ಶನಿವಾರ, ಸೆಪ್ಟೆಂಬರ್ 25, 2021
28 °C
ತಮಿಳುನಾಡು ಕಳ್ಳರಿಗೆ ಚಳ್ಳೇಹಣ್ಣು ತಿನ್ನಿಸಿದ ಆಂಧ್ರ ಗ್ಯಾಂಗ್

ಚೆಕ್‌ಪೋಸ್ಟ್ ಹಾಕಿ ರಕ್ತಚಂದನ ದೋಚಿದ ಕಳ್ಳರು!

ಎಂ.ಸಿ. ಮಂಜುನಾಥ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಕ್ತಚಂದನದ ತುಂಡುಗಳನ್ನು ಸಾಗಿಸುತ್ತಿದ್ದ ತಮಿಳುನಾಡಿನ ಕಳ್ಳರ ಲಾರಿಯನ್ನು ಅರಣ್ಯಾಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿದ ಆಂಧ್ರಪ್ರದೇಶದ ಕಳ್ಳರು, ಆ ಲಾರಿಯಲ್ಲಿದ್ದ 135 ಕೆ.ಜಿ ತೂಕದ ತುಂಡುಗಳನ್ನು ‘ಜಪ್ತಿ’ ಮಾಡಿದ್ದರು. ಕೊನೆಗೆ, ಅವುಗಳನ್ನು ಮಾರಾಟ ಮಾಡಲು ನಗರಕ್ಕೆ ಬಂದಾಗ ಒಬ್ಬಾತ ಬೈಯಪ್ಪನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸದಾನಂದನಗರ 8ನೇ ಮುಖ್ಯರಸ್ತೆಯ ರೈಲ್ವೆ ಸಮಾನಾಂತರ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿರುವ ಇನ್‌ಸ್ಪೆಕ್ಟರ್ ಮಹಮದ್ ರಫಿ ನೇತೃತ್ವದ ತಂಡ, ಚಿತ್ತೂರಿನ ಸಿ.ರೆಡ್ಡಿ ಶೇಖರ್ (28) ಎಂಬಾತನನ್ನು ಬಂಧಿಸಿದೆ. ಆರೋಪಿಯಿಂದ ಟೊಯೊಟ ಕರೋಲಾ ಕಾರು ಹಾಗೂ ₹ 2.15 ಲಕ್ಷ ಮೌಲ್ಯದ ರಕ್ತಚಂದನದ ತುಂಡುಗಳನ್ನು ಜಪ್ತಿ ಮಾಡಲಾಗಿದೆ.

ಲಾರಿ ಬಿಟ್ಟು ಓಡಿದ್ದರು: ‘ತಮಿಳುನಾಡಿನ ಕಳ್ಳರ ಗ್ಯಾಂಗ್‌ ಒಂದು ತಿಂಗಳ ಹಿಂದೆ ಶೇಷಾಚಲಂ ಅರಣ್ಯ ಪ್ರದೇಶದಿಂದ ರಕ್ತಚಂದನದ ತುಂಡುಗಳನ್ನು ಸಾಗಿಸುತ್ತಿತ್ತು. ಆ ವಿಚಾರ ತಿಳಿದ ನಾನು, ಸ್ನೇಹಿತರಾದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲು, ಚಂದ್ರಶೇಖರ್ ಅಲಿಯಾಸ್ ಚಂದು ಹಾಗೂ ರಾಮು ಜತೆ ಸೇರಿಕೊಂಡು ಮಾರ್ಗಮಧ್ಯೆಯೇ ಅವುಗಳನ್ನು ಕಳವು ಮಾಡಲು ಸಂಚು ರೂಪಿಸಿದ್ದೆ’ ಎಂದು ಪೊಲೀಸರಿಗೆ ರೆಡ್ಡಿ ಹೇಳಿಕೆ ಕೊಟ್ಟಿದ್ದಾನೆ.

‘ಚಿತ್ತೂರು ಜಿಲ್ಲೆಯ ಪಿಲೇರು ಟೌನ್ ಬಳಿ ನಾವೇ ಚೆಕ್‌ ಪೋಸ್ಟ್ ಹಾಕಿದ್ದೆವು. ಅರಣ್ಯಾಧಿಕಾರಿಗಳಂತೆ ಆ ಲಾರಿಯನ್ನು ತಡೆದೆವು. ನಮ್ಮನ್ನು ನೋಡುತ್ತಿದ್ದಂತೆಯೇ ಆ ಕಳ್ಳರು ಬಂಧನದ ಭೀತಿ ಓಡಿ ಹೋದರು. ನಂತರ ನಾವು ಅದರಲ್ಲಿದ್ದ ರಕ್ತಚಂದನದ ತುಂಡುಗಳನ್ನು ಕಾರಿನಲ್ಲಿ ಹಾಕಿಕೊಂಡು ಬಂದಿದ್ದೆವು.’

‘10 ತುಂಡುಗಳನ್ನು ಚಿತ್ತೂರಿನಲ್ಲೇ ಮಾರಾಟ ಮಾಡಿದ್ದ ಮಲ್ಲಿಕಾರ್ಜುನ, ಉಳಿದ ಐದು ತುಂಡುಗಳನ್ನು ಮಾರಲು ನನ್ನನ್ನು ಬೆಂಗಳೂರಿಗೆ ಕಳುಹಿಸಿದ್ದ. ಮುಖ್ಯರಸ್ತೆಯಲ್ಲಿ ಪೊಲೀಸ್ ತಪಾಸಣೆ ಇರುತ್ತದೆಂದು, ಒಳರಸ್ತೆಗಳ ಮೂಲಕ ಹೊಸಕೋಟೆ ಕಡೆಗೆ ಹೊರಟಿದ್ದೆ’ ಎಂದು ರೆಡ್ಡಿ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ನೋಂದಣಿ ಸಂಖ್ಯೆ ಸುಳಿವು: ಬೆಂಗಳೂರು ಕಡೆಗೆ ಹೋದ ‘ಎಪಿ 09–ಸಿಕ್ಯು–9745’ ನೋಂದಣಿ ಸಂಖ್ಯೆಯ ಸಿಲ್ವರ್ ಬಣ್ಣದ ಕಾರಿನಲ್ಲಿ ರಕ್ತಚಂದನದ ತುಂಡುಗಳಿದ್ದುದನ್ನು ನೋಡಿದ್ದಾಗಿ ಪೊಲೀಸ್ ಮಾಹಿತಿದಾರರೊಬ್ಬರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ಹೇಳಿದ್ದರು. ಕೂಡಲೇ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಎರಡು ತಂಡಗಳು, ಬ್ಯಾರಿಕೇಡ್ ಹಾಕಿಕೊಂಡು ತಪಾಸಣೆ ಪ್ರಾರಂಭಿಸಿದವು. ಬೆಳಿಗ್ಗೆ 10.30ರ ಸುಮಾರಿಗೆ ಬಂದ ಕಾರನ್ನು ಪರಿಶೀಲಿಸಿದಾಗ ರಕ್ತಚಂದನ ಪತ್ತೆಯಾಯಿತು ಎಂದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಸ್ತೆ ಬದಿಯೇ ಉಳಿದ ಲಾರಿ

‘ರೆಡ್ಡಿಯ ಬಂಧನವಾಗುತ್ತಿದ್ದಂತೆಯೇ ಆತನ ಸಹಚರರ ಮೊಬೈಲ್‌ಗಳೆಲ್ಲ ಸ್ವಿಚ್ಡ್‌ಆಫ್ ಆಗಿವೆ. ತಮಿಳುನಾಡು ಕಳ್ಳರ ಲಾರಿಯನ್ನು ಪಿಲೇರು ಟೌನ್‌ನಲ್ಲೇ ರಸ್ತೆ ಬದಿ ನಿಲ್ಲಿಸಿರುವುದಾಗಿ ರೆಡ್ಡಿ ಹೇಳಿದ್ದಾನೆ. ಹೀಗಾಗಿ, ಆ ವಾಹನ ಜಪ್ತಿ ಮಾಡಲು ಆರೋಪಿಯನ್ನು ಬುಧವಾರ ಅಲ್ಲಿಗೆ ಕರೆದುಕೊಂಡು ಹೋಗಲಾಗುವುದು’ ಎಂದು ಬೈಯಪ್ಪನಹಳ್ಳಿ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು