ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೆಡ್ಡಿ ಆಪ್ತನ ಜಾಮೀನು ಅರ್ಜಿ ವಜಾ

Last Updated 20 ನವೆಂಬರ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಆ್ಯಂಬಿಡೆಂಟ್ ಕಂಪನಿ ವಂಚನೆ ಪ್ರಕರಣದ ಆರೋಪಿ ಆಲಿಖಾನ್ ಸಲ್ಲಿಸಿದ್ದನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ 61ನೇ ಸಿಟಿ ಸಿವಿಲ್ ನ್ಯಾಯಾಲಯ ಮಂಗಳವಾರ ವಜಾ ಮಾಡಿದೆ.

ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದ ಆಲಿಖಾನ್, ಕಾಯಂ ನಿರೀಕ್ಷಣಾ ಜಾಮೀನು ಕೋರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ, ಜಾಮೀನು ವಜಾ ಮಾಡಿ ಆದೇಶ ಹೊರಡಿಸಿದರು.

ಸಿಸಿಬಿ ಪರ ವಾದಿಸಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಶೈಲಜಾ ಕೃಷ್ಣನಾಯಕ, ‘ಪ್ರಕರಣ ಸಂಬಂಧ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲಾಗಿದೆ. ಆರೋಪಿ ಆಲಿಖಾನ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ. 57 ಕೆ.ಜಿ ಚಿನ್ನ ಹಾಗೂ ಹಣ ಜಪ್ತಿ ಮಾಡಬೇಕಿದೆ. ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿಯನ್ನು ಹೊರ ತೆಗೆಯಬೇಕಿದೆ. ಹೀಗಾಗಿ ಆರೋಪಿಗೆ ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದ್ದರು.

ಆರೋಪಿ ಪರ ವಕೀಲ ಆರ್.ಪಿ.ಚಂದ್ರಶೇಖರ್, ‘ಕಕ್ಷಿದಾರರು ಸಿಸಿಬಿ ತನಿಖೆಗೆ ಸಹಕರಿಸಲಿದ್ದಾರೆ. ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದ್ದರು.

ಮತ್ತೊಬ್ಬ ಬಂಧನ: ವಂಚನೆ ಪ್ರಕರಣ ಸಂಬಂಧ 7ನೇ ಆರೋಪಿ ವಾಹಬ್ (44) ಎಂಬಾತನನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಪೊಲೀಸರು, ‘ಪ್ರಕರಣ ಸಂಬಂಧ ವಾಹಬ್‌ನಿಂದ ಮಾಹಿತಿ ಪಡೆಯಬೇಕಿದೆ. ಕಸ್ಟಡಿಗೆ ನೀಡಿ’ ಎಂದು ಕೋರಿದ್ದರು. ಅವರ ಮನವಿ ಮನ್ನಿಸಿದ ನ್ಯಾಯಾಲಯ, ಆರೋಪಿಯನ್ನು ಸಿಸಿಬಿ ಪೊಲೀಸರ ಕಸ್ಟಡಿಗೆ ನೀಡಿತು.

ಸಿಸಿಬಿ ಎಸಿಪಿ ಎತ್ತಗಂಡಿ

ಆ್ಯಂಬಿಡೆಂಟ್‌ ಕಂಪನಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯ ತಂಡದಲ್ಲಿದ್ದ ಎಸಿಪಿ ವೆಂಕಟೇಶ್‌ ಪ್ರಸನ್ನ ಅವರನ್ನು ಮಂಗಳವಾರ ಎತ್ತಂಗಡಿ ಮಾಡಿ, ನಗರ ಅಪರಾಧ ದಾಖಲಾತಿ ಘಟಕಕ್ಕೆ (ಸಿಸಿಆರ್‌ಬಿ) ನಿಯೋಜಿಸಲಾಗಿದೆ.

‘ಎಸಿಪಿ ವೆಂಕಟೇಶ್ ಪ್ರಸನ್ನ ಅವರು ಹಣಕ್ಕೆ ಬೇಡಿಕೆ ಇಟ್ಟು ನನಗೆ ಬ್ಲಾಕ್‌ಮೇಲ್ ಮಾಡಿದ್ದಾರೆ’ ಎಂದು ಆರೋಪಿಸಿ ಉದ್ಯಮಿ ಆರ್‌. ವಿಜಯ್ ಟಾಟಾ, ಎಸಿಪಿಯವರದ್ದು ಎನ್ನಲಾದ ಸಂಭಾಷಣೆಯ ಸಿ.ಡಿ ಸಮೇತ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಹಾಗೂ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್ ಅವರಿಗೆ ಮಂಗಳವಾರ ಬೆಳಿಗ್ಗೆ ದೂರು ನೀಡಿದ್ದರು. ಸಂಜೆಯೇ ಎಸಿಪಿಯ ವರ್ಗಾವಣೆ ಆದೇಶ ಹೊರ ಬಿದ್ದಿದೆ.

ವಿನಾಕಾರಣ ಕಿರುಕುಳ: ‘ಕಂಪನಿ ಜೊತೆ ವ್ಯವಹಾರ ನಡೆಸಿದ ಸಂಬಂಧ ವಿಚಾರಣೆಗೆ ಬರುವಂತೆ ಸಿಸಿಬಿ ಪೊಲೀಸರು, ನೋಟಿಸ್ ನೀಡಿದ್ದರು. ನಮ್ಮ ತಂದೆಗೆ ಹುಷಾರಿಲ್ಲದಿದ್ದರಿಂದ ಒಂದು ದಿನ ತಡವಾಗಿ ವಿಚಾರಣೆಗೆ ಬರುವುದಾಗಿ ಡಿಸಿಪಿ ಗಿರೀಶ್ ಅವರಿಗೆ ತಿಳಿಸಿದ್ದೆ. ಅವರೂ ಒಪ್ಪಿಕೊಂಡಿದ್ದರು. ಆದರೆ, ಎಸಿಪಿಯವರು ವಿಚಾರಣೆಗೆ ಬರುವಂತೆ ಒತ್ತಾಯಿಸಿದ್ದರು. ಹಣಕ್ಕೂ ಬೇಡಿಕೆ ಇಟ್ಟಿದ್ದರು’ ಎಂದು ವಿಜಯ್ ದೂರಿನಲ್ಲಿ ತಿಳಿಸಿದ್ದರು.

‘ಕಂದಾಯ ಭವನದ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದ್ದ ಎಸಿಪಿ ವೆಂಕಟೇಶ್ ಪ್ರಸನ್ನ, ನನ್ನ ಆಸ್ತಿಯನ್ನು ಜಪ್ತಿ ಮಾಡುವಂತೆ ಹೇಳಿದ್ದರು. ‘ನಾನು ಹೇಳಿದೆ ಎಂದು ಯಾರಿಗೂ ಹೇಳಬೇಡಿ’ ಎಂದು ಆ ಅಧಿಕಾರಿಗೆ, ಎಸಿಪಿ ಅವರೇ ಹೇಳಿದ್ದರು (ಆ ಸಂಭಾಷಣೆ ಸಿ.ಡಿಯಲ್ಲಿದೆ)’ ಎಂದು ಹೇಳಿದ್ದರು.

‘ಇದೇ ಎಸಿಪಿ, ಉದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಅದರಿಂದ ಸಿಸಿಬಿಗೆ ಕೆಟ್ಟ ಹೆಸರು ಬರುತ್ತಿದೆ. ನನಗೂ ಜೀವ ಬೆದರಿಕೆ ಇದೆ. ಅವರ ವಿರುದ್ಧ ಕ್ರಮ ಜರುಗಿಸಿ’ ಎಂದು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT