ರೂಪದರ್ಶಿಗೆ ಕಿರುಕುಳ; ವ್ಯಂಗ್ಯಚಿತ್ರಕಾರ ಸೆರೆ

7

ರೂಪದರ್ಶಿಗೆ ಕಿರುಕುಳ; ವ್ಯಂಗ್ಯಚಿತ್ರಕಾರ ಸೆರೆ

Published:
Updated:
Prajavani

ಬೆಂಗಳೂರು: ರೂಪದರ್ಶಿಯೊಬ್ಬರಿಗೆ ಫೇಸ್‌ಬುಕ್‌ನಲ್ಲಿ ನಗ್ನಚಿತ್ರಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ವ್ಯಂಗ್ಯಚಿತ್ರಕಾರ ತಮ್ಮಣ್ಣ ಫಕೀರಪ್ಪ ಹಾದಿಮನಿ (52) ಅವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಾದಿಮನಿ, ಕೆಲ ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ರೂಪದರ್ಶಿಯನ್ನು ಪರಿಚಯ ಮಾಡಿಕೊಂಡಿದ್ದರು. ಫೇಸ್‌ಬುಕ್ ಮೆಸೆಂಜರ್, ವಾಟ್ಸ್‌ಆ್ಯಪ್‌ನಲ್ಲಿ ಅವರಿಗೆ ಅಶ್ಲೀಲ ಸಂದೇಶ ಹಾಗೂ ನಗ್ನ ಚಿತ್ರಗಳನ್ನು ಕಳುಹಿಸುತ್ತಿದ್ದರು. ಅಲ್ಲದೆ, ದೈಹಿಕ ಸಂಪರ್ಕಕ್ಕೆ ಸಹಕರಿಸುವಂತೆಯೂ‍ ಪೀಡಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಈ ಕಿರುಕುಳದಿಂದ ಬೇಸತ್ತ ಸಂತ್ರಸ್ತೆ, ಜ.28ರಂದು ಸೈಬರ್ ಕ್ರೈಂ ಠಾಣೆಯ ಮೆಟ್ಟಿಲೇರಿದ್ದರು. ಮೊಬೈಲ್ ಸಂಖ್ಯೆ ಪಡೆದು ತನಿಖೆ ಕೈಗೆತ್ತಿಕೊಂಡ ಪೊಲೀಸರು, ಗೋಕಾಕ ಪಟ್ಟಣದ ಬಸ್ ನಿಲ್ದಾಣದ ಬಳಿ ಮಂಗಳವಾರ ಆರೋಪಿಯನ್ನು ಬಂಧಿಸಿದ್ದಾರೆ.

ಹಾದಿ ತಪ್ಪಿ ‘ವ್ಯಂಗ್ಯ’ರಾದರು: ಮೊದಲು ಕನ್ನಡ ಹಾಗೂ ಆಂಗ್ಲ ದೈನಿಕಗಳಲ್ಲಿ ವ್ಯಂಗ್ಯ ಚಿತ್ರಕಾರರಾಗಿದ್ದ ಹಾದಿಮನಿ, ಸದ್ಯ ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದರು. ಹಲವು ಲೇಖಕರ ಕೃತಿಗಳಿಗೆ ಮುಖಪುಟ ವಿನ್ಯಾಸಕಾರರಾಗಿಯೂ ಛಾಪು ಮೂಡಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ ಹಾದಿ ತಪ್ಪಿದ್ದ ಅವರು, ತಮ್ಮ ಕುಚೋದ್ಯತನದ ನಡವಳಿಕೆಯಿಂದಲೇ ಕುಖ್ಯಾತಿ ಪಡೆದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಹಾದಿಮನಿ ಕಳುಹಿಸಿದ್ದ ಸಂದೇಶಗಳನ್ನು ಸ್ಕ್ರೀನ್‌ಶಾಟ್ ಮಾಡಿಕೊಂಡಿದ್ದ ರೂಪದರ್ಶಿ, ‘ನಿನ್ನ ಪತ್ನಿ–ಮಕ್ಕಳಿಗೆ ಈ ಸಂದೇಶಗಳನ್ನು ರವಾನಿಸುತ್ತೇನೆ’ ಎಂದು ಎಚ್ಚರಿಸಿದ್ದರು.

ಅಷ್ಟಕ್ಕೂ ಅವರು ತಲೆಕೆಡಿಸಿಕೊಳ್ಳದಿದ್ದಾಗ ಸಂತ್ರಸ್ತೆ ಆ ಸಂದೇಶಗಳನ್ನು ಫೇಸ್‌ಬುಕ್‌ಗೇ ಅಪ್‌ಲೋಡ್ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದ್ದರಿಂದ ಹಾಗೂ ಸಂತ್ರಸ್ತೆ ಪೊಲೀಸರಿಗೆ ದೂರು ಕೊಟ್ಟಿದ್ದರಿಂದ ಎಚ್ಚೆತ್ತುಕೊಂಡ ಹಾದಿಮನಿ, ಪೋಸ್ಟ್ ಹಾಗೂ ಸಂದೇಶಗಳನ್ನು ಅಳಿಸಿದ್ದರು.

ಮುಂಬೈನಲ್ಲೂ ಪ್ರಕರಣ
‘ನಾಲ್ಕು ವರ್ಷಗಳ ಹಿಂದೆಯೂ ಹಾದಿಮನಿ ಮಹಿಳೆಯರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದರು. ಈ ಸಂಬಂಧ ಕಬ್ಬನ್‌ಪಾರ್ಕ್ ಹಾಗೂ ಅಶೋಕನಗರ ಠಾಣೆಯಲ್ಲಿ ದೂರುಗಳು ದಾಖಲಾಗಿದ್ದವು. ಆ ಪ್ರಕರಣದಲ್ಲಿ ಬಂಧಿತರಾಗಿದ್ದ ಅವರು, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಚಾಳಿ ಮುಂದುವರಿಸಿದ್ದರು. ವರ್ಷದ ಹಿಂದೆ ಮುಂಬೈನಲ್ಲೂ ಇವರ ವಿರುದ್ಧ ಲೈಂಗಿಕ ಕಿರುಕುಳ (ಐಪಿಸಿ 354) ಪ್ರಕರಣ ದಾಖಲಾಗಿತ್ತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !