ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸೇರ್ಪಡೆ: ಕಾಂಗ್ರೆಸ್‌ ಅಪಪ್ರಚಾರಕ್ಕೆ ಪ್ರಕಾಶ್ ರಾಜ್ ಕಿಡಿ

Last Updated 3 ಮೇ 2019, 14:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಪಕ್ಷದ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರಿಗೆ ಬೆಂಬಲ ನೀಡಿದ್ದೇನೆ ಎಂಬ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇದೊಂದು ಕೀಳುಮಟ್ಟದ ರಾಜಕಾರಣ’ ಎಂದು ಬೆಂಗಳೂರು ಕೇಂದ್ರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್‌ರಾಜ್‌ ಕಿಡಿಕಾರಿದ್ದಾರೆ.

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಅವರು ದೂರು ನೀಡಿದ್ದಾರೆ. ಜತೆಗೆ, ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

‘ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿದ್ದೇನೆ ಎಂಬ ಸಂದೇಶ ಇರುವ ಕರಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಇದು ಕ್ಷೇತ್ರದ ಮತದಾರರನ್ನು ದಾರಿ ತಪ್ಪಿಸುವ ಕುತಂತ್ರದ ಭಾಗವೇ ಹೊರತು ಮತ್ತೇನಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಹಲವು ದಿನಗಳ ಹಿಂದೆ ಪಕ್ಷಕ್ಕೆ ಸೇರುವಂತೆ ಕಾಂಗ್ರೆಸ್‌ ನಾಯಕರು ಆಹ್ವಾನ ನೀಡಿದ್ದರು. ಯಾವುದೇ ಕಾರಣಕ್ಕೂ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂಬ ನನ್ನ ಅಚಲ ನಿಲುವನ್ನು ತಿಳಿಸಿದ್ದೆ. ಮತದಾನಕ್ಕೆ ಒಂದು ದಿನ ಇರುವಾಗ ಇಂತಹ ಅಪಚಾರ ಮಾಡುತ್ತಿರುವುದು ಸಂವಿಧಾನಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿರುವ ದ್ರೋಹ. ಜತೆಗೆ, ಚುನಾವಣಾ ಅಕ್ರಮಗಳಿಗೆ ಹಿಡಿದ ಕೈಗನ್ನಡಿ’ ಎಂದು ಹೇಳಿದ್ದಾರೆ.

‘ಗೆಲುವಿನ ಹೊಸ್ತಿಲಲ್ಲಿರುವ ನನ್ನ ವಿಜಯಪತಾಕೆಯನ್ನು ಸಹಿಸಲಾಗದ ಕಾಂಗ್ರೆಸ್ಸಿನ ಅಭ್ಯರ್ಥಿಯ ಷಡ್ಯಂತ್ರಕ್ಕೆ ಯಾವುದೇ ರೀತಿಯ ಕಿಮ್ಮತ್ತನ್ನು ನೀಡಬೇಡಿ’ ಎಂದು ಕೋರಿದ್ದಾರೆ.

'ಪ್ರಕಾಶ್ ರಾಜ್‌ಗೆ ಒಳ್ಳೆಯದಾಗಲಿ'
‘ಇಂತಹ ವದಂತಿಗಳಿಗೆ ಜನರು ಕಿವಿಗೊಡಬಾರದು. ಕ್ಷೇತ್ರದ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದೇನೆ. ಜನರ ಬೆಂಬಲ ಸಿಗುವ ವಿಶ್ವಾಸ ಇದೆ. ಪ್ರಕಾಶ್‌ರಾಜ್ ಅವರು ಪಕ್ಷೇತರ ಅಭ್ಯರ್ಥಿ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT