ಸೋಮವಾರ, ಏಪ್ರಿಲ್ 19, 2021
28 °C
ಒಂದು ವರ್ಷದ ಹಿಂದಿನ ಕೊಲೆ ಪ್ರಕರಣದ ರಹಸ್ಯ ಬೇಧಿಸಿದ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು, ಮೂರು ಆರೋಪಿಗಳಿಗೆ ನ್ಯಾಯಾಂಗ ಬಂಧನ

ಎರಡನೇ ಪತ್ನಿ ಕೊಂದವನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಒಂದು ವರ್ಷದ ಹಿಂದೆ ನಡೆದಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣವನ್ನು ಇತ್ತೀಚೆಗೆ ಬೇಧಿಸಿದ್ದು, ಕೊಲೆಯಾದ ಮಹಿಳೆಯ ಪತಿ ಸೇರಿದಂತೆ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಿಂತಾಮಣಿ ನಗರದ ಚೌಡರೆಡ್ಡಿ ಪಾಳ್ಯದ ಪಾಪ್‌ಕಾರ್ನ್ ವ್ಯಾಪಾರಿ ವ್ಯಾಪಾರ ಮಾಡುತ್ತಿದ್ದ ಶಂಕರಪ್ಪ(50), ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ತನಕಲ್ ಮಂಡಲಂ ಬಿಸಿನವಾರಪಲ್ಲಿ ನಿವಾಸಿ ಸುರೇಶ್ ಹಾಗೂ ಅಬ್ಬುಗುಂಡು ಗ್ರಾಮದ ಮಂಜಮ್ಮ ಎಂಬುವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣ ಕುರಿತು ಮಾಹಿತಿ ನೀಡಿದ ಎಸ್ಪಿ ಕೆ.ಸಂತೋಷ್ ಬಾಬು, ‘2018ರ ಜೂನ್ 22 ರಂದು ಬಂಧಿತ ಪ್ರಮುಖ ಆರೋಪಿ ಶಂಕರಪ್ಪ ಪತ್ನಿ, ಚಿಂತಾಮಣಿ ತಾಲ್ಲೂಕಿನ ನಾರಾಯಣಹಳ್ಳಿ ಗ್ರಾಮದ ನಿವಾಸಿ ಪದ್ಮಾವತಿಯೊಂದಿಗೆ ಸೀರೆ ವ್ಯಾಪಾರಕ್ಕೆ ಎಂದು ಹೋದವರು ಮತ್ತೆ ವಾಪಸ್ ಬಂದಿಲ್ಲ ಎಂದು ಪದ್ಮಾವತಿ ಅವರ ತಾಯಿ ಗಂಗಮ್ಮ ಅವರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು’ ಎಂದು ಹೇಳಿದರು.

‘ದೂರು ನೀಡುವಾಗ ಗಂಗಮ್ಮ ಅಳಿಯ ಶಂಕರಪ್ಪ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅದರ ಆಧಾರದಲ್ಲಿ ಶಂಕರಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆ ಕೃತ್ಯದಲ್ಲಿ ಆತನಿಗೆ ಸಹಕರಿಸಿ ಇಬ್ಬರು ಆರೋಪಿಗಳನ್ನು ಸಹ ನಾವು ಬಂಧಿಸಿದ್ದೇವೆ’ ಎಂದು ತಿಳಿಸಿದರು.

‘ಪಾಪ್‌ಕಾರ್ನ್‌ ವ್ಯಾಪಾರ ಮಾಡಿಕೊಂಡಿದ್ದ ಆರೋಪಿ ಶಂಕರಪ್ಪ ಸುಮಾರು 27 ವರ್ಷಗಳ ಹಿಂದೆ ಆಂಧ್ರಪ್ರದೇಶದ ಮದನಪಲ್ಲಿ ಬಳಿಯಿರುವ ಬಾರ್ಲಪಲ್ಲಿಯ ಲಕ್ಷ್ಮೀದೇವಮ್ಮ ಎಂಬುವರನ್ನು ಮದುವೆಯಾಗಿದ್ದ. ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ವ್ಯಾಪಾರಕ್ಕಾಗಿ ಆಗಾಗ ಕೇರಳಕ್ಕೆ ಹೋಗಿಬರುತ್ತಿದ್ದ ಈತನಿಗೆ ಈ ವೇಳೆ ಪದ್ಮಾವತಿ ಅಣ್ಣ ಗಂಗರಾಜು ಪರಿಚಯವಾಗಿತ್ತು’ ಎಂದರು.

‘ಗಂಗರಾಜುಗೆ ಕೈಸಾಲ ನೀಡಿದ್ದ ಶಂಕರಪ್ಪ ಅದರ ನೆಪದಲ್ಲಿ ಆಗಾಗ ಅವರ ಮನೆಗೆ ಹೋಗಿಬರುತ್ತಿದ್ದ. ಈ ವೇಳೆ ಪದ್ಮಾವತಿ ಪರಿಚಯವಾಗಿತ್ತು. ಗಂಡನನ್ನು ತೊರೆದು ತವರು ಮನೆಯಲ್ಲಿದ್ದ ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡ ಆರೋಪಿ 5 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಒಪ್ಪಿಸಿ ಮದುವೆಯಾಗಿದ್ದ. ಬಳಿಕ ತಪಥೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ಸಂಸಾರ ಹೂಡಿದ್ದ, ಪದ್ಮಾವತಿ ಅವರಿಗೆ ಇಬ್ಬರು ಗಂಡು ಮಕ್ಕಳು ಜನಿಸಿದ್ದರು’ ಎಂದು ಹೇಳಿದರು.

‘ಶಂಕರಪ್ಪನಿಗೆ ಕೆಲ ವರ್ಷಗಳ ಹಿಂದೆ ಚಿಂತಾಮಣಿ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಕೆಲಸ ಮಾಡುತ್ತಿದ್ದ ಮಂಜಮ್ಮ ಎಂಬಾಕೆ ಪರಿಚಯವಾದರು. ಈಕೆಯೂ ಗಂಡನನ್ನು ತೊರೆದಿದ್ದರು. ಆಕೆಯನ್ನು ಪ್ರೀತಿಸಿದಂತೆ ಮಾಡಿ, ಪದ್ಮಾವತಿ ಮನವೊಲಿಸಿ ಮದುವೆಯಾಗಿ, ಎಲ್ಲರೂ ಒಂದೇ ಮನೆಯಲ್ಲಿದ್ದರು. ಜತೆಗೆ ಆಗಾಗ ಮೂರನೇ ಪತ್ನಿಯನ್ನು ಕರೆದುಕೊಂಡು ಕೇರಳಕ್ಕೆ ವ್ಯಾಪಾರಕ್ಕೆ ಹೋಗಿ ಬರುತ್ತಿದ್ದ’ ಎಂದು ತಿಳಿಸಿದರು.

‘ಪದ್ಮಾವತಿ ಕೂಡ ಬೇರೊಬ್ಬರ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಶಂಕರಪ್ಪ ಜತೆ ಸಂಸಾರ ನಡೆಸಲು ನಿರಾಕರಿಸಿದಳು. ಈ ಬಗ್ಗೆ ಗಲಾಟೆಯಾಗಿ ದೂರು ಕೂಡ ದಾಖಲಾಗಿತ್ತು. ಜೀವನಾಂಶ ನೀಡುವಂತೆ ಕೋರ್ಟ್‌ನಲ್ಲಿ ದಾವೆ ಕೂಡ ಹೂಡಿ, ರಾಜೀ ಪಂಚಾಯಿತಿ ನಂತರ ದೂರು ಹಿಂಪಡೆದಿದ್ದರು. ಬಳಿಕ ಆರೋಪಿ ಪತ್ನಿಯ ಕೊಲೆಗೆ ಸುರೇಶ್‌ ಸಹಕಾರ ಪಡೆದು ಸಂಚು ರೂಪಿಸಿದ್ದ’ ಎಂದರು.

‘ಸೀರೆ ವ್ಯಾಪಾರಕ್ಕೆ ಹೋಗುತ್ತಿದ್ದ ಪದ್ಮಾವತಿಯನ್ನು ಕಳೆದ ವರ್ಷದ ಜೂನ್‌ 22 ರಂದು ಆರೋಪಿಗಳು ಬಾಡಿಗೆ ಕಾರಿನಲ್ಲಿ ಗೋಕುಂಟೆ ಅರಣ್ಯದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಕಟ್ಟಿಗೆಯಿಂದ ಹೊಡೆದು, ಚಾಕುವಿನಿಂದ ತಿವಿದು ಹತ್ಯೆ ಮಾಡಿ, ಮೃತದೇಹವನ್ನು ಸುಟ್ಟು ಹಾಕಿದ್ದರು. ಆರೋಪಿಗಳೊಂದಿಗೆ ಇತ್ತೀಚೆಗೆ ಘಟನೆ ನಡೆದ ಸ್ಥಳದ ಮಹಜರು ಮಾಡಿದಾಗ ಪದ್ಮಾವತಿ ಸೀರೆ, ಬಳೆ, ಮೂಳೆಗಳು ಪತ್ತೆಯಾಗಿವೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು