ಪ್ರವಾಸಿ ತಾಣವಾಗಿ ಸಾರಕ್ಕಿ ಕೆರೆ ಅಭಿವೃದ್ಧಿ

ಬೆಂಗಳೂರು: ಸಾರಕ್ಕಿ ಕೆರೆ ಅಂಗಳದಲ್ಲಿ ಉದ್ಯಾನ, ಕಲ್ಯಾಣಿ, ಮಕ್ಕಳಿಗೆ ಆಡಲು ವ್ಯವಸ್ಥೆ, ದೋಣಿ ವಿಹಾರ ನಿರ್ಮಾಣ ಮಾಡುವ ಮೂಲಕ ಜಲಮೂಲವನ್ನು ಪ್ರವಾಸಿ ತಾಣವನ್ನಾಗಿಸಲು ಬಿಬಿಎಂಪಿ ಮುಂದಾಗಿದೆ.
ಜರಗನಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿರುವ ಈ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಮೇಯರ್ ಗಂಗಾಂಬಿಕೆ ಶುಕ್ರವಾರ ಪರಿ ಶೀಲಿಸಿದರು. ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸು
ವಂತೆ ಅಧಿಕಾರಿಗಳಿಗೆ ಅವರು ತಾಕೀತು ಮಾಡಿದರು.
ಬಿಬಿಎಂಪಿಯಿಂದ ಅಭಿವೃದ್ಧಿ ಕಾಮಗಾರಿಗೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಕೆರೆ ಸುತ್ತಲೂ ತಡೆಗೋಡೆ ನಿರ್ಮಿಸಿ ಅದರ ಮೇಲೆ ತಂತಿ ಬೇಲಿ ಅಳವಡಿಸುವ ಹಾಗೂ ಎರಡು ಮುಖ್ಯದ್ವಾರಗಳ ನಿರ್ಮಾಣ ಕಾರ್ಯ ಮುಗಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕೆರೆಗೆ ಮಳೆ ನೀರು ಸರಾಗವಾಗಿ ಸೇರಲು ಒಂಬತ್ತು ಕಡೆ ಸಿಮೆಂಟ್ ಕೊಳವೆಗಳನ್ನು ಅಳವಡಿಸಲಾಗಿದೆ. 3.2 ಕಿ.ಮೀ ಉದ್ದದ ವಾಯುವಿಹಾರ ಪಥ ನಿರ್ಮಾಣದ ಕೆಲಸ ಮತ್ತು ಎರಡು ಕಡೆ ಕೋಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಅಧಿಕಾರಿಗಳಿಗೆ ತರಾಟೆ: ಸಾರಕ್ಕಿ ಕೆರೆ ಸುತ್ತಲೂ ಜಲಮಂಡಳಿಯಿಂದ ಕೊಳಚೆ ನೀರು ಸಾಗಿಸಲು ಪೈಪ್‌ಲೈನ್ ಅಳವಡಿಸಬೇಕು. ಆದರೆ, ಇದುವರೆಗೆ ಜಲಮಂಡಳಿಯಿಂದ ಯಾವುದೇ ಕಾಮಗಾರಿ ಪ್ರಾರಂಭಿಸದೇ ಇರುವು ದನ್ನು ಗಮನಿಸಿದ ಮೇಯರ್, ಅಧಿಕಾ ರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ನೀವು ಮಾಡಬೇಕಿರುವ ಕೆಲಸವನ್ನು ಬಿಬಿಎಂಪಿ ವತಿಯಿಂದ ಮಾಡಲಾಗುತ್ತಿದೆ. ಪ್ರತಿ ಬಾರಿಯೂ ನಿಮಗೆ ನೆನಪಿಸುತ್ತಲೇ ಇರಬೇಕಾ, ತ್ಯಾಜ್ಯ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದೆ. ನಾವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೆಲಸ ಮಾಡಿಸುತ್ತಿರುವುದು ತ್ಯಾಜ್ಯ ನೀರು ಜಲಮೂಲಕ್ಕೆ ಸೇರಿಸುವುದಕ್ಕಾ?’ ಎಂದು ಮೇಯರ್ ಅಸಮಾಧಾನ ವ್ಯಕ್ತಪಡಿಸಿದರು.
‘ಈಗಾಗಲೇ ಟೆಂಡರ್ ಆಗಿದೆ. 15 ದಿನಗಳೊಳಗಾಗಿ ಕಾಮಗಾರಿ ಆರಂಭಿಸಲಾಗುವುದು’ ಎಂದು ಜಲಮಂಡಳಿ ಸಹಾಯಕ ಎಂಜಿನಿಯರ್ ಹೇಳಿದರು.
ಕಂಬ ತೆರವುಗೊಳಿಸಿ: ಕೆರೆಯಂಗಳದಲ್ಲಿ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿದ್ದು, ಅದನ್ನು ಕೂಡಲೆ ತೆರವುಗೊಳಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.
₹14 ಕೋಟಿ ವೆಚ್ಚದಲ್ಲಿ ಎಸ್‌ಟಿಪಿ
ಜರಗನಹಳ್ಳಿ ಮತ್ತು ಆರ್‌ಬಿಐ ಬಡಾವಣೆಗಳಿಂದ ಕೆರೆಗೆ ಸೇರುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಲು ಜಲಮಂಡಳಿ ವತಿಯಿಂದ ₹14.49 ಕೋಟಿ ಎಸ್‌ಟಿಪಿ ನಿರ್ಮಾಣ ಮಾಡಲಾಗುತ್ತಿದೆ. ಎಂಟು ಎಕರೆ ಪ್ರದೇಶದಲ್ಲಿ 50 ಲಕ್ಷ ಲೀಟರ್ ಸಾಮರ್ಥ್ಯದ ಎಸ್‌ಟಿಪಿ ತಲೆ ಎತ್ತಲಿದೆ. ಈ ಘಟಕವು ಸಂಸ್ಕರಿಸುವ ನೀರನ್ನು ವಾಯುವಿಹಾರ ಪಥದ ಪಕ್ಕದಲ್ಲಿ ಕೊಳವೆಗಳನ್ನು ಅಳವಡಿಸಿ ಕೆರೆಗೆ ಬಿಡಲಾಗುವುದು ಎಂದು ಜಲಮಂಡಳಿ ಅಧಿಕಾರಿಗಳು ಮೇಯರ್‌ಗೆ ಮಾಹಿತಿ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.