ಮುಡಬೂಳ ಕೆರೆ ಹೂಳಿಗೆ ಮುಗಿಬಿದ್ದ ರೈತರು

ಶುಕ್ರವಾರ, ಏಪ್ರಿಲ್ 19, 2019
31 °C

ಮುಡಬೂಳ ಕೆರೆ ಹೂಳಿಗೆ ಮುಗಿಬಿದ್ದ ರೈತರು

Published:
Updated:
Prajavani

ಶಹಾಪುರ: ತಾಲ್ಲೂಕಿನ 51 ಕೆರೆಗಳ ಹೂಳೆತ್ತುವ ಮಹತ್ವಾಕಾಂಕ್ಷಿ ಯೋಜನೆಗೆ ರೈತರು ನಿರಾಸಕ್ತಿ ವ್ಯಕ್ತಪಡಿಸಿದ್ದರಿಂದ ಕೆಲಸ ಸ್ಥಗಿತಗೊಂಡಿದೆ. ಆದರೆ ತಾಲ್ಲೂಕಿನ ಮುಡಬೂಳ ಕೆರೆ ಹೂಳಿಗೆ ರೈತರು ಮುಗಿ ಬಿದ್ದಿದ್ದಾರೆ.

‘42 ಎಕರೆ ವಿಸ್ತೀರ್ಣದ ಈ ಕೆರೆಯ ಹೂಳು ನು ತೆಗೆಯಲು ಸರ್ಕಾರದಿಂದ ಯಾವುದೇ ನಯಾ ಪೈಸೆ ಅನುದಾನವಿಲ್ಲ. ರೈತರೇ ಈ ಮಹತ್ವದ ಕಾರ್ಯಕ್ಕೆ ಕೈಜೋಡಿಸಿದ್ದು 15 ದಿನದಿಂದ ಸದ್ದು ಗದ್ದಲವಿಲ್ಲದೆ ಕೆಲಸ ನಡೆಯುತ್ತದೆ. ದಿನಾಲು 5 ಜೆಸಿಬಿ ಯಂತ್ರ, 20 ಟಿಪ್ಪರ್‌, 60 ಟ್ರ್ಯಾಕ್ಟರ್ ಕೆಲಸ ನಿರ್ವಹಿಸುತ್ತಿವೆ. ಒಂದು ಟ್ರ್ಯಾಕ್ಟರ್ ಹೂಳು ತುಂಬಲು ₹70 ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ಒಂದು ಟಿಪ್ಪರ್‌ ಹೂಳು ತೆಗೆದುಕೊಂಡು ರೈತರ ಜಮೀನಿಗೆ ಹಾಕಲು ₹1,200 ನೀಡುತ್ತಿದ್ದಾರೆ. 8ರಿಂದ 10 ಅಡಿ ಆಳ ಕೊರೆಯಲಾಗುತ್ತಿದೆ. ನೆರೆ ಗ್ರಾಮಸ್ಥರು ಸಹ ಕೆರೆ ಹೂಳು ತೆಗೆದುಕೊಂಡು ಹೋಗಲು ಉತ್ಸಾಹ ತೋರುತ್ತಿದ್ದಾರೆ. ಆದರೆ ನಮ್ಮ ಗ್ರಾಮದ ರೈತರು ಬೇಡ ಎನ್ನುತ್ತಿದ್ದಾರೆ’ ಎಂದು ಗ್ರಾಮದ ಮುಖಂಡ ಅಶೋಕ ಮಲ್ಲಾಬಾದಿ ತಿಳಿಸಿದರು.

ಎರಡು ವರ್ಷ ಹಿಂದೆ ಗ್ರಾಮಸ್ಥರ ಸಭೆ ನಡೆಸಿ ರೈತರ ಸಹಭಾಗಿತ್ವದಲ್ಲಿ ಕೆರೆ ಹೂಳೆತ್ತಲು ಪ್ರೇರಣೆ ನೀಡಿದ್ದೆವು. ಅದರಂತೆ ಒಂದು ತಿಂಗಳ ಕಾಲ ರೈತರು ಕೆರೆ ಹೂಳನ್ನು ತೆಗೆದುಕೊಂಡು ಹೋದರು. ಸರ್ಕಾರ ಮಾಡದ ಕೆಲಸವನ್ನು ರೈತರು ಮಾಡುತ್ತಿದ್ದಾರೆ. ಅಂದಿನ ಜಿಲ್ಲಾಧಿಕಾರಿ ಮನೋಜ ಜೈನ್ ಕೆರೆ ಹೂಳೆತ್ತುವ ಪ್ರದೇಶಕ್ಕೆ ಭೇಟಿ ನೀಡಿ ಖುಷಿಗೊಂಡಿದ್ದರು.

‘ಆಗ ರೈತರು ಸರ್ಕಾರದಿಂದ ನಮಗೆ ನಯಾ ಪೈಸೆ ಹಣ ಬೇಡ ಎಂದು ತಿಳಿಸಿದ್ದರು. ಈಗ ಮತ್ತೆ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಪ್ಪು ಮಿಶ್ರಿತ ಇಲ್ಲಿನ ಜಮೀನುಗಳಿಗೆ ಫಲವತ್ತಾದ ಕೆರೆ ಹೂಳು ಹಾಕಿದ್ದರಿಂದ ಇಳುವರಿ ಜಾಸ್ತಿ ಬಂದಿದೆ. ಇದಕ್ಕಿಂತ ದೊಡ್ಡ ಖುಷಿ ರೈತರಿಗೆ ಇನ್ನೇನು ಬೇಕು‘ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.

ಬರುವ ದಿನದಲ್ಲಿ ಕೆರೆಯ ಸುತ್ತ ಗಡಿ ಗುರುತಿಸಬೇಕು. ಅದರ ಸುತ್ತ ಗಿಡಗಳನ್ನು ನೆಟ್ಟು ಬೆಳೆಸಬೇಕು. ಅಲ್ಲದೆ ಗ್ರಾಮದ ಚರಂಡಿ ನೀರು ಕೆರೆಯಲ್ಲಿ ಸಂಗ್ರಹವಾಗುವುದನ್ನು ನಿಲ್ಲಿಸಿ ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕು. ಸದ್ಯ ದಾಖಲೆಯಲ್ಲಿ ಸರ್ಕಾರಿ ಜಮೀನು ಎಂದು ಇದೆ. ಅದನ್ನು ತೆಗೆದು ಕೆರೆ ಎಂದು ನಮೂದಿಸಬೇಕು. ಮುಡಬೂಳ ಗ್ರಾಮದ ರೈತರ ಮಾದರಿ ಕೆಲಸ ಉಳಿದ ಗ್ರಾಮಸ್ಥರಿಗೆ ಪ್ರೇರಣೆಯಾಗಲಿ ಎನ್ನುತ್ತಾರೆ ರೈತ ಮುಖಂಡರು.

* ಸದಾ ನೀರಿನ ಬವಣೆಯಿಂದ ಬಸವಳಿದ ಗ್ರಾಮಸ್ಥರಿಗೆ ಕೆರೆಯಲ್ಲಿ ನೀರು ಸಂಗ್ರಹದಿಂದ ತುಸು ನೆಮ್ಮದಿ ನೀಡಿದೆ. ರೈತರನ್ನು ಒಳ್ಳೆಯ ಕೆಲಸಕ್ಕೆ ಪ್ರೇರೇಪಿಸಬೇಕು.

-ಭಾಸ್ಕರರಾವ ಮುಡಬೂಳ, ರೈತ ಮುಖಂಡ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !