ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೆಲ್ಲೆಡೆ ವಿಜೃಂಭಿಸುತ್ತಿರುವ ಹಿಂಸೆ: ಮುರುಘಾ ಶರಣರ ವಿಷಾದದ ನುಡಿ

ಶರಣ ಸಂಸ್ಕೃತಿ ಉತ್ಸವ
Last Updated 28 ಡಿಸೆಂಬರ್ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು:‘ಅಹಿಂಸೆಯಿಂದ ಹಿಂಸೆಯೆಡೆಗೆ ಜಗತ್ತು ವಾಲುತ್ತಿದೆ. ದೇಶದೆಲ್ಲೆಡೆ ಹಿಂಸೆ ವಿಜೃಂಭಿಸುತ್ತಿದೆ’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಬಸವ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಮಾತನಾಡಿದ ಅವರು,‘ಧರ್ಮದ ಹೆಸರಿನಲ್ಲಿ, ಜಾತ್ರೆ, ಉತ್ಸವಾದಿಗಳಲ್ಲಿ ಹಿಂಸೆ ತಾಂಡವವಾಡುತ್ತಿದೆ. ಚಾಮರಾಜ ನಗರದ ಸುಳ್ವಾಡಿಯ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಘಟನೆ ಸಹ ದೊಡ್ಡ ದುರಂತ’ ಎಂದು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ಧರಾಮಯ್ಯ, ‘ಜಾತಿವ್ಯವಸ್ಥೆಗೆ ಮುಕ್ತಿಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಅದು ಬೇರು ಬಿಟ್ಟಿದೆ. ಆಯಾ ಕಾಲಮಾನಕ್ಕೆ ಬೇರೆ ಬೇರೆ ರೂಪು ತಾಳುತ್ತ ಬಂದಿದೆ’ ಎಂದರು.

‘ವೈದಿಕ ಧರ್ಮ, ತನ್ನ ವಿರುದ್ಧ ಸ್ಥಾಪನೆಗೊಂಡ ಧರ್ಮಗಳನ್ನು ಅಪವ್ಯಾಖ್ಯಾನ ಮಾಡುವ, ದೇಶದಿಂದ ಓಡಿಸುವ, ಕೆಟ್ಟ ಅಭಿಪ್ರಾಯಗಳನ್ನು ಮೂಡಿಸುವ ಕೆಲಸ ಮಾಡಿದೆ. ಇದಕ್ಕೆ ಪರ್ಯಾಯವಾಗಿ ಸ್ಥಾಪನೆಗೊಂಡಿದ್ದು ಲಿಂಗಾಯತ ಧರ್ಮ. ಬಸವಣ್ಣನ ವಚನಗಳು ಒಂದೆಡೆ ವೈಚಾರಿಕತೆ, ವೈಜ್ಞಾನಿಕತೆ ಹೇಳುತ್ತವೆ. ಇನ್ನೊಂದೆಡೆ ಸಂಶಯಾಸ್ಪದ, ದ್ವಂದ್ವ ನಿಲುವುಗಳನ್ನು ತೋರುತ್ತವೆ. ಇದಕ್ಕೆ ಮೂಲ ಕಾರಣ, ಕೆಲವರು ವನಚಗಳಲ್ಲಿ ಸೇರ್ಪಡೆ ಕೆಲಸ ಮಾಡಿರುವುದು’ ಎಂದು ದೂರಿದರು.

‘ಇತ್ತೀಚಿನ ದಿನಗಳಲ್ಲಿ ರಾಜಕೀಯ ವಾತಾವರಣ ಗೊಂದಲದಿಂದ ಕೂಡಿದೆ’ ಎಂದು ಶಾಸಕ ವಿ.ಸೋಮಣ್ಣ ಅಭಿಪ್ರಾಯಪಟ್ಟರು.

ಹೀಗಿತ್ತು ಅಲ್ಲಿನ ಸಂಭ್ರಮ

ಕುಲಭೇದವಿಲ್ಲದೆ ಎಲ್ಲರನ್ನೂ ಅಪ್ಪಿಕೊಳ್ಳುವ ಶರಣ ಸಂಸ್ಕೃತಿ ಸಮಾರಂಭದಲ್ಲಿ ಎದ್ದು ಕಂಡಿತು. ಅವರೆಲ್ಲ ಬಣ್ಣದ ಉಡುಪು ತೊಟ್ಟು,‌ಕೈಯಲ್ಲಿ ಪುಷ್ಪದ ತಟ್ಟೆಗಳನ್ನು ಹಿಡಿದು, ಶ್ರೀಗಳ ಬರುವಿಕೆಗಾಗಿಸಾಲಾಗಿ ಕಾದು ನಿಂತಿದ್ದರು. ಶ್ರೀಗಳು ಬರುತ್ತಿದ್ದಂತೆ ಎಲ್ಲರೂ ಅವರ ಪಾದಗಳಿಗೆ ಪುಷ್ಪನಮನ ಸಲ್ಲಿಸಿದರು.

ಸಭಾಂಗಣದಲ್ಲಿ ‘ಹಾಡಿದೊಡೆ ಎನ್ನೊಡೆಯನ ಹಾಡುವೆ’, ‘ಸೋಜುಗದ ಸೂಜು ಮಲ್ಲಿಗೆ’, ‘ವಚನದಲ್ಲಿ ನಾಮಾಮೃತ ತುಂಬಿ...’ ಹೀಗೆ ಹಲವು ವಚನಗಳ ಗಾಯನ ಶರಣೆಯರಿಂದ ಮೊಳಗುತ್ತಿತ್ತು.

₹100 ಕೋಟಿ ಅನುದಾನದ ಭರವಸೆ

‘ಮುರುಘಾ ಮಠದಿಂದ ನಿರ್ಮಿಸಲು ಉದ್ದೇಶಿಸಿರುವ ಬಸವೇಶ್ವರ ಪುತ್ಥಳಿಗೆ ಶ್ರೀಗಳು ಸರ್ಕಾರದಿಂದ ನೆರವು ನೀಡಬೇಕೆಂದು ಕೋರಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ, ₹ 100 ಕೋಟಿ ಅನುದಾನ ಒದಗಿಸಲು ಪ್ರಯತ್ನಿಸುವೆ’ ಎಂದು ಸಚಿವ ಎಚ್.ಡಿ.ರೇವಣ್ಣ ಭರವಸೆ ನೀಡಿದರು.

‘ನಗರದಲ್ಲಿ ಶರಣರ ಸಮುದಾಯ ಭವನ ನಿರ್ಮಾಣಕ್ಕೆ 15ಎಕರೆ ಜಮೀನು ನೀಡಬೇಕೆಂದೂ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆಯೂ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡುವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT