ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಒಬ್ಬ ಆಧುನಿಕ ಭಸ್ಮಾಸುರ: ವಿ.ಎಸ್‌. ಉಗ್ರಪ್ಪ ಆರೋಪ

ಆಡಳಿತ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಭಾವನಾತ್ಮಕ ವಿಷಯ ಮುಂದೆ: ಉಗ್ರಪ್ಪ
Last Updated 27 ಡಿಸೆಂಬರ್ 2019, 5:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಪ್ಪು ಹಣ ತರುವುದು, ಉದ್ಯೋಗ ಸೃಷ್ಟಿ, ದೇಶದ ಆರ್ಥಿಕ ದುಸ್ಥಿತಿ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿಯಂತಹ ಭಾವನಾತ್ಮಕ ವಿಷಯಗಳನ್ನು ಬಿಜೆಪಿ ಮುಂದೆ ಮಾಡಿದೆ ಎಂದು ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಉದ್ಯೋಗ ಸೃಷ್ಟಿಸಿರುವುದಿರಲಿ, ಇರುವ ಉದ್ಯೋಗಗಳೂ ಉಳಿಯುತ್ತಿಲ್ಲ. ಭ್ರಷ್ಟಾಚಾರ ನಿಗ್ರಹದಲ್ಲಿಯೂ ವಿಫಲವಾಗಿದೆ. ಮೋದಿ, ಆಧುನಿಕ ಭಸ್ಮಾಸುರ’ ಎಂದು ಟೀಕಿಸಿದರು.

‘ದೇಶದ ಆರ್ಥಿಕ ಕುಸಿತವನ್ನು ತಡೆಯದಿದ್ದರೆ, ಮುಂದೊಂದು ದಿನ ದೇಶ ಬಿಜೆಪಿ ಮುಕ್ತವಾಗಲಿದೆ ಎಂದು ಬಿಜೆಪಿಯ ರಾಜ್ಯಸಭೆ ಸದಸ್ಯ ಸುಬ್ರಮಣ್ಯಂ ಸ್ವಾಮಿ ಹೇಳಿದ್ದಾರೆ. ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವಾಗುತ್ತಿದೆ. ಭರವಸೆ ಈಡೇರಿಸದೆ, ಭಾವನಾತ್ಮಕ ವಿಷಯದ ಮೂಲಕ ಜನರ ದಾರಿಯನ್ನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಮಾಡುತ್ತಿದ್ದಾರೆ’ ಎಂದು ದೂರಿದರು.

‘ವೋಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಸಮಾಜ ಒಡೆದಾಳುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯ ಸಂವಿಧಾನ ವಿರೋಧ ನೀತಿ ವಿರುದ್ಧ ಜನರೇ ಹೋರಾಟ ಮಾಡುತ್ತಿದ್ದಾರೆ. ಮುಂದೆ ಅನಾಹುತವಾದರೆ ಅದಕ್ಕೆ ಅವರೇ ಹೊಣೆಯಾಗಿದ್ದಾರೆ’ ಎಂದು ಹೇಳಿದರು.

‘ಅನಕ್ಷರಸ್ಥರು, ಪಂಕ್ಚರ್‌ ಮಾಡುವವರು ಗಲಭೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಕಾಯಕ ಮಾಡುವವರಿಗೆ ಅಪಮಾನ ಮಾಡಿದ್ದಾರೆ. ಮಂಗಳೂರು ಗೋಲಿಬಾರ್‌ ಘಟನೆಯು ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಬೇಹುಗಾರಿಕೆ ವಿಭಾಗ ಏನು ಮಾಡುತ್ತಿತ್ತು’ ಎಂದು ಪ್ರಶ್ನಿಸಿದರು.

‘ಸಿಎಎ ಹಾಗೂ ಎನ್‌ಆರ್‌ಸಿಯಿಂದ ಕೇವಲ ಮುಸ್ಲಿಂರಿಗೆ ಮಾತ್ರ ತೊಂದರೆಯಾಗುವುದಿಲ್ಲ. ಸಮಾಜದ ಎಲ್ಲ ವರ್ಗದವರಿಗೂ ಒಂದಲ್ಲ, ಒಂದು ರೀತಿ ತೊಂದರೆಯಾಗುತ್ತದೆ’ ಎಂದರು.

ಮುಖಂಡರಾದ ಶಿವಾ ನಾಯ್ಕ, ಅನಿಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT