ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧರಿಗೆ ರಾಜಧಾನಿಯ ಕಂಬನಿ

Last Updated 15 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾದಲ್ಲಿ ಗುರುವಾರ ಉಗ್ರರು ನಡೆಸಿದ ದಾಳಿಯಿಂದ ಹುತಾತ್ಮರಾದ 44 ಯೋಧರಿಗಾಗಿ ನಗರದ ಜನ ಕಂಬನಿ ಮಿಡಿದರು.

ಉಗ್ರರು ನಡೆಸಿದ ಹೀನ ಕೃತ್ಯಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿಗಳು, ಎಲ್ಲ ಪಕ್ಷಗಳ ರಾಜಕೀಯ ನಾಯಕರು, ಕಲಾವಿದರು, ವಿವಿಧ ಸಂಘಟನೆಗಳ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಹುತಾತ್ಮರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಲಾಯಿತು. ಸೈನಿಕರ ಕುಟುಂಬಗಳ ಮೇಲೆ ಸಹಾನುಭೂತಿ, ಅವರಿಗೆ ಆತ್ಮಸ್ಥೈರ್ಯ ತುಂಬುವ ಕುರಿತು ಮಾತುಗಳು ಶ್ರದ್ಧಾಂಜಲಿ ಸಭೆಗಳಲ್ಲಿ ಕೇಳಿ ಬಂದವು.

ಶಾಲಾ ಕಾಲೇಜುಗಳಲ್ಲಿಯೂ ವಿದ್ಯಾರ್ಥಿಗಳು ಮೌನ ಆಚರಿಸಿ ಗೌರವ ಅರ್ಪಿಸಿದರು. ನಗರದ ಮೂಲೆ ಮೂಲೆಗಳಲ್ಲೂ ಹುತಾತ್ಮರ ಗೌರವಾರ್ಥ ಜನರು ಮೋಂಬತ್ತಿ ಬೆಳಗಿದರು.ಕೆಲವು ಸಂಘಟನೆಗಳ ಮುಖಂಡರಂತೂ ಪಾಕಿಸ್ತಾನದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.

ಶುಕ್ರವಾರ ಬೆಳಿಗ್ಗೆಯಿಂದಲೇ ಬೀದಿಗಿಳಿದ ಸಂಘ ಸಂಸ್ಥೆಗಳ ಮುಖಂಡರು ಉಗ್ರವಾದದ ವಿರುದ್ಧ ಘೋಷಣೆ ಕೂಗಿದರು. ಪಾಕಿಸ್ತಾನದ ಉಗ್ರ ಆಸಾದ್ ಅಜರ್ ಪ್ರತಿಕೃತಿಗಳು ಮತ್ತು ಬಾವುಟ ದಹಿಸಲಾಯಿತು.

ನಗರದ ಕೆಲವು ವೃತ್ತಗಳಲ್ಲಿ ನಾಗರಿಕರು ಉಗ್ರರ ದಾಳಿಗೆ ಬಲಿಯಾದ ಮಂಡ್ಯದ ಯೋಧ ಗುರು ಅವರ ಭಾವಚಿತ್ರವನ್ನಿಟ್ಟು ಪುಷ್ಪನಮನ ಸಲ್ಲಿಸಿದರು. ಸಮಾನ ಮನಸ್ಕ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಪುರಭವನದ ಮುಂಭಾಗ ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದರು.

‘ಯೋಧರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಇಂಥ ದುರ್ಘಟನೆ ಮರುಕಳಿಸದಂತೆ ಸರ್ಕಾರ ಎಚ್ಚರವಹಿಸಬೇಕು. ಯೋಧರ ಮೇಲಿನ ಭಯೋತ್ಪಾದಕರ ದಾಳಿ ಧರ್ಮ ಹಾಗೂ ದೇಶಕ್ಕೆ ಸೀಮಿತವಲ್ಲ. ಭಯೋತ್ಪಾದನಾ ದಾಳಿ ತಡೆಯಲು ವಿಶ್ವವೇ ಒಂದಾಗಬೇಕು’ ಎಂಬ ಕೂಗು ಕೇಳಿ ಬಂತು.

ಪುರಭವನದ ಮುಂಭಾಗ ಸಂತಾಪ: ಬಜರಂಗ ದಳ ಸಂಘಟನೆಯ ಕಾರ್ಯಕರ್ತರು ಪುರಭವನದ ಎದುರು ಹುತಾತ್ಮ ಸೈನಿಕರಿಗೆ ಕ್ಯಾಂಡಲ್‌ ಬೆಳಗಿ ಸಂತಾಪ ಸೂಚಿಸಿದರು. ಹಿಂದೂ ವೇದಿಕೆಯಿಂದ ಜೆ.ಸಿ.ನಗರದ ಮಠದಹಳ್ಳಿ ಬಸ್‌ ನಿಲ್ದಾಣದ ಭಗತ್‌ಸಿಂಗ್‌ ಪುತ್ಥಳಿಯ ಮುಂದೆ ಜನರು ಸೇರಿ ಮೋಂಬತ್ತಿ ಬೆಳಗಿದರು.

ನಗರ ಕೇಂದ್ರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಕಾರ್ಯಕರ್ತರು ಸೈನಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಎರಡು ನಿಮಿಷ ಮೌನಚರಣೆ ಮಾಡಿದರು. ಕವಿಕಾ ಮಾಜಿ ಅಧ್ಯಕ್ಷ ಎಸ್.ಮನೋಹರ್, ಸಮಿತಿ ಅಧ್ಯಕ್ಷ ಜಿ.ಜನಾರ್ದನ, ಕೆಪಿಸಿಸಿ ವಕ್ತಾರ ಸಲೀಂ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಶಿವಾಜಿನಗರದ ಬಿಜೆಪಿ ಮಂಡಲದ ವತಿಯಿಂದ ಜವಾಹರಲಾಲ್ ನೆಹರೂ ತಾರಾಲಯದ ಎದುರು ಯೋಧರ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಸದೆ ಶೋಭಾ ಕರಂದ್ಲಾಜೆ ಭಾಗವಹಿಸಿದ್ದರು.

ಸಿಟಿಜನ್‌ ಫಾರ್‌ ಡೆಮಾಕ್ರಸಿ ವತಿಯಿಂದ ವಿಜಯನಗರ, ಮೈಸೂರು ಬ್ಯಾಂಕ್‌ ವೃತ್ತ, ಜಯನಗರ ಮತ್ತು ಗಾಂಧಿ ಬಜಾರ್‌ನಲ್ಲಿ, ವಿಜಯ ವಿವೇಕ ಪ್ರತಿಷ್ಠಾನದ ವತಿಯಿಂದ ನಗರದ ಸ್ವಾಮಿ ವಿವೇಕಾನಂದ ಉದ್ಯಾನದ ವಿವೇಕಾನಂದ ಪ್ರತಿಮೆ ಮುಂಭಾಗ ಶೋಕಾಚರಣೆ ನಡೆಯಿತು.

ನ್ಯಾಯಮೂರ್ತಿಗಳ ಶ್ರದ್ಧಾಂಜಲಿ

ಹೈಕೋರ್ಟ್‌ನ ಸಭಾಂಗಣ-1ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ, ‘ಉಗ್ರರ ದಾಳಿ ಖಂಡನಾರ್ಹವಾದದ್ದು, ಸೈನಿಕರು ಮತ್ತವರ ಕುಟುಂಬದ ಜೊತೆಗೆ ಇಡೀ ದೇಶ ನಿಲ್ಲಬೇಕಿದೆ. ಹಾಲಿ ಮತ್ತು ಮಾಜಿ ಸೈನಿಕರು ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿಯನ್ನು ನ್ಯಾಯಾಧೀಶರು ಮೊದಲ ಆದ್ಯತೆಯ ಮೇರೆಗೆ ವಿಚಾರಣೆ ನಡೆಸಿ ತ್ವರಿತವಾಗಿ ಇತ್ಯರ್ಥಪಡಿಸಬೇಕು. ಅಲ್ಲದೆ, ವಕೀಲರು ಸೈನಿಕರಿಂದ ಶುಲ್ಕ ಪಡೆಯದೆ ಉಚಿತವಾಗಿ ವಕಾಲತ್ತು ವಹಿಸಿ ಅವರ ಪರ ವಾದ ಮಂಡಿಸಬೇಕು. ಅದುವೇ ನಾವು ಯೋಧರಿಗೆ ಸಲ್ಲಿಸುವ ಅತಿದೊಡ್ಡ ಸೇವೆ’ ಎಂದರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಮತ್ತು ಸಂಘದ ಸದಸ್ಯರು ಶ್ರದ್ಧಾಂಜಲಿ ಸಲ್ಲಿಸಿದರು.

ರಾಜಕೀಯ ಪಕ್ಷಗಳಿಂದ ನಮನ

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಇತರ ರಾಜಕೀಯ ಪಕ್ಷಗಳ ನಾಯಕರು ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಸಿ.ಟಿ ರವಿ ಮಾತನಾಡಿ,‘ಪಾಕಿಸ್ತಾನದ ಪಾಪದ ಕೊಡ ತುಂಬಿದೆ. ದಾಳಿಗೆ ತಕ್ಕ ಉತ್ತರ ಕೊಡಲು ಸೇನೆಗೆ ಸ್ವತಂತ್ರ ಅವಕಾಶ ನೀಡುವುದಾಗಿ ಪ್ರಧಾನಿ ಹೇಳಿದ್ದಾರೆ’ ಎಂದರು. ಬಿಜೆಪಿಯ ಹಿರಿಯ ನಾಯಕ ರಾಮಚಂದ್ರಗೌಡ, ಪ್ರಧಾನ ಕಾರ್ಯದರ್ಶಿಗಳಾದ ಶೋಭಾ ಕರಂದ್ಲಾಜೆ, ಎನ್‌.ರವಿಕುಮಾರ್‌, ಸಂಸದ ಪಿ.ಸಿ.ಮೋಹನ್, ಮಾಜಿ ಶಾಸಕ ಮುನಿರಾಜು ಇದ್ದರು. ಮೇಣದ ಬತ್ತಿ ಬೆಳಗಿ ಹುತಾತ್ಮರಿಗೆ ಗೌರವ ಅರ್ಪಿಸಲಾಯಿತು.

ಕಾಂಗ್ರೆಸ್‌ ಕಚೇರಿ:ಕೆಪಿಸಿಸಿ ಕಚೇರಿಯಲ್ಲಿ 42 ಮೇಣದ ಬತ್ತಿಗಳನ್ನು ಬೆಳಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪಾಧ್ಯಕ್ಷ ಬಿ.ಎಲ್‌.ಶಂಕರ್‌, ಎಐಸಿಸಿ ಕಾರ್ಯದರ್ಶಿ ಡಾ.ಸಾಕೆ ಶೈಲಜಾನಾಥ್‌ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT