ಶುಕ್ರವಾರ, ಸೆಪ್ಟೆಂಬರ್ 20, 2019
29 °C
ಜೋರು ಗಾಳಿ–ಮಳೆಗೆ ಧರೆಗುರುಳಿದ ಮರಗಳು

ಕಾದ ಇಳೆಗೆ ತಂಪೆರೆದ ಮಳೆ

Published:
Updated:

ಬೆಂಗಳೂರು: ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಸಾಧಾರಣ ಮಳೆ ಸುರಿದಿದ್ದು, ವಾತಾವರಣ ಸ್ವಲ್ಪ ತಂಪಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿದ್ದು, ಸೆಖೆಯ ಪ್ರಮಾಣ ಹೆಚ್ಚಿತ್ತು. ಸಂಜೆ 4 ಗಂಟೆಯ ಸುಮಾರಿಗೆ ಸಾಧಾರಣ ಮಳೆಯಾಗಿದೆ. ಬಂಟ್ವಾಳ, ಬೆಳ್ತಂಗಡಿ, ತಲಪಾಡಿ ಮತ್ತು ಚಿಕ್ಕಮಗಳೂರು ಜಿಲ್ಲೆ, ಮೂಡುಬಿದಿರೆ ಸುತ್ತಮುತ್ತ ಉತ್ತಮ ಮಳೆಯಾಗಿದೆ.

ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ 2-3 ದಿನ ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಬಾಳೆಹೊನ್ನೂರು ಸುತ್ತ ತುಂತುರು ಮಳೆಯಾಗಿದೆ.

ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.

ಸುಂಟಿಕೊಪ್ಪ, ಚಟ್ಟಳ್ಳಿ, ಸಿದ್ದಾಪುರ, ನಾಕೂರು, ಮಳೂರು, ಬಾಳೆಕಾಡು, ಕೊಡಗರಹಳ್ಳಿ ವ್ಯಾಪ್ತಿಯಲ್ಲಿ ಒಂದು ಗಂಟೆ ರಭಸವಾಗಿ ಸುರಿದು ತಂಪೆರೆಯಿತು. ಮಡಿಕೇರಿ ಸುತ್ತಮುತ್ತ, ಕುಶಾಲನಗರ, ನಾಪೋಕ್ಲು, ತಲಕಾವೇರಿ ಭಾಗದಲ್ಲಿ ಸಾಧಾರಣ ಮಳೆಯಾಗಿದೆ. 

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ, ಹುಣಸೂರು ತಾಲ್ಲೂಕಿನ ಬಿಳಿಕೆರೆ ಹಾಗೂ ಮೈಸೂರಿನ ಹೊರವಲಯದಲ್ಲಿ ಸಾಧಾರಣ ಮಳೆ ಸುರಿದಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ.

ಶಿವಮೊಗ್ಗ ನಗರದಲ್ಲಿ ಮಂಗಳವಾರ ಸಂಜೆ ಕೆಲವು ನಿಮಿಷ ಸುರಿದ ಮಳೆ ಕಾವಲಿಯಂತಾಗಿದ್ದ ಭೂಮಿಗೆ ತಂಪೆರೆಯಿತು. ತೀರ್ಥಹಳ್ಳಿ ಸುತ್ತಮುತ್ತ ಸಂಜೆಯವರೆಗೂ ಮೋಡ ಕವಿದ ವಾತಾವರಣವಿತ್ತು.

ತಂಪಾದ ರಾಜಧಾನಿ

ಬಿಸಿಲಿನಿಂದ ಬಳಲಿದ್ದ ಬೆಂಗಳೂರು ನಗರದ ಜನತೆಗೆ ಮಂಗಳವಾರ ಸಂಜೆ ಬಿದ್ದ ಮಳೆ ತಂಪೆರೆದಿದೆ.

ಧಾರಾಕಾರ ಮಳೆಯ ಜತೆಗೆ ಗಾಳಿಯ ವೇಗವೂ ಜೋರಾಗಿದ್ದರಿಂದ ನಗರದ ಹತ್ತಕ್ಕೂ ಹೆಚ್ಚು ಕಡೆಗಳಲ್ಲಿ ಮರಗಳು ಉರುಳಿಬಿದ್ದಿವೆ.

ನಗರದಲ್ಲಿ ಮಧ್ಯಾಹ್ನವೇ ಮೋಡ ಕವಿದ ವಾತಾವರಣ ಮಳೆಯ ಮುನ್ಸೂಚನೆ ನೀಡಿತ್ತು. ಸಿಡಿಲು, ಗುಡುಗು ಸಹಿತ ಸಂಜೆಯ ವೇಳೆಗೆ ಜಿಟಿ ಜಿಟಿಯಾಗಿ ಮಳೆ ಶುರುವಾಯಿತು. ಕ್ರಮೇಣ ಮಳೆಯ ಆರ್ಭಟ ಹೆಚ್ಚಾಯಿತು.

ರಾಜಾಜಿನಗರ, ಬಸವೇಶ್ವರನಗರ, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಪೀಣ್ಯ, ದಾಸರಹಳ್ಳಿ, ನಾಗಸಂದ್ರ,  ವಿದ್ಯಾರಣ್ಯಪುರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆ ಆಯಿತು. ಅಲ್ಲೆಲ್ಲ ಕಾಲುವೆಗಳು ತುಂಬಿ ರಸ್ತೆಯಲ್ಲೇ ನೀರು ಹರಿಯಿತು.

‘ಬೆಂಗಳೂರು ವಾಯುವ್ಯ ಭಾಗದ ಪ್ರದೇಶಗಳಲ್ಲಿ ಜೋರಾಗಿ ಮಳೆ ಆಗಿದೆ. ಉಳಿದೆಡೆ ಜಿಟಿ ಜಿಟಿ ಮಳೆ ಸುರಿದಿದೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ರಾಮನಗರದಲ್ಲೂ ಮಳೆಯ ಅಬ್ಬರ

ರಾಮನಗರ: ಜಿಲ್ಲೆಯ ವಿವಿಧೆಡೆ‌ ಮಂಗಳವಾರ ರಾತ್ರಿ ವರುಣ ಅರ್ಭರಿಸಿದ್ದು, ಗುಡುಗು ಸಹಿತ ಜೋರು‌ ಮಳೆಯಾಗಿದೆ.‌ ರಾತ್ರಿ‌‌ ಎಂಟರ ಸುಮಾರಿಗೆ ತಾಲ್ಲೂಕಿನ ಕೆಲವೆಡೆ ಗುಡುಗು‌ ಸಿಡಿಲು ಸಹಿತ ಮಳೆ ಸುರಿದಿದೆ. ಇನ್ನೂ ಕೆಲವಡೆ ಜೋರು ಗಾಳಿ ಬೀಸಿದ್ದು, ಗುಡುಗು‌ ಸಿಡಿಲಿನ ಅಬ್ಬರವಷ್ಟೇ ಕೇಳಿಸಿತು.‌

ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆಯಲ್ಲಿ 67 ಮಿ.ಮೀ, ಗೋಪನಹಳ್ಳಿಯಲ್ಲಿ 71 ಮಿ.ಮೀ‌ ಮಳೆ ಪ್ರಮಾಣ ದಾಖಲಾಗಿದೆ. ಕನಕಪುರ ತಾಲ್ಲೂಕಿನ ಅಲ್ಲಲ್ಲೂ ಜೋರು ಮಳೆಯಾಗಿದೆ. ತಾಲ್ಲೂಕಿನ ಚೀಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 71 ಮಿ.ಮೀ, ಕೊಳಕೊಂಡನಹಳ್ಳಿ‌ಯಲ್ಲಿ 93 ಮಿ.ಮೀ.ನಷ್ಟು ಮಳೆಯಾಗಿದೆ.

Post Comments (+)