ಶನಿವಾರ, ಸೆಪ್ಟೆಂಬರ್ 25, 2021
22 °C
ಖಾಸಗಿ ಕಂಪನಿ ಉದ್ಯೋಗಿಗೆ ಪೊಲೀಸ್ ಎಚ್ಚರಿಕೆ * ಆರತಕ್ಷತೆ ಬಿಟ್ಟು ಬಂದ ದಂಪತಿ

ಆರತಕ್ಷತೆ ದಿನವೇ ಪ್ರೇಯಸಿಗೆ ‘ಫೋಟೊ’ ಕಿರುಕುಳ: ಯುವಕನಿಗೆ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಾನು ಪ್ರೀತಿಸುತ್ತಿದ್ದವಳು ಬೇರೊಬ್ಬನನ್ನು ಮದುವೆ ಆಗಿದ್ದರಿಂದ ಕುಪಿತಗೊಂಡ ಖಾಸಗಿ ಕಂಪನಿ ಉದ್ಯೋಗಿಯೊಬ್ಬ, ತಾವಿಬ್ಬರೂ ಜೊತೆಯಲ್ಲಿ ತೆಗೆಸಿಕೊಂಡಿದ್ದ ಫೋಟೊಗಳನ್ನು ಪರಿಚಿತರ ಮೊಬೈಲ್‌ಗಳಿಗೆ ಹರಿಬಿಟ್ಟು ಆ ಯುವತಿಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ. ಇದೀಗ ಸೈಬರ್ ಕ್ರೈಂ ಪೊಲೀಸರು ಆ ಯುವಕನನ್ನು ಪತ್ತೆ ಹಚ್ಚಿ, ಎಲ್ಲ ಫೋಟೊಗಳನ್ನೂ ಆತನಿಂದಲೇ ನಾಶ ಮಾಡಿಸಿದ್ದಾರೆ!

ಈ ಬಗ್ಗೆ ವನಿತಾ ಸಹಾಯವಾಣಿಗೆ ದೂರು ಕೊಟ್ಟಿದ್ದ ಸಂತ್ರಸ್ತೆ, ‘ಆತನನ್ನು ಬಂಧಿಸುವುದು ಬೇಡ. ನಮ್ಮ ಸಹವಾಸಕ್ಕೆ ಬರದಂತೆ ಬುದ್ಧಿ ಹೇಳಿ. ಹಾಗೆಯೇ, ಎಲ್ಲ ಫೋಟೊಗಳನ್ನೂ ಡಿಲೀಟ್ ಮಾಡಿಸಿ’ ಎಂದು ಮನವಿ ಮಾಡಿದ್ದರು. ಆ ದೂರು ಸೈಬರ್ ಕ್ರೈಂ ಠಾಣೆಗೆ ವರ್ಗವಾಗಿತ್ತು.

‘ಮೊಬೈಲ್ ಕರೆ ವಿವರ ಆಧರಿಸಿ ಯುವಕನನ್ನು ಪತ್ತೆ ಮಾಡಿದೆವು. ಜಾಲತಾಣಗಳ ಖಾತೆಗಳನ್ನು ಬ್ಲಾಕ್ ಮಾಡಿಸಿ, ಮೊಬೈಲ್‌ನಿಂದ ಎಲ್ಲ ಫೋಟೊಗಳನ್ನೂ ಅಳಿಸಿದೆವು. ‘ಆಕೆಯನ್ನು ತುಂಬ ಪ್ರೀತಿಸುತ್ತಿದ್ದೆ. ಬಿಟ್ಟು ಹೋದಳು ಎಂಬ ನೋವಿನಲ್ಲಿ ಹಾಗೆ ವರ್ತಿಸಿದೆ’ ಎಂದು ಹೇಳಿಕೆ ಕೊಟ್ಟ. ಇನ್ನು ಮುಂದೆ ಅವರ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದೆವು’ ಎಂದು ಸೈಬರ್ ಕ್ರೈಂ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರತಕ್ಷತೆ ಬಿಟ್ಟು ಬಂದಿದ್ದರು: ‘ಆ ಯುವತಿಗೆ 20 ದಿನಗಳ ಹಿಂದಷ್ಟೇ ವಿವಾಹವಾಗಿತ್ತು. ಗಂಡನ ಮನೆಯಲ್ಲಿ ‌ಇತ್ತೀಚೆಗೆ ಆರತಕ್ಷತೆ ಇಟ್ಟುಕೊಂಡಿದ್ದರು. ಈ ವಿಚಾರ ತಿಳಿದ ಆರೋಪಿ, ತನಗೆ ಗೊತ್ತಿರುವ ಎಲ್ಲರಿಗೂ ಫೋಟೊಗಳನ್ನು ಕಳುಹಿಸಿದ್ದ. ಅದನ್ನು ನೋಡಿ ಸಂತ್ರಸ್ತೆಗೆ ಆಕೆಯ ಗೆಳತಿಯರು ಕರೆ ಮಾಡಿದ್ದರು. ‌ಪತಿಗೂ ವಿಚಾರ ಗೊತ್ತಾಯಿತು. ದಂಪತಿ ಆರತಕ್ಷತೆ ಬಿಟ್ಟು, ಕೂಡಲೇ ನಮ್ಮ ಕಚೇರಿಗೆ ಬಂದು ದೂರು ಕೊಟ್ಟರು’ ಎಂದು ವನಿತಾ ಸಹಾಯವಾಣಿ ಮುಖ್ಯಸ್ಥೆ ರಾಣಿ ಶೆಟ್ಟಿ ತಿಳಿಸಿದರು.

‘ಪ್ರೀತಿ ಮಾಡುವುದು ತಪ್ಪಲ್ಲ. ಆದರೆ, ಆ ಗುಂಗಿನಲ್ಲಿ ಫೋಟೊ ತೆಗೆಸಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಆ ಹುಡುಗನನ್ನು ಹಾಗೂ ಆತನ ಪೋಷಕರನ್ನೂ ಕರೆಸಿ ಆಪ್ತ ಸಮಾಲೋಚನೆ ಮಾಡಿಸಿದ್ದೇವೆ. ಇನ್ನೆಂದೂ ತೊಂದರೆ ಕೊಡುವುದಿಲ್ಲ ಎಂದಿದ್ದಾನೆ’ ಎಂದು ರಾಣಿಶೆಟ್ಟಿ ಹೇಳಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.