ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ವಾಕ್‌, ಕೈಯಲ್ಲೊಂದು ಸ್ಟಿಕ್‌

ವಾಯು ವಿಹಾರಿಗಳನ್ನು ಅಟ್ಟಾಡಿಸಿಕೊಂಡು ಬರುವ ನಾಯಿಗಳು: ಅವುಗಳ ನಿಯಂತ್ರಣಕ್ಕೆ ಹೆಣಗುತ್ತಿರುವ ತೋಟಗಾರಿಕೆ ಇಲಾಖೆ
Last Updated 21 ನವೆಂಬರ್ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ಬರುವ ಕೆಲವು ನಗರವಾಸಿಗಳು ಕೈಯಲ್ಲಿ ಬಡಿಗೆಯೊಂದನ್ನು ಹಿಡಿದು ಸಾಗುತ್ತಿರುತ್ತಾರೆ. ಉದ್ಯಾನದಲ್ಲಿನ ಬೀದಿನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ಹುಡುಕಿರುವ ರಕ್ಷಣಾ ಮಾರ್ಗವಿದು.

ತಂಗಾಳಿಗೆ ಮೈಯೊಡ್ಡುತ್ತ ಲಾಲ್‌ ಬಾಗ್‌ನ ಹಸಿರು ಹಂದರದಲ್ಲಿನಿರಾತಂಕ ಭಾವದಿಂದ ಜನರು ನಡೆದಾಡಲು ನಾಯಿಗಳು ಅಡ್ಡಗಾಲು ಹಾಕುತ್ತಿವೆ. ಆ ಶ್ವಾನಗಳನ್ನು ಉದ್ಯಾನದಿಂದ ಗಡಿಪಾರು ಮಾಡಬೇಕು ಎಂಬ ವಾಕರ್ಸ್‌ಗಳ ಒತ್ತಾಯಕ್ಕೆ ತೋಟಗಾರಿಕೆ ಇಲಾಖೆ ಕಿವಿ
ಗೊಡುತ್ತಿದೆ. ಆದರೆ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಬಹುತೇಕ ವಿಫಲವಾಗಿದೆ.

ಬೆಳಗಿನ ಹೊತ್ತು ವಿಹಾರಕ್ಕಾಗಿ ಬಂದ ಹಲವರನ್ನು ಬೀದಿ ನಾಯಿಗಳು ಕಚ್ಚಿದ ಹಲವಾರು ಪ್ರಸಂಗಗಳು ನಡೆದಿವೆ. ಸಿದ್ದಾಪುರ ಗೇಟ್‌ ಬಳಿಯಂತೂ ನಾಯಿಗಳು ನಡೆಸಿದ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕೆಲವು ವರ್ಷಗಳ ಹಿಂದೆ ಸಂಭವಿಸಿದೆ. ‘ಬೀದಿ ನಾಯಿಗಳಿಂದ ಆಗುತ್ತಿರುವ ತೊಂದರೆ ನಮಗೂ ಗೊತ್ತಿದೆ. ಅವುಗಳನ್ನು ಉದ್ಯಾನದಿಂದ ಸ್ಥಳಾಂತರ ಮಾಡಲು ಕಾಯ್ದೆ ಅಡ್ಡಬರುತ್ತದೆ. ಅಲ್ಲದೆ, ಪ್ರಾಣಿಪ್ರಿಯರ ವಿರೋಧವನ್ನೂ ಎದುರಿಸಬೇಕಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ನಾವು ಅಸಹಾಯಕರಾಗಿದ್ದೇವೆ’ ಎನ್ನು
ತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

‘ಉದ್ಯಾನದಲ್ಲಿರುವ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಲಾಗಿದ್ದು, ವರ್ಷದಿಂದ ವರ್ಷಕ್ಕೆ ಅವುಗಳ ಸಂಖ್ಯೆ ಕಡಿಮೆ ಆಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.

‘ಉದ್ಯಾನದಲ್ಲಿನ ಕೆರೆಯ ಪಕ್ಕದ ರಸ್ತೆಗೆ ನಾಲ್ಕು ವರ್ಷಗಳಿಂದ ಟಾರು ಹಾಕಿಲ್ಲ. ಇಲ್ಲಿ ನಡೆದಾಡಲು ಕಷ್ಟವಾಗುತ್ತಿದೆ. ಗಡಿಯಾರ ವೃತ್ತದ ಸುತ್ತಲಿನ ಪ್ರದೇಶವು ಹಾಳಾಗಿದೆ’ ಎಂದು ನಡಿಗೆದಾರರೊಬ್ಬರು ಹೇಳುತ್ತಾರೆ.

‘ಗ್ಲಾಸ್‌ಹೌಸ್‌ನಿಂದ ಎಡಗಡೆಗೆ ಹೋಗುವ ಮಾರ್ಗದ ಬದಿಯಲ್ಲಿ ಬಿದಿರಿನ ಮೇಳೆಗಳು, ಮರಗಳು ಬಿದ್ದು ಹಲವಾರು ತಿಂಗಳುಗಳೆ ಕಳೆದಿವೆ. ಅವುಗಳನ್ನು ತೆರವುಗೊಳಿಸಿಲ್ಲ. ಇಲ್ಲಿ ವಿಷಜಂತುಗಳು ಆಗಾಗ ಕಾಣಿಸಿಕೊಳ್ಳುತ್ತಿವೆ’ ಎಂದು ತಿಳಿಸುತ್ತಾರೆ.

‘ಸಣ್ಣ ವ್ಯಾಪಾರಿಗಳು ತಿಂಡಿ–ತಿನಿಸುಗಳನ್ನು ಅಕ್ರಮವಾಗಿ ಉದ್ಯಾನದ ಒಳಗೆ ತಂದು, ಹೆಚ್ಚಿನ ಬೆಲೆಗೆ ಮಾರುತ್ತಾರೆ. ಮಾವಳ್ಳಿ ಕಡೆಯ ಉದ್ಯಾನದ ತಡೆಗೋಡೆ ಮೇಲೆ ಹತ್ತಿ, ಹೊರಗಿನ ತಿಂಡಿಗಳನ್ನು ಒಳಗೆ ಸಾಗಿಸುತ್ತಾರೆ. ಇದನ್ನು ಭದ್ರತಾ ಸಿಬ್ಬಂದಿ ನೋಡಿದರೂ ಸುಮ್ಮನಿರುತ್ತಾರೆ. ಕಾರಣ ಅವರಿಗೂ ಒಂದಿಷ್ಟು ಹಣ ನೀಡಿ ಅಡ್ಜಸ್ಟ್‌ ಮಾಡಿಕೊಂಡಿದ್ದಾರೆ. ಇದೊಂದು ದಂಧೆಯಾಗಿದೆ’ ಎಂದು ಅಕ್ರಮ ಬಿಚ್ಚಿಡುತ್ತಾರೆ.

***

ಜನರು ಹೀಗನ್ನುತ್ತಾರೆ

ಲಾಲ್‌ಬಾಗ್‌ನಲ್ಲಿ ಇನ್ನಷ್ಟು ಸ್ವಚ್ಛತೆ ಬೇಕು. ಮಕ್ಕಳಿಗೆ ಪುಟ್ಟ ಆಟದ ಪರಿಕರಗಳನ್ನು ಕೊಡಬೇಕು. ಬೇರೆ ಉದ್ಯಾನಗಳಲ್ಲಿರುವಂತೆ ಜಿಮ್‌ ಉಪಕರಣಗಳು ಬೇಕು. ಇದೊಂದುಸುಂದರ ಪ್ರದೇಶ. ಇದರ ಬಗ್ಗೆ ಇನ್ನಷ್ಟು ಕಾಳಜಿ ವಹಿಸುವ ಅಗತ್ಯವಿದೆ.

– ದಿನೇಶ್‌ ಗುಲೇಚ, ಶಂಕರಪುರ

ಇಡೀ ಲಾಲ್‌ಬಾಗ್‌ ನಾಲ್ಕೈದು ಕಾರ್ಪೊರೇಟರ್‌ಗಳ ವ್ಯಾಪ್ತಿಗೆ ಬರುತ್ತದೆ. ಅವರು ಮನಸ್ಸು ಮಾಡಿ ಆಯಾ ಪ್ರದೇಶದಲ್ಲಿ ಒಂದೊಂದು ಓಪನ್‌ ಜಿಮ್‌ ಸ್ಥಾಪಿಸಬೇಕು. ಕೆರೆಗಳ ಅಕ್ಕಪಕ್ಕ ತಿನ್ನುವುದು, ಪ್ಲಾಸ್ಟಿಕ್‌ ಎಸೆಯುವುದು ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು.

–ಮುಖೇಶ್‌, ಹನುಮಂತನಗರ

ಭಾರತದ ಬೇರೆ ಬೇರೆ ನಗರಗಳ ಉದ್ಯಾನಗಳನ್ನು ನೋಡಿದ್ದೇನೆ. ಆದರೆ, ಲಾಲ್‌ಬಾಗ್‌ನಷ್ಟು ಸುಂದರ ಪರಿಸರ ಬೇರೆಡೆ ಇಲ್ಲ. ಹಕ್ಕಿಗಳ ಕಲರವವನ್ನು ಇಲ್ಲಿನಷ್ಟು ಚೆನ್ನಾಗಿ ಬೇರೆಲ್ಲೂ ಆಸ್ವಾದಿಸಲಾಗದು. ಇಲ್ಲಿನ ಸೌಂದರ್ಯ, ವೈವಿಧ್ಯವನ್ನು ಕಾಪಾಡಬೇಕು.

– ಸುಪ್ರಿಯಾ, ವಿಲ್ಸನ್‌ ಗಾರ್ಡನ್

ಉದ್ಯಾನದಲ್ಲಿರುವ ಶೌಚಾಲಯಗಳ ಸ್ವಚ್ಛತೆ ಕಾಪಾಡಬೇಕು. ಅಲ್ಲಲ್ಲಿ ಕಲ್ಲು ಚಪ್ಪಡಿ ಮುರಿದು ಬಿದ್ದಿರುವುದನ್ನು ಕಾಣಬಹುದು. ಅವುಗಳನ್ನು ಸರಿಪಡಿಸಬೇಕು. ವಾಯುವಿಹಾರದ ವೇಳೆಯಲ್ಲಿ ವಾಹನಗಳ ಪ್ರವೇಶಕ್ಕೆ ಅವಕಾಶ ಕೊಡಬಾರದು.

– ಪ್ರಸನ್ನ ಕುಮಾರ್‌, ಬಸವನಗುಡಿ


ಸಿಬ್ಬಂದಿ ಸ್ವಚ್ಛತೆ ಕಾಪಾಡುತ್ತಾರೆ. ಆದರೆ, ಹಕ್ಕಿ ಹಿಕ್ಕೆಗಳು, ತರಗೆಲೆಗಳಿಂದ ಸ್ವಚ್ಛತೆ ಕೊರತೆಯೆನಿಸಬಹುದು. ವಾಯುವಿಹಾರಕ್ಕೆ ಈ ಉದ್ಯಾನ ಹೇಳಿ ಮಾಡಿಸಿದ ತಾಣ. ನಮಗೆ ಈ ಜಾಗದ ಮೇಲೆ ತುಂಬಾ ಪ್ರೀತಿಯಿದೆ.

– ಎಸ್‌.ಕೆ.ಪುಷ್ಪಲತಾ, ಸೋಮೇಶ್ವರನಗರ

***

ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌ನಿಂದ ಲಾಲ್‌ಬಾಗ್‌ನಲ್ಲಿ ಜನಸ್ಪಂದನ

25ನೇ ನವೆಂಬರ್‌, ಭಾನುವಾರ, ಬೆಳಿಗ್ಗೆ 7.30ಕ್ಕೆ, ಗ್ಲಾಸ್‌ಹೌಸ್‌ ಹಿಂಭಾಗ, ಬೊನ್ಸಾಯ್‌ ಗಾರ್ಡನ್‌ ಸರ್ಕಲ್‌ ಹತ್ತಿರ, ಲಾಲ್‌ಬಾಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT