ಎಂಜಿನಿಯರ್‌ ಕೂಡಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ’ ಎನ್ನುತ್ತಾರೆ ಸ್ಥಳೀಯರಾದ ಭೀಮಣ್ಣ.

‘ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ’
‘ನೆರೆ ಸಮಸ್ಯೆ ಬಗ್ಗೆ ಬಿಲೇಕಹಳ್ಳಿ ಮತ್ತು ಕೋಡಿಚಿಕ್ಕನಹಳ್ಳಿ ಜನರು ತಿಳಿಸಿದ್ದಾರೆ. ಒಳಚರಂಡಿಗಳಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿದೆ. ಅದನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಸೋಮವಾರದಿಂದ ಕೆಲಸ ಚುರುಕು ಪಡೆಯಲಿದೆ. ಅಗತ್ಯವಾದ ಅನುದಾನ ನೀಡಲಾಗಿದೆ. ಸಮಸ್ಯೆ ಪರಿಹಾರಕ್ಕೆ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ’ ಎಂದು ಮೇಯರ್ ಗಂಗಾಂಬಿಕೆ ಎಚ್ಚರಿಸಿದರು.

ಮೇಯರ್ ಸೂಚನೆ ಬಳಿಕವೂ ಶುರುವಾಗಿಲ್ಲ ಕಾಮಗಾರಿ
ಇತ್ತೀಚೆಗೆ ಸುರಿದ ಮಳೆಯಿಂದ ಹಾನಿಗೆ ಒಳಗಾದ ಬಿಲೇಕಹಳ್ಳಿ ಮತ್ತು ಕೋಡಿಚಿಕ್ಕನಹಳ್ಳಿಗೆ ಮೇಯರ್ ಗಂಗಾಂಬಿಕೆ ಭೇಟಿ ನೀಡಿದ್ದರು.

‘ಸಾಧಾರಣ ಮಳೆಗೂ ಈ ಪರಿ ಸಮಸ್ಯೆ ಸೃಷ್ಟಿಯಾದರೆ, ಭಾರಿ ಮಳೆ ಬಂದಾಗ ಗತಿ ಏನು’ ಎಂದೂ ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅಲ್ಲಲ್ಲಿ ತೆರೆದುಕೊಂಡಿದ್ದ ಚರಂಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಆದರೆ, ಚರಂಡಿ ಮುಚ್ಚುವ ಕೆಲಸವಿನ್ನೂ ಆರಂಭವಾಗಿಲ್ಲ.

**
ಬಿಬಿಎಂಪಿ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಲೋಕೋಪಯೋಗಿ ಇಲಾಖೆಯನ್ನು ಕೇಳುವಂತೆ ಸೂಚಿಸುತ್ತಾರೆ. ಏನಾದರೂ ಕುಂಟು ನೆಪ ಹೇಳುತ್ತಾರೆ.
-ನಟರಾಜ್‌, ಸ್ಥಳೀಯ ನಿವಾಸಿ

**
ಚರಂಡಿಯನ್ನು ಅಗೆದಿದ್ದು, ಅಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಮಕ್ಕಳಿಗೆ ರೋಗ ರುಜಿನಗಳು ಹರಡುವ ಭೀತಿ ಎದುರಾಗಿದೆ.
-ರಾಜಮ್ಮ, ಸ್ಥಳೀಯ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು