ಸೋಮವಾರ, ಸೆಪ್ಟೆಂಬರ್ 27, 2021
23 °C
‘ಶಾಂತವೇರಿ ಗೋಪಾಲಗೌಡ: ಜೀವನ ಚರಿತ್ರೆ’ ಪುಸ್ತಕ ಬಿಡುಗಡೆ

ಮತದಾರರನ್ನು ಭ್ರಷ್ಟರಾಗಿಸಿದ್ದೇವೆ : ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮತದಾರರನ್ನು ನಾವೇ ಭ್ರಷ್ಟರಾಗಿಸಿದ್ದೇವೆ’ ಎಂದು ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಂತವೇರಿ ಗೋಪಾಲಗೌಡ ಕಾಲದಲ್ಲಿ ಚುನಾವಣೆಗೆ ಸ್ಪರ್ಧಿಸುವವರು ಮತ್ತು ಆಯ್ಕೆ ಮಾಡುವ ಜನರು ಭ್ರಷ್ಟರಾಗಿರಲಿಲ್ಲ. ಆದರೆ, ಇಂದಿನ ಸ್ಥಿತಿ ತದ್ವಿರುದ್ಧವಾಗಿದೆ. ಈಗ ಮತದಾರರು ಭ್ರಷ್ಟರಾಗಿದ್ದಾರೆ. ಅವರಾಗಿಯೇ ಭ್ರಷ್ಟರಾಗಿಲ್ಲ. ನಮ್ಮಂತವರು ಅವರನ್ನು ಹಾಗೆ ಮಾಡಿದ್ದೇವೆ. ಇಂದು ಭ್ರಷ್ಟಾಚಾರ ರಹಿತವಾದ ರಾಜಕಾರಣವನ್ನು ಊಹಿಸಿಕೊಳ್ಳುವುದು ಕಷ್ಟ’ ಎಂದು ಅವರು ವಿಶ್ಲೇಷಿಸಿದರು.

ನಟರಾಜ್‌ ಹುಳಿಯಾರ್‌ ಬರೆದಿರುವ ‘ಶಾಂತವೇರಿ ಗೋಪಾಲಗೌಡ: ಜೀವನ ಚರಿತ್ರೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಿತ್ತು.

‘ನಾನು ಸಹ ವ್ಯವಸ್ಥೆಯ ಜತೆ ಸ್ವಲ್ಪ ರಾಜಿ ಮಾಡಿಕೊಂಡಿದ್ದೇನೆ. ಈ ರಾಜಿಯಿಂದ ನಾವು ಕೆಟ್ಟುಹೋಗಿದ್ದೇವೆ. ಚುನಾವಣಾ ವ್ಯವಸ್ಥೆಯನ್ನೂ ಕೆಡಿಸಿದ್ದೇವೆ’ ಎಂದು ಬೇಸರಿಸಿದರು.

‘ಗೋಪಾಲಗೌಡ ಸಹ ಒಕ್ಕಲಿಗರೆ. ಅವರು ‘ನನ್ನ ಜಾತಿ ನೋಡಿ ನೀವು ಮತಹಾಕಬೇಡಿ’ ಎಂದೇ ಹೇಳುತ್ತಿದ್ದರು. ಆದರೆ, ಈಗಿನವರು ಹಾಗೆ ಹೇಳುತ್ತಾರಾ? ‘ನಾನು ನಿಮ್ಮವನೇ ಕಣಯ್ಯ, ನಮಗೆ ಒತ್ತಿ’ ಎಂದು ಹೇಳುತ್ತಾರೆ. ಜಾತಿ ಮತ್ತು ಹಣವನ್ನು ಬಿಟ್ಟು ಇಂದಿನ ರಾಜಕಾರಣ ಇಲ್ಲ. ಇವು ಇದ್ದರೆ ಮಾತ್ರ ಬಹುತೇಕರು ಗೆಲ್ಲುತ್ತಾರೆ’ ಎಂದು ರಾಜಕೀಯ ವ್ಯವಸ್ಥೆಯನ್ನು ವಿವರಿಸಿದರು.

‘ಜನರ ಸಮಸ್ಯೆಗಳನ್ನು ತಿಳಿಸಿ, ಸರ್ಕಾರದ ಕಣ್ಣನ್ನು ತೆರೆಸುವ ಜನಪ್ರತಿನಿಧಿಗಳು ಗೋಪಾಲಗೌಡರ ಕಾಲದಲ್ಲಿದ್ದರು. ಆದರೆ, ಇಂದು ಕೂಗಾಟ, ಅರಚಾಟ ಮಾಡುತ್ತ ಸದನದ ಬಾವಿಗೆ ಇಳಿಯುವವರನ್ನೆ ಉತ್ತಮ ಸಂಸದೀಯ ಪಟುಗಳು ಅಂದುಕೊಂಡಿದ್ದಾರೆ’ ಎಂದರು.

‘ಹಿಂದೆ ಸಾಮಾಜಿಕ ಹೋರಾಟದಲ್ಲಿ ಇದ್ದವರು ರಾಜಕೀಯಕ್ಕೆ ಬರುತ್ತಿದ್ದರು. ಈಗ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಶಿಕ್ಷಣ ಕ್ಷೇತ್ರದ ಲಾಬಿ ಮಾಡುವವರು ಬರುತ್ತಿದ್ದಾರೆ. ಇಂದು ಪ್ರಾಮಾಣಿಕರು ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಲ್ಲ. ಗೆದ್ದವರನ್ನು ಸಹ ಕಷ್ಟಪಟ್ಟು ಕಲಾಪದಲ್ಲಿ ಕೂರಿಸಬೇಕಿದೆ. ಇದನ್ನೆಲ್ಲ ಗಮನಿಸಿದರೆ, ಪ್ರಜಾಪ್ರಭುತ್ವ ಅಪಾಯದಲ್ಲಿದೆ ಅನಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ, ‘ಇಂದು ಸಮಾಜವಾದಿ, ಸಾಮಾಜಿಕ ಬದ್ಧತೆ ತೋರಿದರೆ, ಜಾತಿವಾದಿ ಶಕ್ತಿಗಳು ಸೋಲಿಸುತ್ತವೆ. ಅತೀ ಜಾತೀಯತೆಯ ಈ ಸಂದರ್ಭದಲ್ಲಿ ಗೋಪಾಲಗೌಡರ ಬಗ್ಗೆ ಓದಬೇಕು. ಪ್ರಾಮಾಣಿಕತೆ, ಸಾಮಾಜಿಕ ಕಳಕಳಿಯಿಂದಾಗಿಯೇ ಗೋಪಾಲಗೌಡರು ಅಗರ್ಭ ಶ್ರೀಮಂತರಾಗಿದ್ದ ಬದರಿ ನಾರಾಯಣ ಅಯ್ಯಂಗಾರ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಆ ಸ್ಪರ್ಧೆಗೆ ಅವರು ಕೇವಲ ₹ 5,000 ಖರ್ಚು ಮಾಡಿದ್ದರು. ಅದು ಸಹ ಸಾಲದ ಹಣವಾಗಿತ್ತು’ ಎಂದು ತಿಳಿಸಿದರು.

***

ಪುಸ್ತಕದ ಕುರಿತು

ಪುಸ್ತಕ: ಶಾಂತವೇರಿ ಗೋಪಾಲಗೌಡ

ಪ್ರಕಾಶನ : ನ್ಯಾಷನಲ್‌ ಬುಕ್‌ ಟ್ರಸ್ಟ್‌

ಪುಟಗಳು: 147

ಬೆಲೆ: ₹ 180

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು