ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನಲ್ಲಿ ಕೊಂದು, ಬೆಂಗಳೂರಿನಲ್ಲಿ ಸಿಕ್ಕಿಬಿದ್ದ!

ಪತ್ನಿ ಕೊಂದಿದ್ದ ಟೆಕಿ 15 ವರ್ಷಗಳ ಬಳಿಕ ಸೆರೆ * ಹೆಸರು ಬದಲಿಸಿಕೊಂಡು ಕೆಲಸ ಮಾಡುತ್ತಿದ್ದ
Last Updated 24 ಅಕ್ಟೋಬರ್ 2018, 18:38 IST
ಅಕ್ಷರ ಗಾತ್ರ

ಬೆಂಗಳೂರು: ಗುಜರಾತ್‌ನಲ್ಲಿ ಪತ್ನಿಯನ್ನು ಕೊಂದು 15 ವರ್ಷಗಳಿಂದ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ತರುಣ್ ಜಿನ್‌ರಾಜ್ ಅಲಿಯಾಸ್ ಪ್ರವೀಣ್ ಬಾಟಲೆ (44) ಎಂಬ ಸಾಫ್ಟ್‌ವೇರ್ ಉದ್ಯೋಗಿಯನ್ನು ಅಹಮದಾಬಾದ್ ನಗರ ಪೊಲೀಸರು ಬಂಧಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತರುಣ್ ತನ್ನ ಸ್ನೇಹಿತನೊಂದಿಗೆ ಸೇರಿ 2003ರ ಫೆ.14ರಂದು ಪತ್ನಿ ಸಜಿನಿಯನ್ನು ಉಸಿರುಗಟ್ಟಿಸಿ ಕೊಂದಿದ್ದ. ಆ ನಂತರ ಪ್ರವೀಣ್ ಬಾಟಲೆ ಎಂದು ಹೆಸರು ಬದಲಾಯಿಸಿಕೊಂಡ ಆತ, ನಗರದ ‘ಒರಾಕಲ್’ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಹಂತ ಹಂತವಾಗಿ ಬಡ್ತಿ ಪಡೆದು, ಈಗ ಹಿರಿಯ ವ್ಯವಸ್ಥಾಪಕ ಹುದ್ದೆಗೇರಿದ್ದ.

ತನಿಖೆ ಯಾವ ಹಂತದಲ್ಲಿದೆ ಎಂದು ತಿಳಿಯುವ ಸಲುವಾಗಿ ತರುಣ್ ಇತ್ತೀಚೆಗೆ ಸಂಬಂಧಿಯೊಬ್ಬರಿಗೆ ಕರೆ ಮಾಡಿದ್ದ. ಆತನ ಆಪ್ತರ ಮೊಬೈಲ್ ಕರೆಗಳ ಮೇಲೆ ನಿರಂತರ ನಿಗಾ ಇಟ್ಟಿದ್ದ ಅಹಮದಾಬಾದ್ ಪೊಲೀಸರಿಗೆ, ಹಂತಕ ತಮ್ಮವರನ್ನು ಸಂಪರ್ಕಿಸಿರುವ ವಿಚಾರ ಅರಿವಿಗೆ ಬಂದಿದೆ. ಟವರ್ ಲೊಕೇಷನ್ ಪರಿಶೀಲಿಸಿದಾಗ ಆತ ಬೆಂಗಳೂರಿನಲ್ಲಿ ಅಡಗಿರುವುದು ಗೊತ್ತಾಗಿದೆ. ಮಂಗಳವಾರ ಮಧ್ಯಾಹ್ನ ನಗರಕ್ಕೆ ಬಂದ ಅವರು, ಸಿಸಿಬಿ ಪೊಲೀಸರ ನೆರವು ಕೇಳಿದ್ದಾರೆ.

ರಾತ್ರಿ ವೇಳೆ ಪೊಲೀಸರು ಮಫ್ತಿಯಲ್ಲಿ ಆ ಕಂಪನಿಗೆ ತೆರಳಿದಾಗ, ತರುಣ್ ರಾತ್ರಿ ಪಾಳಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ. ವಶಕ್ಕೆ ಪಡೆದು ಪರಿಶೀಲಿಸಿದಾಗ ಗುರುತಿನ ಚೀಟಿಯಲ್ಲಿ ‍‘ಪ್ರವೀಣ್ ಬಾಟಲೆ’ ಎಂಬ ಹೆಸರಿತ್ತು. ಆದರೆ, ಮೊಬೈಲ್ ತಪಾಸಣೆ ಮಾಡಿದಾಗ ಆತನೇ ತರುಣ್ ಎಂಬುದು ಖಚಿತವಾಗಿದೆ.

ಡಕಾಯಿತಿ ಕತೆ ಕಟ್ಟಿದ್ದ: ಅಹಮದಾಬಾದ್‌ನ ಶಾಲೆಯೊಂದರಲ್ಲಿ ಬ್ಯಾಸ್ಕೆಟ್‌ಬಾಲ್ ತರಬೇತುದಾರನಾಗಿದ್ದ ತರುಣ್, ಐಸಿಐಸಿಐ ಬ್ಯಾಂಕ್ ಉದ್ಯೋಗಿಯಾಗಿದ್ದ ಸಜಿನಿ ಅವರನ್ನು 2002ರಲ್ಲಿ ವಿವಾಹವಾಗಿದ್ದ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಾಂಪತ್ಯ, ಯುವತಿಯೊಬ್ಬಳ ಪ್ರವೇಶದಿಂದಾಗಿ ಹದಗೆಟ್ಟಿತ್ತು. ಆಕೆಯೂ ಬ್ಯಾಸ್ಕೆಟ್‌ಬಾಲ್ ತರಬೇತುದಾರಳಾಗಿದ್ದು, ತರುಣ್‌ನನ್ನು ಪ್ರೀತಿಸುತ್ತಿದ್ದಳು ಎಂದು ಹೇಳಲಾಗಿದೆ.

ಈ ವಿಚಾರವಾಗಿ ನಿತ್ಯ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಆಗ ತರುಣ್, ಸ್ನೇಹಿತನೊಂದಿಗೆ ಸೇರಿ ಪ್ರೇಮಿಗಳ ದಿನದಂದೇ ಪತ್ನಿಯನ್ನು ಕೊಂದಿದ್ದ. ಅಲ್ಲದೆ, ‘ಯಾರೋ ಡಕಾಯಿತರು ಮನೆಗೆ ನುಗ್ಗಿ ಪತ್ನಿಯನ್ನು ಕೊಂದಿದ್ದಾರೆ’ ಎಂಬ ಕತೆಯನ್ನೂ ಕಟ್ಟಿದ್ದ. ಸ್ಥಳ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ, ಗಂಡನ ಮೇಲೆಯೇ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ, ಆತನನ್ನು ವಿಚಾರಣೆಗೆ ಕರೆದಿದ್ದರು.

ಬಂಧನದ ಭೀತಿಗೆ ಒಳಗಾದ ತರುಣ್, ಫೆ.16ರಂದೇ ಗುಜರಾತ್ ತೊರೆದು ಕೇರಳ ಸೇರಿದ್ದ. ಆ ನಂತರ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಆರು ತಿಂಗಳು ಶೋಧ ನಡೆಸಿದರೂ ಆರೋಪಿ ಪತ್ತೆಯಾಗದಿದ್ದಾಗ, ಸೆಕ್ಷನ್ ಬದಲಿಸಿ ವರದಕ್ಷಿಣೆ ಸಾವು (304ಬಿ) ಆರೋಪದಡಿ ಪ್ರಕರಣ ದಾಖಲು ಮಾಡಿಕೊಂಡಿದ್ದರು. ಇದರಿಂದ ಬೇಸರಗೊಂಡ ಸಜಿನಿ ಪೋಷಕರು, ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದರು.

ಮೋದಿ ‌ಆದೇಶದ ಬಳಿಕ ಪುನಃ ತನಿಖೆ ಚುರುಕು ಪಡೆದುಕೊಂಡಿತ್ತು. 2004ರಲ್ಲಿ ತರುಣ್‌ನ ಸಹಚರನನ್ನು ವಶಕ್ಕೆ ಪಡೆದ ಪೊಲೀಸರು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅಸಲಿ ಕತೆ ಬಯಲಾಗಿತ್ತು. ಆದರೆ, ತರುಣ್‌ ಎಲ್ಲಿದ್ದಾನೆ ಎಂಬ ಸಣ್ಣ ಸುಳಿವೂ ಪೊಲೀಸರಿಗೆ ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT