ಸೂರ್ಯನಿಗೆ 4 ಗಂಟೆಯಷ್ಟೇ ನಿದ್ದೆ

ಮಂಗಳವಾರ, ಏಪ್ರಿಲ್ 23, 2019
31 °C

ಸೂರ್ಯನಿಗೆ 4 ಗಂಟೆಯಷ್ಟೇ ನಿದ್ದೆ

Published:
Updated:
Prajavani

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಗಿರಿನಗರದ ತಮ್ಮ ಮನೆಯಲ್ಲಿ ಶುಕ್ರವಾರ ಎಂದಿ ನಂತೆ ಸಂಧ್ಯಾವಂದನೆ ಮುಗಿಸಿ ಹೊರ ಬಂದರು. ಅಷ್ಟರಲ್ಲಾಗಲೇ ತಮ್ಮನ್ನು ಭೇಟಿಯಾಗಲು ಕಾದಿದ್ದ ಕಾರ್ಯಕರ್ತರೊಂದಿಗೆ ನಿತ್ಯದ ಕಾರ್ಯಕ್ರಮ ಪಟ್ಟಿಯ ಕುರಿತು ಚರ್ಚೆ ನಡೆಸಿದರು.

‘ತೇಜಸ್ವಿ ಅವರು ರಾತ್ರಿ ಮಲಗುವುದೇ 1ರ ಸುಮಾರಿಗೆ. ಬೆಳಿಗ್ಗೆ 4ರ ವೇಳೆಗೆ ಎದ್ದು ಸ್ನಾನ ಮುಗಿಸಿ ಪೂಜಾ ಕಾರ್ಯಕ್ರಮದಲ್ಲಿ ತೊಡಗಿದರು. ಬಳಿಕ ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತಲೇ ಬೆಳಗಿನ ಉಪಾಹಾರ ಉಪ್ಪಿಟ್ಟು ಮತ್ತು ಸಿಹಿ ಪೊಂಗಲ್‌ ಸವಿದು ಬಾದಾಮಿ ಹಾಲು ಕುಡಿದರು’ ಎಂದು ಹೇಳಿದರು ತೇಜಸ್ವಿ ಅವರ ಆಪ್ತ ಸಂದೀಪ್‌.

ನಂತರ ರಾತ್ರಿವರೆಗೆ ಎಡೆಬಿಡದೆ ಪ್ರಚಾರ, ಸಭೆ, ಸಮಾಲೋಚನೆ ಈ ಕಾರ್ಯಗಳಿಗೇ ದಿನದ ಅವಧಿ ಮೀಸಲು. 

ಬೆಳಿಗ್ಗೆ 7ರ ಮನೆಯ ಮುಂದೆ ನೆರೆದಿದ್ದ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಬೆಳಿಗ್ಗೆ 8ಕ್ಕೆ ರ‍್ಯಾಲಿ ಇತ್ತು. ಆದರೆ, ಗಿರಿನಗರದಲ್ಲಿರುವ ಅವರ ಮನೆಯಿಂದ ಹೊರಟಾಗಲೇ ಗಡಿಯಾರದ ಮುಳ್ಳು ಎಂಟನ್ನು ದಾಟಿತ್ತು. ಅವರು ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಕೊಟ್ಟಿದ್ದು ಬೆಳಿಗ್ಗೆ 9ಕ್ಕೆ.

ಶಾಸಕರಾದ ಶಾಸಕರಾದ ಆರ್.ಅಶೋಕ, ಸೋಮಣ್ಣ ದಾರಿ ಮಧ್ಯದಲ್ಲಿ ಅವರನ್ನು ಸೇರಿದರು. ಮುಂದುವರಿದ ಯಾತ್ರೆ ಪಟ್ಟೇಗಾರಪಾಳ್ಯ ವೃತ್ತ, ಮೂಡಲಪಾಳ್ಯ, ನಾಗರಬಾವಿ ಮುಖ್ಯರಸ್ತೆಗಳ ಮೂಲಕ ಸಾಗಿ ಅನುಭವನಗರ, ಮಾರುತಿನಗರದವರೆಗೂ ತಲುಪಿತು. ಈ ವೇಳೆಗೆ ಪಾಲಿಕೆ ಸದಸ್ಯರಾದ ಉಮೇಶ್ ಶೆಟ್ಟಿ, ಶಾಂತಕುಮಾರಿ ಹಾಗೂ ಹಾಸ್ಯನಟ ಬುಲೆಟ್ ಪ್ರಕಾಶ್ ಸಾಥ್‌ ನೀಡಿದರು.

ಪ್ರಶಾಂತನಗರದ ಶೋಭಾ ಆಸ್ಪತ್ರೆಯಿಂದ ಪ್ರಚಾರ ಆರಂಭವಾಯಿತು. ಕಾರ್ಯಕರ್ತರು ತೇಜಸ್ವಿಗೆ ಹೂವಿನ ಮಳೆ ಸುರಿಸಿದರು. ಡೊಳ್ಳು, ಹಲಗೆ ಮತ್ತು ಹಗಲು ವೇಷಗಾರರು ಮೆರವಣಿಗೆಗೆ ಮೆರುಗು ತಂದರು. ಗೋವಿಂದರಾಜನಗರ ಕ್ಷೇತ್ರದಲ್ಲಿ ಪ್ರಚಾರ ಮುಗಿಸಿ ವಿಜಯನಗರ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಬೆಳಿಗ್ಗೆ 11ರ ಹೊತ್ತಿಗೆ.

ವಿಜಯನಗರದಲ್ಲಿ ವ್ಯಕ್ತಿಯೊಬ್ಬರು ಕೊಟ್ಟ ದಾರವನ್ನು ಕೈಗೆ ಕಟ್ಟಿಕೊಂಡು ನಮಸ್ಕರಿಸಿದರು. ಆ ವ್ಯಕ್ತಿ ತೇಜಸ್ವಿಗೆ ಜೈ ಎಂದರು. ರಸ್ತೆಯ ಇಕ್ಕೆಲಗಳಲ್ಲಿ ಇದ್ದ ಜನರು ಫೋಟೊ ತೆಗೆದುಕೊಂಡರೆ ಇನ್ನೂ ಕೆಲವರು ವಿಡಿಯೊ ಮಾಡಿ ಕೊಂಡರು. ‘ಅಕ್ಕ–ಅಣ್ಣ ಮರೀದೆ ವೋಟ್‌ ಹಾಕಿ. ಮೋದಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಆಗಲಿದೆ’ ಎಂದು ಭಾಷಣದಲ್ಲಿ ಮನವಿ ಮಾಡಿಕೊಂಡರು.

ಮೈಸೂರು ರಸ್ತೆಯ ಸ್ಯಾಟಲೈಟ್‌ ಬಸ್ ನಿಲ್ದಾಣದ ಬಳಿ ಸಾಗುತ್ತಿದ್ದ ಯಾತ್ರೆಗೆ ಬಿಜೆಪಿ ಹಿರಿಯ ಮುಖಂಡ ಎಸ್‌.ಎಂ.ಕೃಷ್ಣ ಸೇರಿಕೊಂಡರು. ಅವರೊಂದಿಗೆ ಮಾತುಕತೆ ನಡೆಸಿದ ತೇಜಸ್ವಿ, ಆವಲಹಳ್ಳಿ, ಟಿ.ಆರ್.ಮಿಲ್ ಮಾರ್ಗವಾಗಿ ಗಾಳಿ ಆಂಜನೇಯ ದೇವಸ್ಥಾನದವರೆಗೂ ಜೊತೆಯಾಗಿ ಮತಯಾಚಿಸಿದರು. ಬಳಿಕ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಪಾದಯಾತ್ರೆ ನಡೆಸಿದರು. ಪಾದಯಾತ್ರೆಗೆ ಮುನ್ನ ಕೃಷ್ಣ ಅವರನ್ನು ಬೀಳ್ಕೊಟ್ಟರು. ಮಧ್ಯಾಹ್ನ 1ಗಂಟೆಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯ ಬಳಿ ಯಾತ್ರೆ ಅಂತಿಮಗೊಳಿಸಲಾಯಿತು.

ಮನೆಗೆ ತೆರಳಿ ಊಟ ಸೇವಿಸಿದ ಅವರು 3ರವರೆಗೂ ವಿಶ್ರಾಂತಿ ಪಡೆದರು. ನಂತರ ಬಸವನಗುಡಿಯಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು. ಆ ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಬಿಟಿಎಂ ಲೇಔಟ್‌ ಕ್ಷೇತ್ರದತ್ತ ಹೊರಟರು. ಬೆಳಗಿನ ಮಾದರಿಯಲ್ಲೇ ಕ್ಷೇತ್ರದಾದ್ಯಂತ ಮತಯಾಚಿಸಿದ ಅವರು ದಿನದ ಸುತ್ತಾಟವನ್ನು ರಾತ್ರಿ 8.30ಕ್ಕೆ ಕೊನೆಗೊಳಿಸಿದರು.

ಗಮನಸೆಳೆದ ಟೊಪ್ಪಿಗೆ

ತೇಜಸ್ವಿ ಅವರ ಬೆಂಬಲಿಗರು ಮೋದಿ ಚಿತ್ರವಿದ್ದ ಟೊಪ್ಪಿಗೆಗಳನ್ನು ತೊಟ್ಟು, ಕಮಲದ ಬಾವುಟಗಳನ್ನು ಬೀಸುತ್ತಾ ನರ್ತಿಸಿದರು. ಇವುಗಳ ಮಧ್ಯೆಯೇ ಪ್ರಧಾನಿ ಮೋದಿ, ಅಮಿತ್‌ ಶಾ ಮತ್ತು ತೇಜಸ್ವಿಗೆ ಜೈಕಾರ ಮೊಳಗಿಸಿದರು. ‘ಮತ್ತೊಮ್ಮೆ ಮೋದಿ’ ಘೋಷಣೆಗಳನ್ನೂ ಕೂಗುತ್ತಾ ಯುವಕರು ಬೈಕ್‌ ರ್‍ಯಾಲಿ ನಡೆಸಿದರು.

ಬರಹ ಇಷ್ಟವಾಯಿತೆ?

 • 17

  Happy
 • 1

  Amused
 • 0

  Sad
 • 1

  Frustrated
 • 7

  Angry

Comments:

0 comments

Write the first review for this !