ನಾರಾಯಣ ಸ್ವಾಮಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

7

ನಾರಾಯಣ ಸ್ವಾಮಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ

Published:
Updated:
Deccan Herald

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಹಾಗೂ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿದೆ.

’ಸಂಜಯನಗರ ಪೊಲೀಸರು ನನ್ನ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕು ಮತ್ತು ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ರದ್ದುಗೊಳಿಸಬೇಕು’ ಎಂದು ಕೋರಿ ವೈ.ಎ. ನಾರಾಯಣಸ್ವಾಮಿ ಸೇರಿ 22 ಜನರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪಣಾ ಪಟ್ಟಿಯಲ್ಲಿ, ವೈ.ಎ. ನಾರಾಯಣ ಸ್ವಾಮಿ ತಲೆ ಮರೆಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿರುವುದಕ್ಕೆ ನ್ಯಾಯಮೂರ್ತಿಗಳು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

’ಶಾಸಕರು ತಲೆ ಮರೆಸಿಕೊಳ್ಳಲು ಸಾಧ್ಯವೇ, ಚಾರ್ಜ್‌ಶೀಟ್‌ನಲ್ಲಿ ಈ ರೀತಿ ಉಲ್ಲೇಖಿಸಲು ಕಾರಣವೇನು ಎಂಬ ಬಗ್ಗೆ ಸಂಬಂಧಪಟ್ಟ ಡಿಸಿಪಿ ಹಾಗೂ ತನಿಖಾಧಿಕಾರಿ ಖುದ್ದು ಕೋರ್ಟ್‌ಗೆ ಹಾಜರಾಗಿ ಪ್ರಮಾಣಪತ್ರದ ಮೂಲಕ ವಿವರಣೆ ಕೊಡಬೇಕು’ ಎಂದು ನಿರ್ದೇಶಿಸಿದರು.

ವಿಚಾರಣೆಯನ್ನು ನ್ಯಾಯಾಲಯ  ಡಿ.15ಕ್ಕೆ ಮುಂದೂಡಿತು.

ಪ್ರಕರಣವೇನು?
2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಲೊಟ್ಟೆಗೊಲ್ಲಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವೈ.ಎ. ನಾರಾಯಣಸ್ವಾಮಿ ನಿಷೇಧಾಜ್ಞೆ ಉಲ್ಲಂಘಿಸಿ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದು ಪಕ್ಷದ ಅಭ್ಯರ್ಥಿಯ ವಿರುದ್ಧ ಘೋಷಣೆ ಕೂಗುತ್ತಾ, ಶಾಂತಿಯುತ ಮತದಾನಕ್ಕೆ ಭಂಗ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಸಂಜಯನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !