ಸೋಮವಾರ, ಡಿಸೆಂಬರ್ 9, 2019
17 °C

ಶಾಲಾ ಬಸ್ ಹರಿದು ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ಸೋಮವಾರ ಸಂಜೆ ಶಾಲಾ ಬಸ್ಸೊಂದು ಮೈ ಮೇಲೆ ಹರಿದಿದ್ದರಿಂದ ಚಿಂತನ್ ಎಂಬ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ.

‘ಆತ, ಖಾಸಗಿ ಕಂಪನಿ ಉದ್ಯೋಗಿ ರಮೇಶ್ ಮುಗದುಮ್ ಹಾಗೂ ಶಾಲಾ ಶಿಕ್ಷಕಿ ಮಾಧುರಿ ದಂಪತಿಯ ಪುತ್ರ. ಬಿಇಎಂಎಲ್ ಲೇಔಟ್‌ನ ಶಾಲೆಯೊಂದರಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ’ ಎಂದು ಕೆಂಗೇರಿ ಸಂಚಾರ ಪೊಲೀಸರು ಹೇಳಿದರು. 

‘ಶಾಲೆಗೆ ಹೋಗಿದ್ದ ಚಿಂತನ್, ಶಾಲಾ ಬಸ್ಸಿನಲ್ಲೇ ಸೋಮವಾರ ಸಂಜೆ ಮನೆ ಬಳಿ ಬಂದು ಇಳಿದಿದ್ದ. ಹತ್ತಿರದಲ್ಲೇ ಇದ್ದ ಬೇಬಿ ಕೇರ್‌ನತ್ತ ಹೋಗಲು ಬಸ್ಸಿನ ಮುಂದೆಯೇ ನಡೆದುಕೊಂಡು ರಸ್ತೆ ದಾಟುತ್ತಿದ್ದ. ಆತನನ್ನು ಗಮನಿಸಿದ ಚಾಲಕ, ಬಸ್ ಚಲಾಯಿಸಿದ್ದ. ಕೆಳಗೆ ಬಿದ್ದ ಚಿಂತನ್ ಮೇಲೆಯೇ ಬಸ್ಸಿನ ಚಕ್ರ ಹರಿದು ಹೋಗಿತ್ತು’ ಎಂದು ವಿವರಿಸಿದರು.

ಬೇಬಿ ಕೇರ್‌ಗೆ ಸೇರಿಸಿದ್ದ ಪೋಷಕರು: ‘ತಂದೆ– ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಸಂಜೆ ಮಗ ಶಾಲೆಯಿಂದ ಬಂದಾಗ ನೋಡಿಕೊಳ್ಳಲು ಯಾರೂ ಇರುತ್ತಿರಲಿಲ್ಲ. ಹೀಗಾಗಿ, ಬೇಬಿಕೇರ್‌ಗೆ ಸೇರಿಸಿದ್ದರು. ಸೋಮವಾರ ಸಂಜೆ ಶಾಲೆಯಿಂದ ಬಂದ ಚಿಂತನ್, ಬೇಬಿಕೇರ್‌ಗೆ ಹೋಗುತ್ತಿದ್ದಾಗಲೇ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು