ಚಿಕ್ಕಮಗಳೂರು: ನಗರದ ಹೊರವಲಯದ ಹಿರೇಮಗಳೂರು ಸಮೀಪ ಕೈಗೆತ್ತಿಗೊಂಡಿರುವ ಕೊಳಚೆನೀರು ಸಂಸ್ಕರಣೆ ಘಟಕ (ಎಸ್‌ಟಿಪಿ) ನಿರ್ಮಾಣ ಕಾಮಗಾರಿ ತ್ವರಿತವಾಗಿ ಮುಗಿಸಿ ಕಾರ್ಯಗತಗೊಳಿಸಿದರೆ ಒಳಚರಂಡಿ ಕೊಳಚೆ ನೀರಿನಿಂದ ಕೆರೆಗಳಿಗೆ ಮುಕ್ತಿ ಸಿಗಲಿದೆ.
₹ 17.37 ಕೋಟಿ ವೆಚ್ಚದಲ್ಲಿ 20 ಎಂಎಲ್‌ಡಿ ಸಾಮರ್ಥ್ಯದ ಘಟಕದ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. 2015ರ ಮಾರ್ಚ್‌ನಲ್ಲಿ ಕಾಮಗಾರಿ ಶುರುವಾಗಿತ್ತು. ಟೆಂಡರ್ ಕರಾರಿನಂತೆ 18 ತಿಂಗಳಲ್ಲಿ (2016ರ ಸೆಪ್ಟೆಂಬರ್) ಮುಗಿಯಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆ, ಅನುದಾನ ಬಿಡುಗಡೆ ವಿಳಂಬದಿಂದಾಗಿ ನಾಲ್ಕು ವರ್ಷಗಳಿಂದ ಮಂದಗತಿಯಲ್ಲಿ ಸಾಗಿದೆ.
ಒಳಚರಂಡಿ ತ್ಯಾಜ್ಯನೀರು ದಂಟರಮಕ್ಕಿ, ಕೋಟೆ ಕೆರೆಗಳಿಗೆ ಸೇರಿ ಮಲಿನವಾಗಿವೆ. ಈ ಕೆರೆಗಳ ನೀರು ಬಳಕೆಗೆ ಯೋಗ್ಯವಲ್ಲ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಕೆರೆಗಳಿಗೆ ತ್ಯಾಜ್ಯನೀರು, ಕೊಳಕು ಸೇರದಂತೆ ನಿಯಂತ್ರಿಸಲು ಸಂಬಂಧಪಟ್ಟ ಸಂಸ್ಥೆಗಳಿಗೆ ನೋಟಿಸನ್ನೂ ನೀಡಿದೆ.
‘ಒಳಚರಂಡಿ ನಿರ್ಮಾಣ ಕಾಮಗಾರಿ ಐದಾರು ವರ್ಷಗಳಿಂದ ನಡೆಯುತ್ತಿದೆ, ಈವರೆಗೂ ಪೂರ್ಣಗೊಂಡಿಲ್ಲ. ಕಾಮಗಾರಿ ತ್ವರಿತವಾಗಿ ಮುಗಿಸುವ ಇಚ್ಛಾಶಕ್ತಿ ಅಧಿಕಾರಿಗಳು, ರಾಜಕಾರಣಿಗಳು ಯಾರಿಗೂ ಇಲ್ಲ’ ಎಂದು ಪಾಯಸ್ ಕಾಂಪೌಂಡ್ ನಿವಾಸಿ ಶಿಕ್ಷಕ ನಿರಂಜನ್ ದೂಷಿಸುತ್ತಾರೆ.
ಗುಜರಾತಿನ ಅಹಮದಾಬಾದಿನ ಒಯಸಿಸ್ ಇಪಿಸಿ ಸಲೂಷನ್ಸ್ ಲಿಮಿಟೆಡ್ ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಕೆಯುಡಬ್ಲುಎಸ್) ಕಾಮಗಾರಿಯ ಮೇಲುಸ್ತುವಾರಿ ನಿರ್ವಹಿಸುತ್ತಿದೆ.
‘ಎಸ್‌ಟಿಪಿ ಕಾರ್ಯಗತವಾದರೆ ಕೆರೆಗಳಿಗೆ ಒಳಚರಂಡಿ ತ್ಯಾಜ್ಯನೀರು ಹರಿಯುವುದು ತಪ್ಪುತ್ತದೆ. ಕಾಮಗಾರಿ ವೇಗವಾಗಿ ಮುಗಿಸುವ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಇ.ಪ್ರಕಾಶ್ ಹೇಳುತ್ತಾರೆ.
‘ಸರ್ಕಾರವು ಎರಡು ಬಾರಿ ಬಿಲ್ ಪಾವತಿಸುವುದನ್ನು ತಡ ಮಾಡಿತು. ಹೀಗಾಗಿ, ಕಾಮಗಾರಿ ವಿಳಂಬವಾಗಿದೆ. ಕಾಮಗಾರಿ ಈಗ ಅಂತಿಮ ಹಂತ ತಲುಪಿದೆ. ಈ ತಿಂಗಳ ಅಂತ್ಯದ ಹೊತ್ತಿಗೆ ಮುಗಿಸಲಾಗುವುದು’ ಎಂದು ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿರುವ ಸಂಸ್ಥೆಯ ನೌಕರ ಎಚ್.ಭಾಸ್ಕರ್ ತಿಳಿಸಿದರು.
ಪ್ರಾಥಮಿಕ ಸಂಸ್ಕರಣೆ ಘಟಕ, ಪಂಪ್‌ಹೌಸ್, ಕ್ಲೋರಿನೆಷನ್ ಸಂಪರ್ಕ ತೊಟ್ಟಿ, ಎಂಬಿಬಿಆರ್ ಬೇಸಿನ್, ನಿರ್ವಹಣೆ ಕೊಠಡಿ ನಿರ್ಮಾಣ ಮುಗಿದಿದೆ. ಇನ್ನು ಕಾಂಪೌಂಡು, ಇತರ ಸಣ್ಣಪುಟ್ಟ ಕೆಲಸ ಬಾಕಿ ಇವೆ.
‘ಎಲ್ಲ ಬಡಾವಣೆಗಳ ಒಳಚರಂಡಿ ಕೊಳಚೆನೀರು ತಲುಪುವಂತೆ ಘಟಕಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ. ಪೈಪುಗಳ ಅಳವಡಿಕೆ, ಸ್ಕ್ರೀನ್ ಛೇಂಬರ್ ಮತ್ತು ವೆಟ್ ವೆಲ್ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ’ ಎಂದು ಕೆಯುಡಬ್ಲುಎಸ್ ಸಹಾಯಕ ಎಂಜಿನಿಯರ್ ಎನ್.ಸಿ.ಶಿಲ್ಪಾ ತಿಳಿಸಿದರು.
‘ನಗರದ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯ ಕಾಮಗಾರಿ ವೆಚ್ಚ ₹ 57 ಕೋಟಿಯಿಂದ ₹ 82 ಕೋಟಿಗೆ ಏರಿದೆ. ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆಯೂ ದೊರೆತಿದೆ. ಕಾಮಗಾರಿ ಈಗ ವೇಗವಾಗಿ ನಡೆಯುತ್ತಿದ್ದು, ಶೀಘ್ರದಲ್ಲಿ ಮುಗಿಯಲಿದೆ’ ಎಂದು ತಿಳಿಸಿದರು.
ತೆರೆದ ಚರಂಡಿನೀರು ಸೇರುವುದನ್ನೂತಪ್ಪಿಸಬೇಕು
ಒಳಚರಂಡಿ ಕೊಳಚೆನೀರು ಕೆರೆಗಳಿಗೆ ಸೇರುವುದನ್ನು ತಡೆದರೆ ಸಾಲದು, ತೆರೆದ ಚರಂಡಿಗಳ ಕೊಳಚೆನೀರು ಕೆರೆಗಳಿಗೆ ಹರಿಯುವದನ್ನೂ ತಪ್ಪಿಸಬೇಕು. ಆಗ ಕೆರೆಗಳ ಮಾಲಿನ್ಯ ನಿಯಂತ್ರಣವಾಗುತ್ತದೆ.
–ಹಿರೇಮಗಳೂರು ಪುಟ್ಟಸ್ವಾಮಿ, ನಗರಸಭೆ ಸದಸ್ಯ, ವಾರ್ಡ್ ನಂ 3
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.