ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ

Last Updated 1 ಏಪ್ರಿಲ್ 2019, 5:49 IST
ಅಕ್ಷರ ಗಾತ್ರ

ನಗರದ ಮುಖ್ಯ ಸಾರಿಗೆ ಸಾಧನವಾದ ಬಿಎಂಟಿಸಿ ಯನ್ನು ಸದೃಢಗೊಳಿಸುವುದು ಅಗತ್ಯವಾಗಿದೆ. ಅದಕ್ಕೀಗ ಸರ್ಕಾರದಿಂದ ದೊಡ್ಡ ಪ್ರಮಾಣದ ಧನಸಹಾಯ ಬೇಕು (ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಮಟ್ಟದಲ್ಲೇನೂ ಅಲ್ಲ!). ಆದರೆ, ಸಿಗುತ್ತಿರುವುದು ಮಾತ್ರ ಅತ್ಯಲ್ಪ. ಹೀಗಾಗಿ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಸಾರಿಗೆ ಸೇವೆ ಒದಗಿಸಬೇಕಿದ್ದ ಈ ಸಂಸ್ಥೆ, ವರಮಾನ ಹೆಚ್ಚಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಿದೆ. ಆದ್ದರಿಂದಲೇ ದೇಶದ ಬೇರೆ ಯಾವ ನಗರದಲ್ಲೂ ಇಲ್ಲದಷ್ಟು ದುಬಾರಿ ಪ್ರಯಾಣದ ದರ ಇಲ್ಲಿದೆ.

ಎಲಿವೇಟೆಡ್‌ ಕಾರಿಡಾರ್‌, ಮೆಟ್ರೊ, ಪೆರಿಫೆರಲ್‌ ವರ್ತುಲ ರಸ್ತೆಯಂತಹ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸುವ ಸರ್ಕಾರ, ಬಿಎಂಟಿಸಿ ವಿಷಯದಲ್ಲಿ ಮಾತ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಯೋಜನೆ ಪೂರ್ಣಗೊಂಡಾಗ ನಿತ್ಯ 20 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತದೆ ಎಂದು ಅಂದಾಜಿಸಲಾದ ಮೆಟ್ರೊ ಎರಡನೇ ಹಂತಕ್ಕೆ ₹ 32 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಅದೇ ನಿತ್ಯ 58 ಲಕ್ಷ ಜನರ ಪ್ರಯಾಣಕ್ಕೆ ಆಧಾರವಾಗಿರುವ ಬಿಎಂಟಿಸಿಗೆ ಸಾವಿರ ಕೋಟಿಯನ್ನು ನೀಡಲೂ ಹಿಂದೆ–ಮುಂದೆ ನೋಡುತ್ತದೆ. ಏಕೆ ಹೀಗೆ?

ಆದಾಯ ಹಾಗೂ ಲಾಭದೆಡೆಗೆ ಕೇಂದ್ರಿತವಾಗಿರುವ ಬಿಎಂಟಿಸಿಯ ಗಮನವನ್ನು ಸೇವೆ ಹಾಗೂ ಪ್ರಯಾಣಿಕರನ್ನು ತೃಪ್ತಿಪಡಿಸುವ ಕಡೆಗೆ ತಿರುಗಿಸಬೇಕು. ಬಿಎಂಟಿಸಿಯ ಪ್ರಯಾಣ ದರ ಇಳಿಕೆಯಾಗಲು ಸರ್ಕಾರ ಕೆಲವು ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳಬೇಕಿದೆ. ರಸ್ತೆ ತೆರಿಗೆ, ಮೋಟಾರು ವಾಹನ ತೆರಿಗೆ, ಡೀಸೆಲ್‌ ತೆರಿಗೆಗಳಿಂದ ಈ ಸಾರಿಗೆ ಸಂಸ್ಥೆಗೆ ವಿನಾಯಿತಿ ನೀಡಬೇಕು. 2035ರ ನಗರ ಮಹಾಯೋಜನೆ ತಯಾರಿಸುವ ಸಂದರ್ಭದಲ್ಲಿ ಬಿಎಂಟಿಸಿಯನ್ನು ಮುಖ್ಯ ಸಾರಿಗೆ ಸಾಧನವಾಗಿ ಪರಿಗಣಿಸಬೇಕು. ದೂರದೃಷ್ಟಿಯಿಲ್ಲದ ಯೋಜನೆಗಳಲ್ಲಿ ಹಣ ತೊಡಗಿಸುವ ಬದಲು ಬಸ್ ಸೌಲಭ್ಯವನ್ನು ಸದೃಢಗೊಳಿಸುವತ್ತ ಗಮನಹರಿಸಬೇಕು.

ಕನಿಷ್ಠ ಆದಾಯ ಖಾತರಿಗೆ ಕಂಡಕ್ಟರ್‌ಗಳನ್ನು ಗುರಿ ಮಾಡುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ಪಾಸುದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ತಾಣಗಳಲ್ಲಿ ಅವರು ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಈ ಪರಿಪಾಟವನ್ನು ತಪ್ಪಿಸಬೇಕು. ಚಾಲಕರಿಗೆ ಟ್ರಿಪ್‌ಗಳ ನಿಗದಿಯನ್ನು ವಾಸ್ತವಿಕ ಲೆಕ್ಕಾಚಾರದ ಮೇಲೆ ಮಾಡಬೇಕು. ಇಲ್ಲದಿದ್ದರೆ ಅವರು ಬೇಗ ತಲುಪುವ ಆತುರದಲ್ಲಿ ಮಾರ್ಗ ಬದಲಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಬಸ್‌ ಬಂದೇ ಬರುತ್ತದೆ ಮತ್ತು ಸಕಾಲಕ್ಕೆ ಬರುತ್ತದೆ ಎಂಬ ಭರವಸೆ ಮೂಡುವಂತೆ ಬಿಎಂಟಿಸಿಯ ಕಾರ್ಯಾಚರಣೆ ಶೈಲಿ ಬದಲಾಗಬೇಕು. ನಗರದ ಹೊರವಲಯಕ್ಕೆ ಸೇವಾ ಜಾಲವನ್ನು ವಿಸ್ತರಿಸಬೇಕು.

ಪೌರಕಾರ್ಮಿಕರು, ಕಾಲ್‌ಸೆಂಟರ್‌ ಕಾರ್ಮಿಕರು, ಗಾರ್ಮೆಂಟ್‌ ಹಾಗೂ ಹೋಟೆಲ್‌ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಬೆಳಿಗ್ಗೆ ಮತ್ತು ತಡರಾತ್ರಿ ಬಸ್‌ಗಳ ವ್ಯವಸ್ಥೆ ಮಾಡಬೇಕು. ಕೊರತೆ ನೀಗಿಸಲು ಇದೇ ವರ್ಷ ಕನಿಷ್ಠ 2000 ಬಸ್‌ಗಳನ್ನು ಖರೀದಿಸಬೇಕು. ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸಲು ಘಟಕಗಳ ಮಟ್ಟದಲ್ಲಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಅದಾಲತ್‌ ನಡೆಸಬೇಕು. ಪ್ರಯಾಣಿಕರ ಸಮಸ್ಯೆ ಬಗೆಹರಿಸಲು ಜನಸ್ನೇಹಿ ಸಹಾಯವಾಣಿ ಸೌಲಭ್ಯ ರೂಪಿಸಬೇಕು.

(ಲೇಖಕ: ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಸದಸ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT