ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಣ್ಣ ನಟ್‌ಬೋಲ್ಟ್‌ಗಳಿಂದ ದುರಂತ’

ಗೋದಾಮಿನಲ್ಲಿ ಮೂವರು ಕಾರ್ಮಿಕರು ಮೃತಪಟ್ಟ ಪ್ರಕರಣ
Last Updated 14 ಡಿಸೆಂಬರ್ 2018, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕಾಡುಗೋಡಿ ಸಮೀಪದ ಸೀಗೆಹಳ್ಳಿಯಲ್ಲಿರುವ ‘ಹೋಲಿಸೋಲ್’ ಲಾಜಿಸ್ಟಿಕ್ ಗೋದಾಮಿನಲ್ಲಿ ಸಂಭವಿಸಿದ್ದ ದುರಂತಕ್ಕೆ, ಬೃಹತ್ ಗಾತ್ರದ ರ‍್ಯಾಕ್‌ಗಳಿಗೆ ಸಣ್ಣ ನಟ್‌ಬೋಲ್ಟ್‌ ಅಳವಡಿಸಿದ್ದೇ ಕಾರಣ ಎಂದು ಸ್ಥಳ ಪರಿಶೀಲನೆ ನಡೆಸಿದ ಅಗ್ನಿಶಾಮಕ ಅಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಗೋದಾಮಿನಲ್ಲಿದ್ದ ರ‍್ಯಾಕ್‌ಗಳು ಕಳಚಿಬಿದ್ದಿದ್ದರಿಂದ ಕಾರ್ಮಿಕರಾದ ಸುಭಾಷ್, ಜ್ಞಾನದರ್ಶನ ಹಾಗೂ ಫಾರೂಕ್ ಅವರುಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದಾರೆ. ಐವರು ಗಾಯಗೊಂಡು ಆ್ಯಕ್ಸಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಗೋದಾಮಿನ ಶೇ 30ರಷ್ಟು ಭಾಗದಲ್ಲಿ ರ‍್ಯಾಕ್‌ಗಳನ್ನು ನಿಲ್ಲಿಸಿ, ಉಳಿದ ಜಾಗದಲ್ಲಿ ವಸ್ತುಗಳ ಬಾಕ್ಸ್‌ಗಳನ್ನು ಇಡಲಾಗಿತ್ತು. ಬಾಕ್ಸ್‌ಗಳ ನಡುವೆ ಇಬ್ಬರು ಕಾರ್ಮಿಕರು ಓಡಾಡಲಷ್ಟೇ ಜಾಗ ಇರುತ್ತಿತ್ತು.ಹೊಸದಾಗಿ ಬಾಕ್ಸ್‌ಗಳು ಬಂದಾಗಲೆಲ್ಲ, ರ‍್ಯಾಕ್‌ಗಳ ಮೇಲಿಡಲಾಗುತ್ತಿತ್ತು. ಸಾಮರ್ಥ್ಯಕ್ಕಿಂತ ಹೆಚ್ಚು ಬಾಕ್ಸ್‌ಗಳನ್ನು ರ‍್ಯಾಕ್‌ ಮೇಲೆ ಇಟ್ಟಿದ್ದು ಸಹ ಅವಘಡಕ್ಕೆ ಕಾರಣ’ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘30 ಅಡಿ ಎತ್ತರದ ರ‍್ಯಾಕ್‌ಗಳು ಗೋದಾಮಿನಲ್ಲಿದ್ದವು. ಅವುಗಳ ಕೆಳಭಾಗದಲ್ಲಿ ದೊಡ್ಡ ನಟ್‌ಬೋಲ್ಟ್‌ ಬದಲು, ಸಣ್ಣ ನಟ್‌ಬೋಲ್ಟ್‌ಗಳನ್ನು ಅಳವಡಿಸಲಾಗಿತ್ತು. ಮೇಲ್ಭಾಗದಲ್ಲಿ ಬಾಕ್ಸ್‌ಗಳನ್ನು ಇಟ್ಟಾಗಲೆಲ್ಲ, ರ‍್ಯಾಕ್‌ಗಳ ಕೆಳಭಾಗ ವಾಲುತ್ತಿತ್ತು. ರ‍್ಯಾಕ್‌ಗಳ ಮೇಲಿಟ್ಟಿದ್ದ ವಸ್ತುಗಳು ಭಾರವಾಗಿ ಸಣ್ಣ ನಟ್‌ಬೋಲ್ಟ್‌ ಕಳಚಿದ್ದರಿಂದ ದುರಂತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಹೇಳಿದರು.

ಮೂವರು ನಿರ್ದೇಶಕರಿಗಾಗಿ ಶೋಧ:‘ಹೋಲಿಸೋಲ್’ ಲಾಜಿಸ್ಟಿಕ್‌ನ ಮುಖ್ಯ ಕಚೇರಿ ದೆಹಲಿಯಲ್ಲಿದೆ. ಅದರ ಮೂವರು ನಿರ್ದೇಶಕರನ್ನೂ ಆರೋಪಿಗಳನ್ನಾಗಿ ಮಾಡಲಾಗಿದ್ದು, ಅವರನ್ನು ವಶಕ್ಕೆ ಪಡೆಯಲು ಪೊಲೀಸರು ತಂಡವೊಂದನ್ನು ದೆಹಲಿಗೆ ಕಳುಹಿಸಲಾಗಿದೆ’ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

‘ದುರಂತ ಸಂಬಂಧ ಈಗಾಗಲೇ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಗೋದಾಮಿನ ಮೇಲ್ವಿಚಾರಕ ಅಜಯ್ ಹಾಗೂ ಜಾಗದ ಮಾಲೀಕ ಅಮಾನುಲ್ಲಾ ಎಂಬುವರನ್ನು ಬಂಧಿಸಲಾಗಿದೆ’ ಎಂದರು.

ಕಾರ್ಮಿಕರ ದೇಹಗಳು ಅಪ್ಪಚ್ಚಿ

‘ಅವಶೇಷಗಳಡಿ ಸಿಲುಕಿದ್ದ ಮೂವರು ಕಾರ್ಮಿಕರ ದೇಹಗಳು ಅಪ್ಪಚ್ಚಿಯಾಗಿವೆ. ಎರಡು ರ‍್ಯಾಕ್‌ಗಳ ನಡುವೆ ಸಿಲುಕಿಕೊಂಡಿದ್ದ ಅವರ ಎದೆ, ಬೆನ್ನು, ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಅಗ್ನಿಶಾಮಕ ದಳದ ಅಧಿಕಾರಿ ಹೇಳಿದರು.

ಕಂಪನಿಯಿಂದ ಪರಿಹಾರ; ಸಂಧಾನ

ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ಲಾಜಿಸ್ಟಿಕ್ ಹಾಗೂ ಸಂಬಂಧಿಕರ ನಡುವೆ ಸಂಧಾನ ನಡೆಯುತ್ತಿದೆ.

‘ಲಾಜಿಸ್ಟಿಕ್‌ನವರ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದ್ದು, ಅವರೇ ಪರಿಹಾರ ಕೊಡಬೇಕಾಗುತ್ತದೆ. ಮೃತರ ಸಂಬಂಧಿಕರು, ನ್ಯಾಯಾಲಯರ ಹೊರಗೆಯೇ ಸಂಧಾನ ಮಾಡಿಕೊಳ್ಳುತ್ತಿದ್ದಾರೆಂಬ ಮಾಹಿತಿಯೂ ಇದೆ’ ಎಂದು ಪೊಲೀಸರು ಹೇಳಿದರು.

ಗೋದಾಮಿಗೆ ಬೀಗ

ಸೀಗೆಹಳ್ಳಿ ಬಳಿಯ ಗೋದಾಮಿಗೆ ಈಗ ಬೀಗ ಜಡಿಯಲಾಗಿದೆ. ಗಾಯಗೊಂಡು ಬೆಳತೂರಿನ ಆಕ್ಸಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರ ಯೋಗಕ್ಷೇಮ ವಿಚಾರಿಸಲು ಯಾವೊಬ್ಬ ಅಧಿಕಾರಿಯೂ ಸುಳಿದಿಲ್ಲ. ಗಾಯಗೊಂಡವರು ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT