ಮೋದಿ ಮೂತಿ ನೋಡಿ ಹೇಗೆ ವೋಟ್ ಹಾಕ್ತಾರೆ: ಎಂ.ಬಿ. ಪಾಟೀಲ

ಮಂಗಳವಾರ, ಏಪ್ರಿಲ್ 23, 2019
33 °C
'ಉಗ್ರರು 250 ಕೆ.ಜಿ. ಆರ್‌ಡಿಎಕ್ಸ್‌ ತರುವಾಗ ಚೌಕಿದಾರ್ ಏನು ಮಾಡುತ್ತಿದ್ದ'

ಮೋದಿ ಮೂತಿ ನೋಡಿ ಹೇಗೆ ವೋಟ್ ಹಾಕ್ತಾರೆ: ಎಂ.ಬಿ. ಪಾಟೀಲ

Published:
Updated:

ಹುಬ್ಬಳ್ಳಿ: ‘ಮೋದಿ ಮೂತಿ ನೋಡಿ ಮತ ಹಾಕಿ ಎಂದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳು ಕೇಳುತ್ತಿದ್ದಾರೆ. ನೀಡಿದ ಆಶ್ವಾಸನೆ ಈಡೇರಿಸದ, ಕೆಲಸ ಮಾಡದ ಮೋದಿ ಮೂತಿ ನೋಡಿ ಜನ ಹೇಗೆ ವೋಟ್ ಹಾಕ್ತಾರೆ’ ಎಂದು ಗೃಹ ಸಚಿವ ಎಂ.ಬಿ. ಪಾಟೀಲ ಪ್ರಶ್ನಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದ ನೂರು ದಿನಗಳ ಒಳಗೆ ವಿದೇಶದಲ್ಲಿರುವ ಕಪ್ಪು ಹಣ ತಂದು ಎಲ್ಲರ ಖಾತೆಗೆ ₹ 15 ಲಕ್ಷ ಹಾಕುತ್ತೇನೆ ಎಂದರು. ಆದರೆ ಐದು ವರ್ಷವಾದರೂ ಒಂದೇ ಒಂದು ರೂಪಾಯಿ ಕಪ್ಪು ಹಣ ತಂದಿಲ್ಲ. ಆರ್‌ಬಿಐ ಸಹಮತಿ ಇಲ್ಲದೆ ನೋಟು ಅಮಾನ್ಯ ಮಾಡಿದರು, ಪರಿಣಾಮ ಹೊಸ ನೋಟು ಮುದ್ರಣ ಹಾಗೂ ಸಾಗಣೆಗೆ ₹ 38 ಸಾವಿರ ಕೋಟಿ ಖರ್ಚಾಯಿತು. ಶೇ 100ರಷ್ಟು ಹಣವನ್ನು ಜನರು ಬದಲಾಯಿಸಿಕೊಂಡರು’ ಎಂದರು.

‘ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಲು ಪುಲ್ವಾಮ ಉಗ್ರರ ದಾಳಿ ಹಾಗೂ ಬಾಲಾಕೋಟ್‌ ಮೇಲೆ ಭಾರತೀಯ ಸೈನಿಕರು ನಡೆಸಿದ ದಾಳಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಉಗ್ರರು 250 ಕೆ.ಜಿ. ಆರ್‌ಡಿಎಕ್ಸ್‌ ದೇಶದ ಒಳಗೆ ತರುವಾಗ ಚೌಕಿದಾರ್ ಏನು ಮಾಡುತ್ತಿದ್ದ’ ಎಂದು ಪ್ರಶ್ನಿಸಿದರು.

‘ವಿರೋಧ ಪಕ್ಷಗಳ ಮುಖಂಡರನ್ನು ಗುರಿಯಾಗಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೂಲಕ ದಾಳಿ ನಡೆಸುತ್ತಿದ್ದಾರೆ. ಪ್ರತಿ ಶಾಸಕರ ಖರೀದಿಗೆ ಯಡಿಯೂರಪ್ಪ ಅವರು ₹30 ಕೋಟಿ ಆಮಿಷವೊಡ್ಡಿದ ಆಡಿಯೊ ಬಹಿರಂಗವಾಗಿತ್ತು. ಆ ಧ್ವನಿ ತಮ್ಮದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಒಬ್ಬ ಶಾಸಕನಿಗೆ ₹ 30 ಕೋಟಿಯಾದರೆ 20 ಶಾಸಕರಿಗೆ ₹ 600 ಕೋಟಿಯಾಗುತ್ತದೆ. ಆದರೂ ಏಕೆ ಅವರ ಮನೆಯ ಮೇಲೆ ಐಟಿ ದಾಳಿಯಾಗಲಿಲ್ಲ’ ಎಂದರು.

‘ವಿನಯ ಕುಲಕರ್ಣಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ಧಾರವಾಡ ಭಾಗದ ರೈತರು, ಮಹಿಳೆಯರು ಹಾಗೂ ಸಾಮಾನ್ಯ ಜನರನ್ನು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಾರೆ. ಸಂತೋಷ್‌ ಲಾಡ್‌, ಕೆ.ಎನ್. ಗಡ್ಡಿ ಸೇರಿದಂತೆ ಎಲ್ಲ ಮುಖಂಡರು ಕುಲಕರ್ಣಿ ಅವರ ಪರ ಪ್ರಚಾರ ಮಾಡುತ್ತಿದ್ದಾರೆ’ ಎಂದರು.

‘ಹಿಂದಿನ ಯುಪಿಎ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳ ಆಧಾರದ ಮೇಲೆ ನಾವು ಮತ ಕೇಳುತ್ತೇವೆ. ಮಲಪ್ರಭಾ ಕಾಲುವೆ ದುರಸ್ತಿ ಮಾಡುವ ಮೂಲಕ ಈ ಭಾಗದ ರೈತರ ಬೇಡಿಕೆಯನ್ನು ನಾನು ಈಡೇರಿಸಿದ್ದೆ. ನೀರಾವರಿಗೆ ₹ 50 ಸಾವಿರ ಕೋಟಿಯನ್ನು ಹಿಂದಿನ ಸರ್ಕಾರದಲ್ಲಿ ಖರ್ಚು ಮಾಡಲಾಗಿತ್ತು’ ಎಂದು ತಿಳಿಸಿರು.

‘ಸಂವಿಧಾನ ಬದಲಾವಣೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರನ್ನು ಸಂಪುಟದಿಂದ ಮೋದಿ ವಜಾ ಮಾಡಲಿಲ್ಲ. ಅಂದರೆ ಆ ಹೇಳಿಕೆಗೆ ಅವರ ಪರೋಕ್ಷ ಬೆಂಬಲ ಇದೆ ಎಂದು ಅರ್ಥ’ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !