ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ವರ್ಗಾವಣೆ ರದ್ದಿಗೆ ಆಗ್ರಹ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರತಿಭಟನೆ
Last Updated 7 ಸೆಪ್ಟೆಂಬರ್ 2019, 11:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅವೈಜ್ಞಾನಿಕ ನಡೆಯುತ್ತಿರುವ ಕಡ್ಡಾಯ ವರ್ಗಾವಣೆ ರದ್ದುಪಡಿಸಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ವರ್ಗಾವಣೆ ಪ್ರಕ್ರಿಯೆಗೆ ಹಾಜರಾಗದೆ ಶನಿವಾರ ನಗರದಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ನಾರಾಯಣಸ್ವಾಮಿ, ‘ಹಾಲಿ ಇರುವ ವರ್ಗಾವಣೆ ನೀತಿಯು ಅವೈಜ್ಞಾನಿಕವಾಗಿದೆ. ವರ್ಗಾವಣೆಗೆ ಶಿಕ್ಷಕರ ವಿರೋಧವಿಲ್ಲ. ಆದರೆ, ಕಡ್ಡಾಯ ವರ್ಗಾವಣೆಗೆ ನಮ್ಮ ವಿರೋಧ ಇದೆ. ಇದು ಸಂವಿಧಾನ ಬಾಹಿರ ಕ್ರಮವಾಗಿದೆ. ಆದ್ದರಿಂದ ವೈಜ್ಞಾನಿಕ ವರ್ಗಾವಣೆ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯಿಂದ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಸಂಘದಿಂದ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಶಿಕ್ಷಕರಿಗೆ ಮಾರಕವಾಗಿರುವ ಕಡ್ಡಾಯ ವರ್ಗಾವಣೆ ನೀತಿಗೆ ಅವಕಾಶ ಮಾಡಿಕೊಟ್ಟಿರುವುದು ನಮಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಹೇಳಿದರು.

‘ಅವಿವಾಹಿತ ಶಿಕ್ಷಕಿ, ಪತಿ ಪತ್ನಿ ಪ್ರಕರಣ, ಸಂಘದ ಚುನಾಯಿತ ಪ್ರತಿನಿಧಿ ಮತ್ತು ಮರಣಾಂತಿಕ ಕಾಯಿಲೆಯಿಂದ ವಿನಾಯಿತಿ ನೀಡಿರುವುದು ಸ್ವಾಗತಾರ್ಹ. ಆದರೆ, ಉಳಿಯುವ ಸಾಮಾನ್ಯ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ವಿಧಿಸಿರುವುದು ಅವೈಜ್ಞಾನಿಕ ಮತ್ತು ಅನ್ಯಾಯದ ಕ್ರಮವಾಗಿದೆ’ ಎಂದರು.

ಶಿಕ್ಷಕಿ ಪದ್ಮಾ ಮಾತನಾಡಿ, ‘ನಗರದಲ್ಲಿ ಸತತವಾಗಿ ಯಾರು 10 ವರ್ಷ ಸೇವೆ ಮಾಡಿರುತ್ತಾರೋ ಅಂತಹ ಶಿಕ್ಷಕರನ್ನು ‘ಎ’ ವಲಯದಿಂದ ‘ಬಿ’ ವಲಯಕ್ಕೆ ವರ್ಗಾವಣೆ ಮಾಡಬೇಕು ಎಂದು ಸರ್ಕಾರ ಆದೇಶ ಮಾಡಿದೆ. ಆದರೆ ನಗರದಲ್ಲಿ ಅನೇಕರು ಸುಮಾರು 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ವರ್ಷ ಸುಮ್ಮನಿದ್ದು ಈಗ ಏಕಾಏಕಿ ಕಡ್ಡಾಯ ವರ್ಗಾವಣೆಗೆ ಮುಂದಾಗಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಶೇ 20 ರಷ್ಟು ಹುದ್ದೆಗಳು ಖಾಲಿ ಇರುವ ಶಾಲೆಗಳಿಗೆ ವರ್ಗಾವಣೆ ಮಾಡಬೇಕು ಎಂಬ ಆದೇಶವಿದೆ. ಆದರೆ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸುಮಾರು 180 ಖಾಲಿ ಹುದ್ದೆಗಳಿವೆ ಎಂಬ ಕಾರಣಕ್ಕೆ ಮೊದಲು ಅಲ್ಲಿನ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ಬೇರೇ ತಾಲ್ಲೂಕುಗಳಿಗೆ ವಿನಾಯಿತಿ ಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎಂದು ಹೇಳಿದರು.

‘ವೈಜ್ಞಾನಿಕವಾದ ವರ್ಗಾವಣೆಗೆ ಯಾವುದೇ ತಕರಾರಿಲ್ಲ. ವರ್ಗಾವಣೆ ಮಾಡುವುದಾದರೆ ಜೇಷ್ಠತೆಯ ಆಧಾರದ ಮೇಲೆ ಮಾಡಲಿ. ಬಡ್ತಿ ನೀಡಿದ ಬಳಿಕ ಖಾಲಿ ಉಳಿಯುವ ಹುದ್ದೆಗಳಿಗೆ ಬಳಿಕ ವರ್ಗಾವಣೆ ನಡೆಯಲಿ. ಅದನ್ನು ಬಿಟ್ಟು ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿ ಶಿಕ್ಷಕರಿಗೆ ಗೊಂದಲ ಉಂಟು ಮಾಡುವುದು ಸರಿಯಲ್ಲ’ ಎಂದು ತಿಳಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಶಿಕ್ಷಕರಾದ ಸುನೀಲ್, ಚಂದ್ರಕಲಾ, ವೀಣಾಶ್ರೀ , ನಾಗಣ್ಣ. ಪುಷ್ಪಾ, ಸಾಹಿರಾ ಬೇಗಂ, ಎಂ.ಎಲ್. ಶಂಕರಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT