ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರಿಗೂ ಮುನ್ನವೇ ಮುಗ್ಗರಿಸಿದ ಮಹಾನಗರ

Last Updated 29 ಮೇ 2019, 19:30 IST
ಅಕ್ಷರ ಗಾತ್ರ

ಫುಟ್‌ಪಾತ್‌ಗಳಲ್ಲಿ ಗುಡ್ಡೆ ಹಾಕಿದ ಮರಗಳ ರೆಂಬೆ, ಕೊಂಬೆಗಳು, ಎಲ್ಲೆಂದರಲ್ಲಿ ಹರಡಿದ ಒಣ ಎಲೆಗಳು. ರಸ್ತೆಗಳಲ್ಲಿ ಕುಣಿಕೆಯಂತೆ ಇಳಿಬಿದ್ದ ಒಎಫ್‌ಸಿ ಕೇಬಲ್‌ ಸಿಂಬೆಗಳು. ಗರಗಸ ಯಂತ್ರಗಳನ್ನು ಹಿಡಿದು ಮರಗಳನ್ನು ಕಡಿಯುತ್ತಿರುವ ಬಿಬಿಎಂಪಿ ಮತ್ತು ಬೆಸ್ಕಾಂ ಸಿಬ್ಬಂದಿ...

ಬಹುತೇಕ ಬೆಂಗಳೂರಿನ ಎಲ್ಲ ಬಡಾವಣೆ, ರಸ್ತೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಮುಂಗಾರು ಮಳೆಗೂ ಮುನ್ನವೇ ಬೆಂಗಳೂರು ಮುಗ್ಗರಿಸಿದೆ. ಎರಡು ದಿನಗಳ ಹಿಂದೆ ಸುರಿದ ಮಳೆ, ಗಾಳಿಗೆ ಸುಸ್ತು ಹೊಡೆದಿರುವ ನಗರವಾಸಿಗಳಿಗೆಚೇತರಿಸಿಕೊಳ್ಳಲು ಇವರೆಗೂ ಸಾಧ್ಯವಾಗುತ್ತಿಲ್ಲ.

ಎರಡು ದಿನ ಮಳೆ ಬಿಡುವು ನೀಡಿದ್ದು ನೆಲಕ್ಕುರುಳಿದ್ದ ಮರ ಮತ್ತು ಟೊಂಗೆಗಳನ್ನು ತೆರವು ಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.ಮರದ ರೆಂಬೆ, ಕೊಂಬೆಗಳನ್ನು ಕಡಿದು ಗುಡ್ಡೆ ಹಾಕಿ ಹೋಗಿದ್ದು, ಅವು ಇನ್ನೂ ಫುಟ್‌ಪಾತ್‌ ಮೇಲೆ ಕೊಳೆಯುತ್ತಿವೆ.ಅವುಗಳನ್ನು ಇನ್ನೂ ಯಾಕೆ ಸಾಗಿಸಿಲ್ಲ ಎಂದು ಕೇಳಿದರೆ ಸಿಬ್ಬಂದಿ ಕೊರತೆ ಎಂದು ಎಂದು ಬಿಬಿಎಂಪಿ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಕಡಿದು ಹಾಕಿದ ಮರಗಳನ್ನು ಸಾಗಿಸಲುಹೊರ ಗುತ್ತಿಗೆ ನೀಡಲಾಗಿದ್ದು, ಇನ್ನೂ ಎರಡು ದಿನಗಳ ಒಳಗಾಗಿ ಎಲ್ಲ ಕೊಂಬೆಗಳನ್ನು ಸಾಗಿಸುವುದಾಗಿ ಹೇಳುತ್ತಾರೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವುಗೊಳಿಸದ ಕಾರಣ ಟ್ರಾಫಿಕ್‌ ಸಮಸ್ಯೆ ಎದುರಾಗಿದೆ.ದೂರದರ್ಶನ ಕೇಂದ್ರದ ಎದುರಿನ ಜಯಮಹಲ್‌ ರಸ್ತೆಯಲ್ಲಿ ದೈತ್ಯ ಮರಗಳು ಮತ್ತು ಟೊಂಗೆಗಳು ರಸ್ತೆಯಲ್ಲಿ ಹರಡಿಕೊಂಡಿದ್ದು ವಾಹನ ಸವಾರರು ಬಿಬಿಎಂಪಿಯನ್ನು ಶಪಿಸುತ್ತಿದ್ದಾರೆ.ಈಗಲೇ ಹಿಂಗಾದರೆ ಮುಂಗಾರು ಮಳೆ ಶುರುವಾದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಇನ್ನೂ ಕತ್ತಲಲ್ಲಿ ಮುಳುಗಿರುವ ಬಡಾವಣೆಗಳಿಗೆ ಒಂದೆರೆಡು ದಿನದಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಬೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ದಿಕ್ಕುದಸೆ ಇಲ್ಲದ ರಾಶಿ, ರಾಶಿ ಕೇಬಲ್‌ ಗುಡ್ಡೆಗಳು ರಸ್ತೆಗಳಲ್ಲಿ ಬಿದ್ದಿವೆ. ಬಿಬಿಎಂಪಿ ಸಿಬ್ಬಂದಿ ಕೇಬಲ್‌ ಕಡಿದು ಹಾಕಿ ಮೂರ‍್ನಾಲ್ಕು ದಿನವಾದರೂ ಖಾಸಗಿ ಟೆಲಿಕಾಂ ಮತ್ತು ಟಿ.ವಿ ಕಂಪನಿ ಸಿಬ್ಬಂದಿ ಎತ್ತಿ ಹಾಕಿಲ್ಲ. ಕಡಿತಗೊಂಡಿರುವ ಟಿ.ವಿ. ಮತ್ತು ಅಂತರ್ಜಾಲ ಸಂಪರ್ಕ ಇದುವರೆಗೂ ದುರಸ್ತಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT