ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಿಲನ್ನು ಕಚ್ಚಿ ಸಾಯಿಸಿದ ನಾಯಿ

ಬೆಂಗಳೂರು ವಿಶ್ವವಿದ್ಯಾಲಯದ ಅರಣ್ಯದಲ್ಲಿ ನಡೆದ ಘಟನೆ
Last Updated 25 ಫೆಬ್ರುವರಿ 2019, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಭಾನುವಾರ ಬೆಳಿಗ್ಗೆ ಸಾಕು ನಾಯಿಯೊಂದು ನವಿಲನ್ನು ಕಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ನವಿಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಅವಧಿಯಲ್ಲಿ ವಾಹನಗಳು ಮತ್ತು ಸಾರ್ವಜನಿಕರ ಓಡಾಟ ಕಡಿಮೆ ಇರುವುದರಿಂದ ನವಿಲುಗಳು ಗರಿ ಬಿಚ್ಚಿ ನರ್ತನ ಮಾಡುವುದನ್ನೂ ಪಕ್ಷಿಪ್ರಿಯರು ವೀಕ್ಷಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಸುಮಾರು 8.30 ರ ಸಮಯದಲ್ಲಿ ಸಾಕು ನಾಯಿಯೊಂದು ಗರಿ ಬಿಚ್ಚಿಕೊಂಡಿದ್ದ ನವಿಲಿನ ಮೇಲೆ ಎರಗಿ ಕಚ್ಚಿ ಹಾಕಿತು. ತೀವ್ರವಾಗಿ ಗಾಯಗೊಂಡಿದ್ದ ನವಿಲು ಪ್ರಾಣ ಬಿಟ್ಟಿತು. ‘ಹಠಾತ್‌ ಆಕ್ರಮಣದಿಂದ ಬೆಚ್ಚಿ ಹೋದ ನವಿಲು ಗರಿಯನ್ನು ಮಡಚಿಕೊಂಡು ನಾಯಿಯಿಂದ ಪಾರಾಗಲು ಸಾಧ್ಯವಾಗಲೇ ಇಲ್ಲ. ನಾಯಿಯು ನವಿಲಿನ ಕುತ್ತಿಗೆಗೆ ಬಾಯಿ ಹಾಕಿತ್ತು. ನಾಯಿಯನ್ನು ಓಡಿಸಿ ಅದಕ್ಕೆ ಪ್ರಾಥಮಿಕ ಆರೈಕೆ ಮಾಡುವ ಪ್ರಯತ್ನ ಫಲ ನೀಡಲಿಲ್ಲ’ ಎಂದು ಜಿಯಾಲಜಿ ವಿಭಾಗದ ಪ್ರೊ.ರೇಣುಕಾಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಗ್ಗಿನ ವಾಯು ವಿಹಾರಕ್ಕೆ ಬರುವವರಿಗೆ ಸಾಕು ನಾಯಿಗಳ ಚೈನ್‌ಗಳನ್ನು ಬಿಚ್ಚಿ ಮುಕ್ತವಾಗಿ ಬಿಡಬಾರದು ಎಂಬ ಸೂಚನೆ ನೀಡಿದ್ದರೂ ಪಾಲಿಸುತ್ತಿಲ್ಲ. ನಾಯಿಗಳು ವಿಶ್ವವಿದ್ಯಾಲಯದ ಗಾರ್ಡ್‌ಗಳನ್ನೂ ಕಚ್ಚಿರುವ ಸಾಕಷ್ಟು ಉದಾಹರಣೆಗಳಿವೆ ಎಂದು ಅವರು ಹೇಳಿದರು.

ನವಿಲನ್ನು ಕಚ್ಚಿ ಕೊಂದಿರುವ ಘಟನೆ ಇದೇ ಮೊದಲ ಬಾರಿಗೆ ಬೆಳಕಿಗೆ ಬಂದಿದೆ. ನವಿಲು ಮತ್ತು ಇತರ ಪಕ್ಷಿಗಳು ಇರುವ ಪ್ರದೇಶಕ್ಕೆ ಬೇಲಿ ಹಾಕಲು ವಿಶ್ವವಿದ್ಯಾಲಯ ನಿರ್ಧರಿಸಿದೆ. ಮುಂಜಾನೆಯ ವಾಕಿಂಗ್‌ಗೆ ಕ್ಯಾಂಪಸ್‌ ಅತ್ಯುತ್ತಮ ಪ್ರದೇಶ. ನಡಿಗೆದಾರರು ಬೆಳಗ್ಗಿನ ಹೊತ್ತಿನಲ್ಲಿ ಅರಣ್ಯ ಪ್ರದೇಶಕ್ಕೆ ಸಾಕು ನಾಯಿಗಳನ್ನು ಕರೆತರುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲ್‌ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ನವಿಲಿನ ಸಾವಿಗೆ ಮರುಗಿದರು.ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅರಣ್ಯ ಇರುವುದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಕಾಳಜಿ ವಹಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಒಂದೇ ತಿಂಗಳಿನ ಅವಧಿಯಲ್ಲಿ ಮೂರು ನವಿಲುಗಳು ಅಸುನೀಗಿದ್ದು, ವೈಲ್ಡ್‌ಲೈಫ್‌ ವಾರ್ಡನ್‌ ಪ್ರಸನ್ನಕುಮಾರ್‌ ವನ್ಯಜೀವಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT