ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಣೆಕ್‌ಷಾ ಮೈದಾನದಲ್ಲಿ ‘ಕಾರ್ಗಿಲ್ ಕಥನ’

ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ * ವಿವಿಧ ಶಾಲೆಗಳ 2,200 ಮಕ್ಕಳಿಂದ ಸಾಂಸ್ಕೃತಿಕ ವೈಭವ
Last Updated 9 ಜುಲೈ 2019, 3:32 IST
ಅಕ್ಷರ ಗಾತ್ರ

ಬೆಂಗಳೂರು: ಮಾಣೆಕ್‌ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಈ ಸಲದ ಗಣರಾಜ್ಯೋತ್ಸವದಲ್ಲಿ ಮೂಡಿಬರಲಿದೆ ‘ಕಾರ್ಗಿಲ್ ಕಥನ’. ಶಸ್ತ್ರಸಜ್ಜಿತ ಪ್ಯಾರಾ ಎಸ್ಎಫ್ ಸಿಬ್ಬಂದಿಯಿಂದ ಅಣಕು ಕಾರ್ಯಾಚರಣೆ ನಡೆದರೆ ಭಾರತೀಯ ಸೇನಾ ಸೇವಾ ಕಾರ್ಪ್ಸ್‌ (ಎಎಸ್‌ಸಿ) ಸೈನಿಕರಿಂದ ಕುದುರೆ ಸವಾರಿಯ ಸಾಹಸ ಪ್ರದರ್ಶನ ಇರಲಿದೆ. ಇವುಗಳ ನಡುವೆ‘ಸರ್ವಜನಾಂಗದ ಶಾಂತಿಯ ತೋಟ’ ಎನ್ನುತ್ತ ‘ರಾಷ್ಟ್ರೀಯ ಭಾವೈಕ್ಯತೆ’ಯ ಮಹತ್ವವನ್ನು ಸಾರಲಿದ್ದಾರೆ ಮಕ್ಕಳು.

ಶನಿವಾರ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಈ ಬಾರಿಯ ವಿಶೇಷ ಕಾರ್ಯಕ್ರಮಗಳಿವು.

ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರನ್ನು ಮನರಂಜಿಸಿ ಜಾಗೃತಿ ಮೂಡಿಸುವುದಕ್ಕಾಗಿ ನಗರದ ವಿವಿಧ ಶಾಲೆಯ 2,200 ವಿದ್ಯಾರ್ಥಿಗಳು ಹಾಗೂ ಸಾಹಸ ಪ್ರದರ್ಶಿಸಲಿರುವ ಸೇನಾಪಡೆಗಳ 100ಕ್ಕೂ ಹೆಚ್ಚು ಸಿಬ್ಬಂದಿ ಎರಡು ದಿನಗಳಿಂದ ಮೈದಾನದಲ್ಲಿ ತಾಲೀಮು ನಡೆಸುತ್ತಿದ್ದಾರೆ.

ಈ ಬಾರಿಯ ಕಾರ್ಯಕ್ರಮಕ್ಕಾಗಿ ₹75 ಲಕ್ಷ ಖರ್ಚು ಮಾಡಲಾಗುತ್ತಿದೆ. ಕಾರ್ಯಕ್ರಮ ವೀಕ್ಷಣೆಗೆ 3 ಸಾವಿರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುತ್ತಿದ್ದು, ಅದಕ್ಕಾಗಿ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗಿದೆ.

ಮೈದಾನಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ್ದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್, ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಹಾಗೂ ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು.

ರಾಜ್ಯಪಾಲರಿಂದ ಧ್ವಜಾರೋಹಣ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯುಕ್ತ ಮಂಜುನಾಥ್‌ ಪ್ರಸಾದ್‌,‘ಜ.26ರ ಬೆಳಿಗ್ಗೆ 9 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದೇ ವೇಳೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ ಆಗಲಿದೆ. ಗೌರವ ವಂದನೆ ಸ್ವೀಕರಿಸಿ ರಾಜ್ಯಪಾಲರುಗಣರಾಜ್ಯೋತ್ಸವದ ಭಾಷಣ ಮಾಡಲಿದ್ದಾರೆ. ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಿಸಲಿದ್ದಾರೆ’ ಎಂದು ಹೇಳಿದರು.

‘ಪಥಸಂಚಲನದಲ್ಲಿ ಸೇನಾಪಡೆ, ಪೊಲೀಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳ 38 ತಂಡಗಳು ಪಾಲ್ಗೊಳ್ಳಲಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘ಮೈದಾನದ ಜಿ–1 ಗೇಟ್‌ನಲ್ಲಿ ಗಣ್ಯವ್ಯಕ್ತಿಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು ಹಾಗೂ ಮಾಧ್ಯಮದವರಿಗೆ ಪ್ರವೇಶವಿದೆ. ಜಿ–2 ಗೇಟ್‌ನಲ್ಲಿ ಅತೀ ಗಣ್ಯ ವ್ಯಕ್ತಿಗಳು, ಜಿ–3ರಲ್ಲಿ ನಿವೃತ್ತ ಸೇನಾಧಿಕಾರಿಗಳು ಹಾಗೂ ಬಿಎಸ್ಎಫ್ ಅಧಿಕಾರಿಗಳು ಹಾಗೂ ಜಿ–4ರಲ್ಲಿ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

50 ಸಿ.ಸಿ.ಟಿ.ವಿ ಕ್ಯಾಮೆರಾ: ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್, ‘ಮೈದಾನ ಹಾಗೂ ಅದರ ಸುತ್ತಮುತ್ತ ಸ್ಥಳಗಳ ಮೇಲೆ ನಿಗಾ ಇರಿಸಲು 50 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. 4 ಬ್ಯಾಗೇಜ್ ತಪಾಸಣೆ ಉಪಕರಣಗಳು ಇರಲಿವೆ. 15 ದಿನಗಳಿಂದ ಮೈದಾನಕ್ಕೆ ಪೊಲೀಸರ ಕಣ್ಗಾವಲು ಇದೆ’ ಎಂದು ಹೇಳಿದರು.

‘ನಗರದ ಎಲ್ಲ ಹೋಟೆಲ್, ವಸತಿಗೃಹ, ತಂಗುದಾಣಗಳಲ್ಲಿ ವಾಸ್ತವ್ಯವಿರುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ಅನುಮಾನ ಬಂದವರನ್ನು ವಶಕ್ಕೆ ಪಡೆಯಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಈ ವಸ್ತುಗಳನ್ನು ತರುವುದು ನಿಷೇಧ

ಹೆಲ್ಮೆಟ್, ಕ್ಯಾಮೆರಾ, ರೇಡಿಯೊ, ಕೊಡೆ, ಸಿಗರೇಟ್, ಬೆಂಕಿ ಪೊಟ್ಟಣ, ಹರಿತವಾದ ವಸ್ತು ಹಾಗೂ ಚಾಕು–ಚೂರಿ, ಕರಪತ್ರ, ಕಪ್ಪು ಕರವಸ್ತ್ರ, ಬಣ್ಣದ ದ್ರಾವಣ, ತಿಂಡಿ–ತಿನಿಸುಗಳು, ಕ್ಯಾಮೆರಾ, ಮದ್ಯ/ಮಾದಕ ವಸ್ತು, ನೀರಿನ ಬಾಟಲಿ ಹಾಗೂ ಕ್ಯಾನ್‌, ಬಾವುಟ, ಶಸ್ತ್ರಾಸ್ತ್ರ, ಪಟಾಕಿ ಮತ್ತು ಸ್ಫೋಟಕ ವಸ್ತುಗಳು.

ವಾಹನ ನಿಲುಗಡೆಗೆ ಅವಕಾಶ

ಶಾಲಾ ಬಸ್‌ಗಳು: ಅನಿಲ್ ಕುಂಬ್ಳೆ ವೃತ್ತದಿಂದ ಎಂ.ಜಿ.ರಸ್ತೆಯ ಮೆಟ್ರೊ ನಿಲ್ದಾಣದವರೆಗೆ

ದ್ವಿಚಕ್ರ ವಾಹನ: ಕಾಮರಾಜ ರಸ್ತೆಯ ಆರ್‌ಎಸ್‌ಐ ಗೇಟ್, ಆರ್ಮಿ ಪಬ್ಲಿಕ್ ಶಾಲೆ ಮುಂಭಾಗ, ಮೈನ್ ಗಾರ್ಡ್ ಕ್ರಾಸ್ ರಸ್ತೆ ಸಫೀನಾ ಪ್ಲಾಜಾ ಮುಂಭಾಗ.

ವಾಹನಗಳ ಸಂಚಾರ ನಿರ್ಬಂಧ

ಕಬ್ಬನ್ ರಸ್ತೆಯ ಬಿ.ಆರ್.ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ

ವಾಹನ ನಿಲುಗಡೆ ನಿರ್ಬಂಧ

* ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ

* ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣ

* ಸಿಟಿಓ ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್‌

* ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT