ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆಯಾದ ಪ್ರತಿಭಟಿಸುವ ಮನೋಭಾವ

ಹಿರಿಯ ರಂಗಕರ್ಮಿ ಸಿ.ಕೆ. ಗುಂಡಣ್ಣ ಬೇಸರ
Last Updated 14 ಜುಲೈ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಹೆಚ್ಚುತ್ತಿರುವ ಕೋಮುವಾದಿ ಚಿಂತನೆ, ರೈತರ ಆತ್ಮಹತ್ಯೆ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಲು ಕಲಾ ತಂಡಗಳಿಗೆ ಅವಕಾಶವಿದೆ. ಆದರೆ, ಪ್ರತಿಭಟನಾ ಮನೋಭಾವ ಕಡಿಮೆಯಾಗುತ್ತಿದೆ’ ಎಂದುಹಿರಿಯ ರಂಗಕರ್ಮಿ ಸಿ.ಕೆ. ಗುಂಡಣ್ಣ ಬೇಸರ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ನಗರ ಜಿಲ್ಲಾ ಘಟಕ ಭಾನುವಾರ ಹಮ್ಮಿಕೊಂಡಿದ್ದ 14ನೇಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು.

‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, ತುರ್ತು ಪರಿಸ್ಥಿತಿ ಸೇರಿದಂತೆ ದೇಶಕ್ಕೆ ಸಂಕಷ್ಟ ಒದಗಿಬಂದ‌ ವಿವಿಧ ಸಂದರ್ಭದಲ್ಲಿ ರಂಗ ತಂಡಗಳು ನಾಟಕದ ಮೂಲಕವೇ ಪ್ರತಿಭಟನೆ ನಡೆಸಿವೆ. ಏಣಗಿ ಬಾಳಪ್ಪ ಅವರು ತಮ್ಮ ನಾಟಕಗಳಲ್ಲಿ ಬ್ರಿಟಿಷರಿಗೆ ‘ಕೆಂಪು ಕೋತಿ’ ಎಂಬ ಪದ ಬಳಕೆ ಮಾಡುತ್ತಿದ್ದರು. ಈ ಪದ ಜನರನ್ನು ಬಡಿದೆಬ್ಬಿಸಲು ಸಹಾಯಕವಾಗಿತ್ತು. ಇದರ ಗಂಭೀರತೆ ಅರಿತ ಬ್ರಿಟಿಷರು ಆ ಪದ ಬಳಕೆ ಮಾಡದಂತೆ ಎಚ್ಚರಿಸಿದ್ದರು’ ಎಂದು ತಿಳಿಸಿದರು.

‘ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ‘ಸಮಗ್ರ ಮಂಥನ’ ಸೇರಿದಂತೆ ವಿವಿಧ ನಾಟಕಗಳು ಜನರನ್ನು ಜಾಗೃತಗೊಳಿಸಿದವು. ಅದೇ ರೀತಿ, ಶೋಷಿತ ವರ್ಗದ ಪರವಾಗಿ ಕೂಡ ನಾಟಕಗಳು ಪ್ರದರ್ಶನ ಕಾಣುತ್ತಿದ್ದವು. 45 ನಿಮಿಷದ ಬೀದಿ ನಾಟಕಗಳು ಕೂಡ ಸಮಸ್ಯೆಗಳ ಗಂಭೀರತೆ ದರ್ಶನ ಮಾಡಿಸುವಲ್ಲಿ ಪ್ರಬಲ ಮಾಧ್ಯಮಗಳಾಗಿದ್ದವು’ ಎಂದರು.

ಪ್ರತಿಭಟನೆಯ ಅಸ್ತ್ರವಾಗಿ ಬಳಕೆ: ಹಿರಿಯ ರಂಗ ಕಲಾವಿದೆ ಲಕ್ಷ್ಮಿ ಚಂದ್ರಶೇಖರ್ ಅವರು ‘ಏಕವ್ಯಕ್ತಿ ರಂಗ ಪ್ರದರ್ಶನಗಳು’ ಎಂಬ ವಿಷಯದ ಕುರಿತು ಮಾತನಾಡಿದರು. ‘ಸಿ.ಆರ್. ಸಿಂಹ ಅವರು ಏಕವ್ಯಕ್ತಿ ರಂಗಪ್ರಯೋಗವನ್ನು ಹೆಚ್ಚು ಜನಪ್ರಿಯಗೊಳಿಸಿದ್ದರು. ಕಥೆ, ಕಾದಂಬರಿಯನ್ನು ಏಕವ್ಯಕ್ತಿ ರಂಗ ಪ್ರಯೋಗಕ್ಕೆ ಅಳವಡಿಸಿಕೊಳ್ಳಬಹುದು. ಪುರುಷರ ಶೌರ್ಯಗಳು ಪ್ರಧಾನವಾಗುತ್ತಿರುವ ಹೊತ್ತಿನಲ್ಲಿ ಮಹಿಳೆಯರು ಏಕವ್ಯಕ್ತಿ ನಾಟಕದ ಮೂಲಕ ತಮ್ಮ ಭಾವನೆಗಳನ್ನು ಅನಾವರಣ ಮಾಡಿದರು’ ಎಂದರು.

ರಂಗತಜ್ಞ ಗೋವಿಂದಸ್ವಾಮಿ ಮಾತನಾಡಿ, ‘ನಾಟಕಗಳಿಂದ ಗಾಂಧೀಜಿ ಅವರು ಪ್ರಭಾವಿತರಾಗಿದ್ದರು. ಆದ್ದರಿಂದಲೇ ಪಾಠಶಾಲೆ ಹಾಗೂ ನಾಟಕ ಶಾಲೆ ಬೇಕು ಎಂದು ಪ್ರತಿಪಾದಿಸಿದ್ದರು. ಆದರೆ, ನಮ್ಮ ದೇಶದಲ್ಲಿ ಶಿಕ್ಷಣದಲ್ಲಿ ರಂಗಭೂಮಿಗೆ ಅಷ್ಟಾಗಿ ಪ್ರಾತಿನಿಧ್ಯ ನೀಡಿಲ್ಲ. ಇಂಗ್ಲೆಂಡ್, ಅಮೆರಿಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ರಂಗಭೂಮಿಯನ್ನು ಪರಿಚಯಿಸಲಾ ಗಿದೆ’ ಎಂದು ಹೇಳಿದರು.

ರಂಗಭೂಮಿ ಸಾಧಕರಿಗೆ ಗೌರವ

ಸಾಹಿತ್ಯ ಸಮ್ಮೇಳನವನ್ನು ರಂಗಭೂಮಿಗೆ ಅರ್ಪಿಸಿದ ಹಿನ್ನೆಲೆಯಲ್ಲಿ ರಂಗಭೂಮಿಯ ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟಿ.ಜಿ. ಹರೀಶ್, ಎನ್‌. ಧನುಷ್‌, ದೊ. ರಾಮಚಂದ್ರಯ್ಯ, ಎಚ್‌.ಜಿ. ಶಿವಲಿಂಗಮೂರ್ತಿ, ಜಿ. ಮುರಳಿ, ಪಿ. ರುದ್ರಪ್ಪ ಸೇರಿದಂತೆ 80ಕ್ಕೂ ಅಧಿಕ ಮಂದಿಯನ್ನು ಗೌರವಿಸಲಾಯಿತು. ಇದಕ್ಕೂ ಮೊದಲು ರೋಹಿಣಿ ರಘುವಂದನ್, ಹೆಲೆನ್ ಮೈಸೂರು, ಎಚ್. ವೆಂಕಟೇಶ್ ಸೇರಿದಂತೆ ವಿವಿಧ ಕಲಾವಿದರು ರಂಗಗೀತೆಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT