ಸಾಲಮನ್ನಾ; ಸರ್ಕಾರದಿಂದ ಮಲತಾಯಿ ಧೋರಣೆ

7
ರೈತ ಸಂಘದ ಆರೋಪ

ಸಾಲಮನ್ನಾ; ಸರ್ಕಾರದಿಂದ ಮಲತಾಯಿ ಧೋರಣೆ

Published:
Updated:
Deccan Herald

ಬೆಂಗಳೂರು: ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ರೈತ ಸಂಘದ (ಪ್ರೊ. ನಂಜುಂಡಸ್ವಾಮಿ ಬಣ) ಗೌರವಾಧ್ಯಕ್ಷ ವಿ.ಆರ್.ನಾರಾಯಣ ರೆಡ್ಡಿ ದೂರಿದರು.

ಯಲಹಂಕ ಸಮೀಪದ ರಾಜಾನುಕುಂಟೆಯಲ್ಲಿ ನಡೆದ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ‘ವಿಧಾನಸೌಧದಲ್ಲಿ ರೈತರೊಂದಿಗೆ ಸಭೆ ನಡೆಸಿ, ರೈತರನ್ನು ಸಾಲದಿಂದ ಖುಣಮುಕ್ತರನ್ನಾಗಿ ಮಾಡುತ್ತೇನೆಂದು ಆಶ್ವಾಸನೆ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಈಗ ರಾಗ ಬದಲಿಸಿ, 30-40 ನಿರ್ಬಂಧಗಳನ್ನು ವಿಧಿಸುವ ಮೂಲಕ ಸಾಲಮನ್ನಾ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆನೀಡುತ್ತಿದ್ದಾರೆ. ಇದರಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮುಂದಿನಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದು ಅವರು ಎಚ್ಚರಿಸಿದರು.

ಸಂಘದ ರಾಜ್ಯ ಕೋಶಾಧ್ಯಕ್ಷ ಕುಬೇರಪ್ಪ ಮಾತನಾಡಿ, ‘ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳು ಸಾಲದ ವಿಚಾರವಾಗಿ ಅನ್ಯರಾಜ್ಯಗಳ ವಕೀಲರುಗಳಿಂದ ನೋಟಿಸ್ ಜಾರಿಗೊಳಿಸುವ ಮೂಲಕ ರೈತರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ರೈತರು ಸಾವಿನ ಮೊರೆ ಹೋಗುತ್ತಿದ್ದಾರೆ’ ಎಂದು ದೂರಿದರು. ಬೆಂಗಳೂರು ಉತ್ತರ ತಾಲ್ಲೂಕು ಘಟಕದ ಕಾರ್ಯದರ್ಶಿ ನಂಜುಂಡಪ್ಪ ಮಾತನಾಡಿ, ‘ಯಲಹಂಕ- ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕಡತನಮಲೆ ಗ್ರಾಮದ ಬಳಿ ಟೋಲ್ ನಿರ್ಮಿಸಲಾಗಿದೆ. ಸರ್ವಿಸ್‌ ರಸ್ತೆ, ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಇಲ್ಲ. ಹೀಗಾಗಿ ಈ ಭಾಗದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ವಾಹನ ಸವಾರರಿಂದ ಟೋಲ್‌ ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ’ ಎಂದು ದೂರಿದರು. 

ಬೆಂಗಳೂರು ದಕ್ಷಿಣ ತಾಲ್ಲೂಕು ಘಟಕದ ಅಧ್ಯಕ್ಷ ಆನೇಕಲ್ ಮಂಜುನಾಥ ರೆಡ್ಡಿ, ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !