ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲ ಸಂರಕ್ಷಣೆ: ಕೆರೆ ಕಾಳಜಿಗೆ ಕಿವಿಯಾದ ಗಂಗಾಂಬಿಕೆ

ಹೋರಾಟಗಾರರ ಜೊತೆ ಮೇಯರ್‌ ಸಮಾಲೋಚನೆ
Last Updated 25 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೆರೆಗಳನ್ನು ಅಭಿವೃದ್ಧಿಪಡಿಸುವಾಗ ಅನುಸರಿಸಬೇಕಾದ ಮುಂಜಾಗ್ರತೆಗಳೇನು, ಈ ಕಾರ್ಯದಲ್ಲಿ ಸಮುದಾಯದ ಸಹಭಾಗಿತ್ವ ಸಾಧ್ಯವಾಗಿಸುವುದು ಹೇಗೆ, ಅವುಗಳ ಮೂಲಸ್ವರೂಪವನ್ನು ಉಳಿಸಿಕೊಳ್ಳುವ ಬಗೆ ಹೇಗೆ...

ಇಂತಹ ಹತ್ತು ಹಲವು ವಿಚಾರಗಳ ಬಗ್ಗೆ ಮೇಯರ್‌ ಗಂಗಾಂಬಿಕೆ ಅವರು ಕೆರೆ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಕಾರ್ಯಕರ್ತರಿಂದಸೋಮವಾರ ಸಲಹೆ ಪಡೆದರು.

ವಾರ್ಡ್‌ ಸಮಿತಿಗಳನ್ನು ಬಲಪಡಿಸುವ ಸಲುವಾಗಿ ‘ಪ್ರಜಾವಾಣಿ’ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸಂವಾದದಲ್ಲಿ ಕೆರೆಗಳ ಸಂರಕ್ಷಣೆ ವಿಚಾರವೂ ಪ್ರಸ್ತಾವವಾಗಿತ್ತು. ಜಲಮೂಲಗಳನ್ನು ಉಳಿಸುವ ಹೋರಾಟದಲ್ಲಿ ತೊಡಗಿರುವ ಕಾರ್ಯಕರ್ತರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಪರಿಹಾರೋಪಾಯ ಕಂಡುಕೊಳ್ಳುವುದಾಗಿ ಮೇಯರ್‌ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಕಚೇರಿಗೆ ಕರೆಸಿಕೊಂಡು ಸಮಾಲೋಚನೆ ನಡೆಸಿದರು.

ಮೂಲ ಪರಿಸರ ಉಳಿಸಿ: ‘ಅಭಿವೃದ್ಧಿಯ ಹೆಸರಿನಲ್ಲಿ ಕೆರೆಗಳ ಮೂಲಸ್ವರೂಪಕ್ಕೆ ಧಕ್ಕೆ ತರಲಾಗುತ್ತಿದೆ.ದಂಡೆಯಲ್ಲಿ ಉದ್ಯಾನ ನಿರ್ಮಿಸುವ ನೆಪದಲ್ಲಿ ಆಲಂಕಾರಿಕ ಸಸ್ಯಗಳನ್ನು ಬೆಳೆಸುವ ಪರಿಪಾಠ ಹೆಚ್ಚುತ್ತಿದೆ. ಇದರಿಂದ ಕೆರೆಯ ಸಹಜ ಪರಿಸರ ವ್ಯವಸ್ಥೆಗೆ ಹಾನಿ ಉಂಟಾಗುತ್ತಿದೆ. ಜಲಚರಗಳು ತೊಂದರೆ ಅನುಭವಿಸುತ್ತಿವೆ. ಜಲಮೂಲಗಳ ಮೂಲಸ್ವರೂಪ ಉಳಿಸಿಕೊಳ್ಳಬೇಕು. ಆದಷ್ಟು ಕಾಂಕ್ರೀಟ್‌ ರಚನೆಗಳನ್ನು ಕಡಿಮೆ ಮಾಡಬೇಕು’ ಎಂದು ಕಾರ್ಯಕರ್ತರು ಒತ್ತಾಯಿಸಿದರು.

‘ಕೆರೆಯಲ್ಲೇ ಕೊಳವೆಬಾವಿ ಕೊರೆದು ಅದರ ನೀರನ್ನು ಉದ್ಯಾನಗಳಿಗೆ ಬಳಸಲಾಗುತ್ತದೆ. ಕೊಳಚೆ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವಂತೆ ಸಾರ್ವಜನಿಕರಿಗೆ ಪಾಠ ಹೇಳುವವರೇ ಉದ್ಯಾನಗಳಿಗೆ ಕೊಳವೆಬಾವಿಯ ಶುದ್ಧನೀರನ್ನು ಬಳಸುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಪಾಲಿಕೆಯ ಕ್ರಮ ಸಾರ್ವಜನಿಕರಿಗೆ ಪ್ರೇರಣೆಯಾಗುವಂತಿರಬೇಕು’ ಎಂದು ಫ್ರೆಂಡ್ಸ್‌ ಆಫ್‌ ಲೇಕ್‌ನ ಮಾಧುರಿ ಅವರು ಸಲಹೆ ನೀಡಿದರು.

‘ಕೆರೆ ದಂಡೆಯಲ್ಲಿ ಹುಲ್ಲುಹಾಸನ್ನು ಬೆಳೆಸುವುದಂತೂ ತೀರಾ ಹಾಸ್ಯಾಸ್ಪದ ನಿರ್ಧಾರ. ಉಷ್ಣವಲಯದಲ್ಲಿ ಇದರ ನಿರ್ವಹಣೆಗೆ ಅನಗತ್ಯ ವೆಚ್ಚವಾಗುತ್ತದೆ. ಇದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಡಿಪಿಆರ್‌ ಹಂಚಿಕೊಳ್ಳಿ: ‘ಕೆರೆ ಅಭಿವೃದ್ಧಿಗೆ ಪಾಲಿಕೆ ಕೋಟಿಗಟ್ಟಲೆ ರೂಪಾಯಿ ವ್ಯಯಿಸುತ್ತಿದೆ. ಆದರೆ, ಕಾಮಗಾರಿ ಅನುಷ್ಠಾನದ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ. ಏನೆಲ್ಲ ಕಾಮಗಾರಿ ನಡೆಸಲಾಗುತ್ತಿದೆ? ಅದಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತಿದೆ? ಗುತ್ತಿಗೆದಾರರು ಯಾರು ಎಂಬ ವಿವರಗಳನ್ನು ಕೆರೆಯ ಬಳಿ ಫಲಕದಲ್ಲಿ ಪ್ರದರ್ಶಿಸಬೇಕು. ಕಾಮಗಾರಿಯ ಸಮಗ್ರ ಯೋಜನಾ ವರದಿಯನ್ನು (ಡಿಪಿಆರ್‌) ಕೆರೆಯ ಬಗ್ಗೆ ಕಾಳಜಿ ವಹಿಸುವವರ ಜೊತೆ ಹಂಚಿಕೊಳ್ಳಬೇಕು’ ಎಂದು ಶೋಭಾ ಭಟ್‌ ಹಾಗೂ ಚೆನ್ನಿಯಪ್ಪನ್‌ ಸಲಹೆ ನೀಡಿದರು.

ಇದಕ್ಕೆ ಒಪ್ಪಿದ ಮೇಯರ್‌, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿಶೇಷ ಆಯುಕ್ತ ಮನೋಜ್‌ ಕುಮಾರ್‌ ಮೀನಾ ಅವರಿಗೆ ಸೂಚಿಸಿದರು.

‘ಹುಳಿಮಾವು ಕೆರೆಗೆ ಕೊಳಚೆ ನೀರು ಸೇರುತ್ತಿದೆ ಇದನ್ನು ತಡೆಗಟ್ಟಬೇಕು. ಈ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು’ ಎಂದು ಹುಳಿಮಾವು ಕೆರೆತರಂಗದ ಮಿಥುನ್‌ ಸುಬ್ಬಯ್ಯ ಸಲಹೆ ನೀಡಿದರು.

‘ಜಕ್ಕೂರು ಕೆರೆಯಲ್ಲಿ ಹೆಚ್ಚುವರಿ ಎಸ್‌ಟಿಪಿ ಅಳವಡಿಸಬೇಕು. ಇದಕ್ಕೆ ನೀರು ಸೇರುವ ಹಾಗೂ ಹೊರಹೋಗುವ ಕಿಂಡಿಗಳ ಸಮಸ್ಯೆ ನಿವಾರಿಸಬೇಕು’ ಎಂದು ‘ಜಲೋಪಾಸನಂ’ನ ಅನ್ನಪೂರ್ಣ ಒತ್ತಾಯಿಸಿದರು.

‘ಸೀಗೆಹಳ್ಳಿ ಕೆರೆಯ ಬಳಿ ಎಸ್‌ಟಿಪಿ ಅಳವಡಿಸಬೇಕು. ಇದಕ್ಕೆ ಕಸ ಸೇರುವುದನ್ನು ತಡೆಯಬೇಕು. ಜಲಾನಯನ ಪ್ರದೇಶ ಅಭಿವೃದ್ಧಿಪಡಿಸಬೇಕು. ಸುತ್ತ ಬೇಲಿ ನಿರ್ಮಿಸಬೇಕು. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು’ ಎಂದು ಪಿ.ಸುಕುಮಾರ್‌ ಆಗ್ರಹಿಸಿದರು.

ಕೆರೆಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕಾರ್ಯಕರ್ತರು ಹಾಗೂ ಸಂಸ್ಥೆಗಳ ಜೊತೆ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಕೆರೆ ಅಭಿವೃದ್ಧಿ ವಿಭಾಗದ ಅಧಿಕಾರಿಗಳಿಗೆ ಮೇಯರ್‌ ಸೂಚನೆ ನೀಡಿದರು.

‘ಚರ್ಚೆ ಕಡ್ಡಾಯ’

‘ಆಯಾ ವಾರ್ಡ್‌ನ ಕೆರೆಗಳ ಸ್ಥಿತಿಗತಿ ಬಗ್ಗೆ ವಾರ್ಡ್‌ ಸಮಿತಿ ಸಭೆಯಲ್ಲಿ ಚರ್ಚಿಸುವುದನ್ನು ಕಡ್ಡಾಯಗೊಳಿಸಬೇಕು. ಈ ಕುರಿತು ಸಮಿತಿ ತಳೆಯುವ ನಿರ್ಧಾರಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು’ ಎಂದು ಕೆರೆ ಕಾರ್ಯಕರ್ತರು ಒತ್ತಾಯಿಸಿದರು.

ಈ ಬಗ್ಗೆ ಎಲ್ಲ ವಾರ್ಡ್‌ ಸಮಿತಿಗಳಿಗೂ ಸೂಚನೆ ನೀಡುವುದಾಗಿ ಮೇಯರ್‌ ಭರವಸೆ ನೀಡಿದರು. ಕೆರೆ ಕಣ್ಗಾವಲಿಗೆ ವಾಟ್ಸ್‌ಆ್ಯಪ್‌ ಬಳಗ

ನಗರದ ಕೆರೆಗಳ ಅಭಿವೃದ್ಧಿ ಕುರಿತು ನಿರ್ಧಾರ ಕೈಗೊಳ್ಳುವಾಗ ಈ ಕುರಿತು ಕಾಳಜಿ ಹೊಂದಿರುವ ಸಾರ್ವಜನಿಕರು ಹಾಗೂ ತಜ್ಞರ ಅಭಿಪ್ರಾಯ ಪಡೆಯಲು ಪಾಲಿಕೆ ಮುಂದಾಗಿದೆ.

‘ನಾವು ಕೆರೆಗಳ ಹೊಣೆ ಹೊತ್ತಿರುವ ಅಧಿಕಾರಿಗಳು, ತಜ್ಞರು ಹಾಗೂ ಈ ಕುರಿತು ಕಾಳಜಿ ಇರುವ ಕಾರ್ಯಕರ್ತರನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಬಳಗವನ್ನು ರಚಿಸುತ್ತೇವೆ. ಪರಸ್ಪರ ಅಭಿಪ್ರಾಯ ಹಂಚಿಕೊಳ್ಳಲು ಇದು ನೆರವಾಗಲಿದೆ. ಕೆರೆ ಅಭಿವೃದ್ಧಿ ಕಾಮಗಾರಿಗಳ ಕುರಿತ ಮಾಹಿತಿಯನ್ನೂ ಇದರಲ್ಲಿ ಹಂಚಿಕೊಳ್ಳಲಿದ್ದೇವೆ’ ಎಂದು ಮೇಯರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

**

ಇಂದಿನ ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಪಾಲಿಕೆ ಅನುಷ್ಠಾನಗೊಳಿಸಲಿದೆ. ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ
-ಗಂಗಾಂಬಿಕೆ, ಮೇಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT