ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಕಾರ್ಖಾನೆಗಳ ಪಾಲಾಗುತ್ತಿದೆ ‘ಮೈಷುಗರ್‌’ ಕಬ್ಬು; ಲಾಬಿಗೆ ಅಡೆತಡೆ ಇಲ್ಲ

ಮೈಸೂರು, ಚಾಮರಾಜನಗರ ಜಿಲ್ಲೆಗೆ ಸಾಗುತ್ತಿದೆ ಸಕ್ಕರೆ ನಾಡಿನ ಕಬ್ಬು
Last Updated 7 ಸೆಪ್ಟೆಂಬರ್ 2018, 13:17 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಮೈಷುಗರ್‌ ಕಾರ್ಖಾನೆಗೆ ಮರುಜೀವ ನೀಡುವ ಸಕಲ ಯತ್ನಗಳು ನಡೆಯುತ್ತಿವೆ. ಆದರೆ ಅನ್ಯ ಜಿಲ್ಲೆಯ ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರು ತಮ್ಮ ಕಾರ್ಖಾನೆಗೆ ಜಿಲ್ಲಾ ವ್ಯಾಪ್ತಿಯ ಕಬ್ಬು ಸಾಗಿಸುತ್ತಿದ್ದು ‘ಮೈಷುಗರ್‌’ ಕಬ್ಬು ಕೊರತೆ ಎದುರಿಸುವಂತೆ ಮಾಡುತ್ತಿದ್ದಾರೆ.

ಮೈಸೂರು ಜಿಲ್ಲೆ, ನಂಜನಗೂಡಿನ ಬನ್ನಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಹಾಗೂ ಚಾಮರಾಜನಗರ ಜಿಲ್ಲೆ, ಕುಂತೂರು ಮಹಾದೇಶ್ವರ ಸಕ್ಕರೆ ಕಾರ್ಖಾನೆಗಳು ಮೈಷುಗರ್‌ ಕಾರ್ಖಾನೆ ಹಾಗೂ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ) ವ್ಯಾಪ್ತಿಯ ಕಬ್ಬನ್ನು ತಮ್ಮತ್ತ ಸೆಳೆದುಕೊಳ್ಳುತ್ತಿವೆ. ಜಿಲ್ಲೆಯಿಂದ ಪ್ರತಿದಿನ 200ಕ್ಕೂ ಹೆಚ್ಚು ಕಬ್ಬಿನ ಲಾರಿಗಳು ಅನ್ಯಜಿಲ್ಲೆಗಳ ಖಾಸಗಿ ಸಕ್ಕರೆ ಕಾರ್ಖಾನೆಗಳತ್ತ ಸಾಗುತ್ತಿವೆ. ಕಬ್ಬು ಕಡಿಯುವ ಕೆಲಸಗಾರರಿಗೆ, ಏಜೆಂಟರಿಗೆ ಹಾಗೂ ರೈತರಿಗೆ ಹಲವು ಆಮಿಷ ಒಡ್ಡಿ ಜಿಲ್ಲಾ ವ್ಯಾಪ್ತಿಯ ಕಬ್ಬನ್ನು ಖಾಸಗಿಯವರು ಸೆಳೆಯುತ್ತಿದ್ದಾರೆ.

ಖಾಸಗಿ ಕಾರ್ಖಾನೆಗಳು ಕಬ್ಬು ಕಡಿದು, ತುಂಬುವ ಕಾರ್ಮಿಕ (ಗ್ಯಾಂಗ್‌ಮೆನ್‌)ರನ್ನು ನೇಮಿಸಿಕೊಂಡಿವೆ. ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಿಂದ ಬಂದ ಕಾರ್ಮಿಕರು ಖಾಸಗಿಯವರ ಕಪಿಮುಷ್ಟಿಯಲ್ಲಿದ್ದಾರೆ. ಅವರಿಗೆ ಮುಂಗಡ ಕೂಲಿ, ಬೋನಸ್‌ ನೀಡುತ್ತಿರುವ ಮಾಲೀಕರು ಜಿಲ್ಲಾ ವ್ಯಾಪ್ತಿಯ ಕಬ್ಬನ್ನು ತಮ್ಮ ಕಾರ್ಖಾನೆಗೆ ಸಾಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಮೈಷುಗರ್‌ ಕಾರ್ಖಾನೆಯಲ್ಲಿ ಕಬ್ಬು ಕಡಿಯುವ ಕಾರ್ಮಿಕರು ಇಲ್ಲದ ಕಾರಣ ತನ್ನ ವ್ಯಾಪ್ತಿಯ ಕಬ್ಬು ಕಳೆದುಕೊಳ್ಳುತ್ತಿದೆ.

‘ಮೈಷುಗರ್‌ ಕಾರ್ಖಾನೆ ಆರಂಭಕ್ಕೂ ಮೊದಲೇ ನಾವು ಕಾರ್ಮಿಕರನ್ನು ಗೊತ್ತು ಮಾಡುವಂತೆ ಹೇಳಿದ್ದೆವು. ಕೆಲ ಕಾರ್ಮಿಕರು ಬಂದರೂ ಅವರಿಗೆ ಕಾರ್ಖಾನೆಯವರು ಅಷ್ಟೊಂದು ಮಹತ್ವ ಕೊಡಲಿಲ್ಲ. ಹೀಗಾಗಿ ಅವರು ಬೇರೆ ಕಾರ್ಖಾನೆಯತ್ತ ಗುಳೇ ಹೋದರು. ಈಗ ಕಾರ್ಖಾನೆ ಆರಂಭವಾಗಿದ್ದರೂ ಕಬ್ಬಿನ ಕೊರತೆ ಎದುರಾಗಿದೆ. ಲಾರಿ ಹಾಗೂ ಟ್ರ್ಯಾಕ್ಟರ್‌ ಮೂಲಕ ಕಬ್ಬು ಬರುತ್ತಿಲ್ಲ. ಸ್ಥಳೀಯ ರೈತರು ಎತ್ತಿನಗಾಡಿಯಲ್ಲಿ ತಂದು ಹಾಕುತ್ತಿರುವ ಕಬ್ಬನ್ನಷ್ಟೇ ಮೈಷುಗರ್‌ ಅರೆಯುತ್ತಿದೆ. ಉತ್ತಮ ಇಳುವರಿ ಬರುವ ಗುಣಮಟ್ಟದ ಕಬ್ಬು ಖಾಸಗಿ ಕಾರ್ಖಾನೆಗಳ ಪಾಲಾಗುತ್ತಿದೆ’ ಎಂದು ಕಬ್ಬು ಒಪ್ಪಿಗೆದಾರರ ಸಂಘದ ಅಧ್ಯಕ್ಷ ಎಸ್‌.ಕೃಷ್ಣ ಹೇಳಿದರು.

ಖಾಸಗಿ ಸಕ್ಕರೆ ಲಾಬಿ

ಮೈಷುಗರ್‌ ಕಾರ್ಖಾನೆಗೆ ಕಬ್ಬು ಕೊರತೆಯಾಗಲು ಖಾಸಗಿ ಲಾಬಿಯೂ ಪ್ರಮುಖ ಕಾರಣವಾಗಿದೆ. ಅನ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಅತಿ ಕಡಿಮೆ ದರಕ್ಕೆ ಕಬ್ಬು ಸಾಗಣೆ ಮಾಡುತ್ತಿದ್ದಾರೆ. ಆ ಮೂಲಕ ಮೈಷುಗರ್‌ ಕಾರ್ಖಾನೆಗೆ ಕಬ್ಬು ಕೊರತೆಯಾಗುವಂತೆ ನೋಡಿಕೊಳ್ಳುತ್ತಿವೆ. ಕಣ್ಣ ಮುಂದೆ ಅನ್ಯಾಯ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಈ ಲಾಬಿಯ ಹಿಂದೆ ಸ್ಥಳೀಯ ಜನಪ್ರತಿನಿಧಿಗಳೂ ಶಾಮೀಲಾಗಿದ್ದಾರೆ ಎಂದು ರೈತರು ಆರೋಪಿಸುತ್ತಾರೆ.

‘ಬೇರೆ ಜಿಲ್ಲೆಗೆ ಕಬ್ಬು ಸಾಗಿಸಲು ಕಡಿಮೆ ಎಂದರೂ ಪ್ರತಿ ಟನ್‌ಗೆ ₹ 500 ವೆಚ್ಚವಾಗುತ್ತದೆ. ಆದರೆ ಖಾಸಗಿ ಕಾರ್ಖಾನೆ ಮಾಲೀಕರು ಟನ್‌ ಕಬ್ಬನ್ನು ಕೇವಲ ₹ 150ಕ್ಕೆ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ರೈತರು ಮೈಷುಗರ್‌ ಬಿಟ್ಟು ಖಾಸಗಿ ಕಾರ್ಖಾನೆಗಳಿಗೆ ಕಬ್ಬು ಸಾಗಿಸಲು ಒಪ್ಪುತ್ತಿದ್ದಾರೆ. ಇದರ ಹಿಂದೆ ಸಕ್ಕರೆ ಲಾಬಿ ಇದೆ’ ಎಂದು ಹೋರಾಟಗಾರ ನಾಗರಾಜ್‌ ದೂರಿದರು.

ಖಾಸಗಿ ಕಾರ್ಖಾನೆ ಮಾಲೀಕರಿಗೆ ನೋಟಿಸ್‌

‘ಮೈಷುಗರ್‌ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೇರೆ ಜಿಲ್ಲೆಯ ಖಾಸಗಿ ಕಾರ್ಖಾನೆಗೆ ಹೋಗುತ್ತಿರುವ ಬಗ್ಗೆ ದೂರು ಬಂದಿವೆ. ಈ ಕುರಿತು ಖಾಸಗಿ ಕಾರ್ಖಾನೆ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು. ಸದ್ಯ ಮೈಷುಗರ್ ಕಾರ್ಖಾನೆಗೆ ಕಬ್ಬು ಕೊರತೆಯಾಗದಂತೆ ನೋಡಿಕೊಳ್ಳಲಾಗಿದೆ. 2.80 ಲಕ್ಷ ಟನ್‌ ಒಪ್ಪಿಗೆ ಪಡೆದ ಕಬ್ಬು ಇದೆ. ಪ್ರತಿದಿನ 1.5 ಸಾವಿರ ಟನ್‌ ಅರೆಯಲಾಗುತ್ತಿದೆ. ಅದನ್ನು ಹಂತಹಂತವಾಗಿ ಹೆಚ್ಚಿಸಲಾಗುವುದು. ಹಾವೇರಿ ಕಡೆಯಿಂದ ಕಾರ್ಮಿಕರನ್ನು ಕರೆಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕಾರ್ಖಾನೆಗೆ ಕಬ್ಬು ಪೂರೈಸಿದ 24 ಗಂಟೆಯೊಳಗೆ ಪ್ರತಿ ಟನ್‌ಗೆ ₹ 1,500 ಮುಂಗಡ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ’ ಎಂದು ಮೈಷುಗರ್‌ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ನಾಗಭೂಷಣ್‌ ಹೇಳಿದರು.

***

* 2.80 ಲಕ್ಷ ಟನ್‌ ಮೈಷುಗರ್‌ ಕಾರ್ಖಾನೆಗೆ ಒಪ್ಪಿಗೆಯಾಗಿರುವ ಕಬ್ಬು

* ₹ 2,613 ಪ್ರತಿಟನ್‌ ಕಬ್ಬಿನ ಎಫ್‌ಆರ್‌ಪಿ ದರ

* ₹ 1,500 ಟನ್‌ ಕಬ್ಬಿಗೆ ಮೈಷುಗರ್‌ ನೀಡುತ್ತಿರುವ ಮುಂಗಡ ಹಣ

* ₹ 110 10 ಕಿ.ಮೀ.ಗೆ ನಿಗದಿತ ಸಾಗಣೆ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT