ಶರನ್ನವರಾತ್ರಿಯ ಸಂಭ್ರಮ

7

ಶರನ್ನವರಾತ್ರಿಯ ಸಂಭ್ರಮ

Published:
Updated:

ನವರಾತ್ರ, ದುರ್ಗೋತ್ಸವ ಎಂಬ ಎರಡು ಪ್ರಸಿದ್ಧವಾದ ಹೆಸರುಗಳಿಂದ ಈ ಹಬ್ಬವು ಕರೆಯಲ್ಪಡುತ್ತದೆ. ಹತ್ತನೆಯ ದಿನವಾದ ವಿಜಯದಶಮಿಯನ್ನು ಸೇರಿಸಿಕೊಂಡು ಇದನ್ನು ದಶಾಹ ಅಥವಾ ದಸರಾ ಎಂಬ ನಾಮಧೇಯದಿಂದಲೂ ಕರೆಯುತ್ತಾರೆ.

ಒಂಬತ್ತುರಾತ್ರಿಗಳಲ್ಲಿ ಅಥವಾ ಅಹೋರಾತ್ರ(ದಿನ)ಗಳಲ್ಲಿ ಸಂಪನ್ನವಾಗುವುದರಿಂದ ‘ನವರಾತ್ರ’ ಎಂಬ ಹೆಸರು ಇದಕ್ಕೆ ಹೊಂದಿಕೆಯಾಗುತ್ತದೆ. ಒಂಬತ್ತುದಿನಗಳಲ್ಲಿ ಪೂರ್ಣವಾಗಿ ಆಚರಿಸದೇ ಇದ್ದರೂ ಮತ್ತು ಹತ್ತನೆ ದಿನದಲ್ಲಿ ವಿಜಯದಶಮಿಯನ್ನೂ ಸೇರಿಸಿ ಆಚರಿಸಿದರೂ ಹೇಗೂ ಪಾರಿಭಾಷಿಕವಾಗಿ ‘ನವರಾತ್ರ’ ಎಂಬ ಹೆಸರಿನಿಂದಲೇ ಇದನ್ನು ವ್ಯವಹರಿಸುತ್ತಾರೆ. ಚೈತ್ರಮಾಸದ ಶುಕ್ಷಪಕ್ಷದ ಪ್ರಥಮೆಯಿಂದ ಪ್ರಾರಂಭಿಸಿ ಒಂಬತ್ತುದಿನಗಳು ಆಚರಿಸುವ ಪರ್ವವನ್ನು ‘ವಸಂತನವರಾತ್ರ’ ಎಂದೂ ಶರತ್ಕಾಲದ ಪ್ರಥಮೆಯಿಂದ ಪ್ರಾರಂಭಿಸಿ ಒಂಬತ್ತುದಿನಗಳ ಕಾಲ ಆಚರಿಸುವ ಪರ್ವವನ್ನು ‘ಶರನ್ನವರಾತ್ರ; ಎಂದೂ ಕರೆಯುವುದೂ ಶಾಸ್ತ್ರೀಯವಾದುದೇ. ‘ಶರದ್ವಸಂತಯೋಸ್ತುಲ್ಯ ಏವ ದುರ್ಗೋತ್ಸವ ಕಾರ್ಯಃ’ ಆದರೆ ಶರತ್ಕಾಲದಲ್ಲಿ ಆಚರಿಸಲ್ಪಡುವ ನವರಾತ್ರಕ್ಕೆ ವಿಶೇಷ ಪ್ರಾಮುಖ್ಯ ಇರುವುದರಿಂದ ಅದನ್ನು ಮಾತ್ರವೇ ನವರಾತ್ರ ಮಹೋತ್ಸವ ಎಂದು ಕರೆಯುವ ವಾಡಿಕೆ ಬಂದಿದೆ. ದುರ್ಗಾದೇವಿಯನ್ನು ಲಕ್ಷ್ಮೀ, ಸರಸ್ವತೀ, ದುರ್ಗಾ ಮುಂತಾದ ನಾನಾ ರೂಪಗಳಲ್ಲಿ ವಿಶೇಷವಾಗಿ ಆರಾಧಿಸುವ ಪರ್ವವಾದ್ದರಿಂದ ಮಹೋತ್ಸವ ಎಂಬ ಹೆಸರೂ ಅನ್ವರ್ಥವಾಗಿದೆ.

ಜೀವನದಲ್ಲಿ ನವತ್ವವನ್ನು ಉಂಟು ಮಾಡುವ ನವರಾತ್ರ ಇದು. ಶುದ್ಧ ಪ್ರಕೃತಿಮಾತೆಯನ್ನು ಮೊದಲ ಮೂರುದಿನಗಳಲ್ಲಿ ಲಕ್ಷ್ಮೀಯೆಂದೂ ಅನಂತರದ ಮೂರುದಿನಗಳಲ್ಲಿ ಸರಸ್ವತೀಯೆಂದೂ ಕೊನೆಯ ಮೂರುದಿನಗಳಲ್ಲಿ ಗೌರೀ ಅಥವಾ ದುರ್ಗೀಯೆಂದೂ ಆರಾಧಿಸಿ ನಿಮ್ಮ ಪ್ರಕೃತಿಯನ್ನು ಶುದ್ಧಮಾಡಿಕೊಳ್ಳಿ. ಹೊರಗಡೆ ಪ್ರಕೃತಿಯಲ್ಲಿ ಮೋಡಗಳಿಲ್ಲದ ಶುದ್ಧವಾದ ಆಕಾಶ, ಒಳಗೂ ಶುದ್ಧವಾದ ಜ್ಞಾನಾಕಾಶ. ಹೊರಗೆ ಸರೋವರದಲ್ಲಿ ಅರಳಿರುವ ಕಮಲಗಳು, ಒಳಗೆ ಮಾನಸ ಸರೋವರದಲ್ಲಿ ಅರಳಿರುವ ಹೃದಯಾದಿ ಕಮಲಗಳು. ಅಲ್ಲಿ ಪರಮಾತ್ಮನ ಪರಾಪ್ರಕೃತಿಯಾಗಿರುವ ದೇವಿಯನ್ನು ಆರಾಧಿಸಿ ಶುದ್ಧ ಸತ್ತ್ವರಾಗಿರಿ. ಹೊರಗಡೆ ಧನಧಾನ್ಯ ಸಮೃದ್ಧಿ, ಒಳಗೆ ಆತ್ಮಧನ ಸಮೃದ್ಧಿ. ಹೊರಗೆ ವೀರಕ್ಷತ್ರಿಯರಿಂದ ಧರ್ಮವಿಜಯಕ್ಕಾಗಿ ಯಾತ್ರೆ, ಒಳಗೆ ಆತ್ಮವಿಜಯಕ್ಕಾಗಿ ಯಾತ್ರೆ – ಎಲ್ಲವೂ ಕೂಡಿಬರುವ ಮಹಾಪರ್ವ ಇದು’. 

ಇದು ಎಲ್ಲ ದೇವತೆಗಳ ಧ್ಯಾನ ಉಪಾಸನೆಗಳಿಗೂ ಶ್ರೇಷ್ಠವಾಗಿರುವ ಕಾಲವಾದರೂ ವಿಶೇಷವಾಗಿ ಶಕ್ತಿದೇವತೆಯ ಪ್ರಸನ್ನತೆಯನ್ನು ಉಂಟುಮಾಡಲು ಸಹಾಯಕವಾಗಿರುವ ಕಾಲವಾಗಿದೆ. ವಿವಾಹ, ಉಪನಯನ ಮುಂತಾದ ಶುಭಕರ್ಮಗಳಿಗೆ ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಗ್ರಹಮೈತ್ರಿ ಮುಂತಾದ ಎಲ್ಲ ಅನುಕೂಲವೂ ಸಿಕ್ಕದೆ ಇರುವಾಗ ಅದಾವುದನ್ನೂ ಗಮನಿಸದೆ ಶರನ್ನವರಾತ್ರಿ ಸಮಯದಲ್ಲಿ ಆ ಶುಭಕರ್ಮಗಳನ್ನು ನಡೆಸುವ ವಾಡಿಕೆ ಇದೆ. ವಿಶೇಷವಾಗಿ ವಿಜಯದಶಮಿಗೆ ಈ ಮಹಾಮಹಿಮೆ ಇದೆಯೆಂದು ಹೇಳುತ್ತಾರೆ. ಎಲ್ಲ ದುರ್ಗ(ಸಂಕಷ್ಟ, ಸಮಸ್ಯೆ)ಗಳನ್ನು ದಾಟಿಸುವ ದುರ್ಗಾದೇವಿಯ ವಿಶೇಷವಾದ ಸಾನಿಧ್ಯ ಇರುವ ಕಾಲವಾದ್ದರಿಂದ ನವರಾತ್ರಕ್ಕೆ ಈ ಅಗ್ಗಳಿಕೆ, ದುರ್ಗಗಳನ್ನು ದಾಟಿಸುವವಳು ಅಥವಾ ದುರ್ಗತಿಯನ್ನು ತಪ್ಪಿಸುವವಳು ಎಂದು ದುರ್ಗಾ ಶಬ್ದಕ್ಕೆ ಅರ್ಥನಿಷ್ಪತ್ತಿಯನ್ನು ಹೇಳುತ್ತಾರೆ. 

 ಶರನ್ನವರಾತ್ರಿಮಹೋತ್ಸವದಲ್ಲಿ ಪ್ರಧಾನವಾಗಿ ಆರಾಧಿಸಲ್ಪಡುವ ದೇವತೆ ‘‘ಶಕ್ತಿ’’. ಆ ಉತ್ಸವದ ಒಂಬತ್ತುದಿವಸಗಳಲ್ಲಿ ಮೊದಲನೆಯ ಮೂರುದಿನಗಳಲ್ಲಿ ಲಕ್ಷ್ಮೀರೂಪದಲ್ಲಿಯೂ ಎರಡನೆಯ ಮೂರು
ದಿನಗಳಲ್ಲಿ ಸರಸ್ವತೀರೂಪದಲ್ಲಿಯೂ ಮತ್ತು ಕೊನೆಯ ಮೂರುದಿನ
ಗಳಲ್ಲಿ ದುರ್ಗಾ, ಪಾರ್ವತೀ ರೂಪದಲ್ಲಿಯೂ ಆಕೆಯನ್ನು ಪೂಜಿಸಬೇಕು.

 (ಗ್ರಂಥಕೃಪೆ: ‘ಭಾರತೀಯರ ಹಬ್ಬ–ಹರಿದಿನಗಳು’ – ಶ್ರೀ ರಂಗಪ್ರಿಯ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !