ವಿದ್ಯುತ್‌ ಉತ್ಪಾದನೆಗೆ ಗಾಳಿ–ಬೆಳಕು ಸಂಗಮ

7
ನೆಲಮಂಗಲದ ಯುವ ಎಂಜಿನಿಯರ್‌ ಅಭಿವೃದ್ಧಿಪಡಿಸಿದ್ದಾರೆ ಹೊಸ ಯಂತ್ರ

ವಿದ್ಯುತ್‌ ಉತ್ಪಾದನೆಗೆ ಗಾಳಿ–ಬೆಳಕು ಸಂಗಮ

Published:
Updated:
Deccan Herald

ಬೆಂಗಳೂರು: ಬಿಸಿಲಿದ್ದಾಗ ಗಾಳಿ ಕಡಿಮೆ ಇರುತ್ತದೆ. ಮೋಡ ಕವಿದ ವಾತಾವರಣದಲ್ಲಿ ಗಾಳಿಯ ವೇಗ ಹೆಚ್ಚಿರುತ್ತದೆ. ಬಿಸಿಲು– ಗಾಳಿ ಎರಡನ್ನೂ ಬಳಸಿಕೊಂಡರೆ, ದಿನಪೂರ್ತಿ, ವರ್ಷಪೂರ್ತಿ ವಿದ್ಯುತ್‌ ಉತ್ಪಾದಿಸಬಹುದು.

ಇಂತಹದ್ದೊಂದು ಆಲೋಚನೆ ಹೊಳೆದಿದ್ದು ನೆಲಮಂಗಲದ ಯುವ ಎಂಜಿನಿಯರ್‌ ಅರುಣ್‌ ಅವರಿಗೆ. ಅವರು ಪವನ ಶಕ್ತಿ ಹಾಗೂ ಸೌರ ಶಕ್ತಿ ಎರಡನ್ನೂ ಬಳಸಿ ವಿದ್ಯುತ್‌ ಉತ್ಪಾದಿಸುವ ಯಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಕೃಷಿ ಮೇಳದಲ್ಲಿ ಮೊದಲ ಬಾರಿ ಪ್ರದರ್ಶನಕ್ಕಿಟ್ಟಿರುವ
ಈ ಯಂತ್ರ ಜನರನ್ನು ಸೆಳೆಯುತ್ತಿದೆ. 

‘ಈಗಲೂ ವಿದ್ಯುತ್‌ ಸಂಪರ್ಕವೇ ಸಿಗದ ಅನೇಕ ಹಳ್ಳಿಗಳಿವೆ. ಅಲ್ಲಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಕೆಲವು ಊರುಗಳಲ್ಲಿ ಮನೆಗಳಿಗೆ ವಿದ್ಯುತ್‌ ಸಂಪರ್ಕವಿದ್ದರೂ ರೈತರ ಹೊಲಕ್ಕೆ  ತಲುಪಿಲ್ಲ. ಇಂತಹ ಕಡೆ ಈ ಯಂತ್ರವನ್ನು ಅಳವಡಿಸಿಕೊಳ್ಳಬಹುದು’ ಎನ್ನುತ್ತಾರೆ ಮಾರುತಿ ಕೃಷಿ ಉದ್ಯೋಗ್‌ ಸಂಸ್ಥೆಯ ಅರುಣ್‌.

‘ಈ ಯಂತ್ರವು 1 ಅಶ್ವಶಕ್ತಿ ಸಾಮರ್ಥ್ಯದ ಪಂಪ್‌ಸೆಟ್‌, 60 ವ್ಯಾಟ್‌ನ 5 ಬಲ್ಬ್‌ಗಳು, 2 ಫ್ಯಾನ್‌, ಟಿ.ವಿ. ಫ್ರಿಜ್‌ಗಳನ್ನು ಸತತ 24 ತಾಸು ಬಳಸುವಷ್ಟು ವಿದ್ಯುತನ್ನು ಒಂದು ದಿನದಲ್ಲಿ ಉತ್ಪಾದಿಸುತ್ತದೆ’ ಎಂದು ಮಾಹಿತಿ ನೀಡಿದರು.

‘ಈ ಯಂತ್ರಕ್ಕೆ ₹ 1 ಲಕ್ಷ ವೆಚ್ಚವಾಗುತ್ತದೆ. ಇದನ್ನು ಸಾಗಿಸಿ ಅಳವಡಿಸುವ ವೆಚ್ಚವೂ ಇದರಲ್ಲಿ ಸೇರಿದೆ. ಎರಡು ಸೌರ ಫಲಕಗಳು ಹಾಗೂ ಒಂದು ಗಾಳಿಯಂತ್ರ, 1.5 ಕಿಲೋವಾಟ್‌ ಸಾಮರ್ಥ್ಯದ ಇನ್‌ವರ್ಟರ್‌ ಹಾಗೂ 150 ಎಇಎಚ್‌ ಸಾಮರ್ಥ್ಯದ ಬ್ಯಾಟರಿಯನ್ನು ಇದು ಹೊಂದಿದೆ. ಈ ಯಂತ್ರಕ್ಕೆ ಐದು ವರ್ಷ ಖಾತರಿ ನೀಡುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸತತ ಎರಡು ವರ್ಷ ನಾನು ಈ ಯಂತ್ರವನ್ನು ಪರೀಕ್ಷೆಗೊಳಪಡಿಸಿದ್ದೇನೆ. ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿದ್ದೇನೆ. ಈಗಾಗಲೇ 10 ಮಂದಿ ಇದನ್ನು ಖರೀದಿಸಿದ್ದಾರೆ. ಹೊಸತಾಗಿ ಮನೆ ನಿರ್ಮಿಸುವಾಗ ವಿದ್ಯುತ್‌ ಸಂಪರ್ಕಕ್ಕಾಗಿ ಜನ ಲಕ್ಷಾಂತರ ರೂಪಾಯಿ
ವೆಚ್ಚಮಾಡುತ್ತಾರೆ. ಅದರ ಬದಲು ಮನೆಯ ಟೆರೇಸ್‌ನಲ್ಲಿ ಈ ಯಂತ್ರವನ್ನು ಅಳವಡಿಸಿ, ಉಚಿತವಾಗಿ
ವರ್ಷಾನುಗಟ್ಟಲೆ ವಿದ್ಯುತ್‌ ‍ಪಡೆಯಬಹುದು’ ಎಂದು ಅವರು ವಿವರಿಸಿದರು.

ಏನಿದರ ವಿಶೇಷ?

‘ಈ ಯಂತ್ರದಲ್ಲಿ ಮೂರು ಗಾಳಿ ರೆಕ್ಕೆಗಳಿವೆ. ಗಾಳಿಯ ವೇಗ ಪ್ರತಿ ಗಂಟೆಗೆ 100 ಕಿ.ಮೀಗಿಂತ ಜಾಸ್ತಿ ಆದಾಗ ಅದರ ಒತ್ತಡದಿಂದ ರೆಕ್ಕೆಗಳು ಬಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಕಬ್ಬಿಣದ ಸಲಾಖೆಯನ್ನು ಜೋಡಿಸಿರುವ ಗಜೆಟ್‌ ವ್ಯವಸ್ಥೆ ಅಳವಡಿಸಿದ್ದೇನೆ. ಅಲ್ಲದೇ, ಎಲೆಕ್ಟ್ರಾನಿಕ್‌ ಬ್ರೇಕಿಂಗ್‌ ವ್ಯವಸ್ಥೆ, ಪವರ್‌ ಟೇಕ್‌ ಆಫ್‌ (ಪಿಟಿಒ) ಶಾಫ್ಟ್‌ ಅಳವಡಿಸಿದ್ದೇನೆ. ಬಹುಸ್ತರದ ಡೈನಮೊ ಬಳಸಿದ್ದೇನೆ. ಇದು ವಿದ್ಯುತ್ ಉತ್ಪಾದನೆಯ ಪ್ರಮಾಣದಲ್ಲಿ ವ್ಯತ್ಯಯ
ವಾದಾಗಲೂ ಯಂತ್ರವೂ ಸರಾಗವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ’ ಎಂದ ಅರುಣ್‌ ವಿವರಿಸಿದರು.

******

ಈ ಯಂತ್ರಕ್ಕೆ ಪೇಟೆಂಟ್‌ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಪ್ರಧಾನಿ ಕಚೇರಿಗೂ ಇದರ ಬಗ್ಗೆ ಮಾಹಿತಿ ಕಳುಹಿಸಿದ್ದೇನೆ. ಸಬ್ಸಿಡಿ ಒದಗಿಸುವ ಭರವಸೆ ನೀಡಿದ್ದಾರೆ.

- ಅರುಣ್‌ ಕುಮಾರ್‌, ಯಂತ್ರ ಅಭಿವೃದ್ಧಿಪಡಿಸಿದ ಎಂಜಿನಿಯರ್‌

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !