ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೃಪ್ತಿ ಶಮನಕ್ಕೆ ಬಿಎಸ್‌ವೈ ಯತ್ನ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತಕುಮಾರ್‌ಗೆ ಸಿಗದ ಟಿಕೆಟ್‌: ಅಸಮಾಧಾನ
Last Updated 29 ಮಾರ್ಚ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಘೋಷಣೆಯಾದ ಬೆನ್ನಲ್ಲೇ ಉಂಟಾದ ಅಸಮಾಧಾನ ತಣಿಸುವ ಪ್ರಯತ್ನವನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾಡಿದರು.

ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ ನಾಮಪತ್ರ ಸಲ್ಲಿಕೆಯ ವೇಳೆ ಗೈರುಹಾಜರಾಗಿದ್ದ ಶಾಸಕ ಆರ್‌.ಅಶೋಕ ಅವರನ್ನು ಡಾಲರ್ಸ್‌ ಕಾಲೊನಿಯ ತಮ್ಮ ನಿವಾಸಕ್ಕೆ ಶುಕ್ರವಾರ ಕರೆಸಿಕೊಂಡು ಮಾತುಕತೆ ನಡೆಸಿದರು. ‘ತೇಜಸ್ವಿ ಅವರಿಗೆ ಟಿಕೆಟ್‌ ನೀಡಿರುವುದು ಪಕ್ಷದ ವರಿಷ್ಠರ ತೀರ್ಮಾನ. ಎಲ್ಲರೂ ಒಗ್ಗಟ್ಟಾಗಿ ದುಡಿದು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕು’ ಎಂದು ಮನವೊಲಿಸಿದರು ಎಂದು ಗೊತ್ತಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ, ‘ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಹಾಗೂ ಪಕ್ಷದ ಅಭ್ಯರ್ಥಿ
ತೇಜಸ್ವಿ ಸೂರ್ಯ ಗುರುವಾರ ಭೇಟಿಯಾಗಿದ್ದರು. ಪಕ್ಷ ಮೊದಲು, ವ್ಯಕ್ತಿ ನಂತರ. ನರೇಂದ್ರ ಮೋದಿಯವರೇ ನಮಗೆ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿ. ಮೋದಿಯವರನ್ನು ಮತ್ತೆ ಪ್ರಧಾನಿಯಾಗಿ ಮಾಡಬೇಕು. ಹಾಗಾಗಿ ಬೆಂಗಳೂರು ದಕ್ಷಿಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರ ಮಾಡುತ್ತೇನೆ’ ಎಂದು ತಿಳಿಸಿದರು.

‘ತೇಜಸ್ವಿನಿ ಅನಂತಕುಮಾರ್ ಅವರಿಗೆ ಅನ್ಯಾಯವಾಗಿದೆ. ಆದರೂ ಪಕ್ಷ ಮೊದಲು. ಹಾಗಾಗಿ ಅವರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.

ದೂರ ಉಳಿದ ಮುಖಂಡರು: ತೇಜಸ್ವಿ ಸೂರ್ಯ ಅವರು ಕ್ಷೇತ್ರದ ವಿವಿಧ ಕಡೆಗಳಲ್ಲಿ ಶುಕ್ರವಾರ ಪ್ರಚಾರ ನಡೆಸಿದರು. ಈ ವೇಳೆ ಬಸವನಗುಡಿ ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ (ತೇಜಸ್ವಿ ಚಿಕ್ಕಪ್ಪ), ಪಾಲಿಕೆಯ ಸದಸ್ಯ ಕೆಂಪೇಗೌಡ ಮಾತ್ರ ಇದ್ದರು. ಈ ಹಿಂದಿನ ಚುನಾವಣೆಗಳಲ್ಲಿ ಸಕ್ರಿಯರಾಗಿದ್ದ ಕೆಲವು ಮುಖಂಡರು ಪ್ರಚಾರದಿಂದ ಅಂತರ ಕಾಯ್ದುಕೊಂಡರು ಎಂದು ಗೊತ್ತಾಗಿದೆ.

ಎರಡು ದಿನಗಳಲ್ಲಿ ಅಸಮಾಧಾನ ಶಮನ’

‘ನಮ್ಮಲ್ಲಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಎಂಬ ಯಾವುದೇ ವ್ಯತ್ಯಾಸ ಇಲ್ಲ. ಎಲ್ಲರೂ ಒಂದೇ. ನಮ್ಮ ಶಿಫಾರಸಿನಂತೆ ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಎಲ್ಲ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಿದೆ. ಒಂದೆರಡು ಕ್ಷೇತ್ರಗಳಲ್ಲಿ ವ್ಯತ್ಯಾಸವಾಗಿದೆ. ಬೆಂಗಳೂರು ದಕ್ಷಿಣ ಮತ್ತು ಚಿಕ್ಕೋಡಿ ಕ್ಷೇತ್ರಗಳಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿವೆ. ಅತೃಪ್ತ ನಾಯಕರನ್ನು ಕರೆದು ಮಾತನಾಡುತ್ತೇನೆ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೇಜಸ್ವಿನಿ ಅನಂತಕುಮಾರ್‌ ಟ್ವೀಟ್‌

ಪ್ರತಿಯೊಬ್ಬ ವ್ಯಕ್ತಿಯ ಹುರುಪು ಮತ್ತು ಸೇವೆ ಒಗ್ಗೂಡಿದರೆ ಮಾತ್ರ ದೇಶವನ್ನು ಪರಮ ವೈಭವದತ್ತ ಕೊಂಡೊಯ್ಯಬಹುದೇ ಹೊರತು ಸ್ವಾರ್ಥದಿಂದ ಅಲ್ಲ (ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್ ಸಮರ್ಥಾ ಭವತ್ವಾಶಿಷಾ ತೇಭೃಶಮ್). ಆರ್‌ಎಸ್‌ಎಸ್‌ ಸಂಸ್ಥಾಪಕರಾದ ಡಾ.ಹೆಡಗೇವಾರ್ ಹಾಗೂ ಗುರೂಜಿ ಗೋಳ್ವಾಲ್ಕರ್‌ ಕಾಲದಲ್ಲಿ ಪ್ರಾರ್ಥನೆಯಲ್ಲಿ ಹೇಳಿಕೊಡುತ್ತಿದ್ದ ಮಾತುಗಳಿವು. ಭಾರತ್‌ ಮಾತಾ ಕೀ ಜೈ. Prayer of@RSSorg #NationFirst

ಇಂದು ರಾಮಲಾಲ್‌ ಭೇಟಿ ಸಾಧ್ಯತೆ

ಟಿಕೆಟ್‌ ನಿರಾಕರಿಸಿದ ಬಳಿಕ ಸೌಜನ್ಯಕ್ಕೂ ವಿಷಯ ತಿಳಿಸದ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿರುವ ತೇಜಸ್ವಿನಿ ಅನಂತಕುಮಾರ್ ಅವರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್‌ ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆ ಇದೆ.

ರಾಮ್‌ಲಾಲ್ ಅವರು ಶನಿವಾರ ನಗರಕ್ಕೆ ಬರಲಿದ್ದು, ಈ ವೇಳೆ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಜತೆಗೆ ಸಮಾಲೋಚನೆ ನಡೆಸಲಿದ್ದಾರೆ. ಈ ವೇಳೆ ತೇಜಸ್ವಿನಿ ಅವರ ಮನೆಗೂ ತೆರಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರನ್ನು ತೇಜಸ್ವಿನಿ ಶುಕ್ರವಾರ ಭೇಟಿ ಮಾಡಬೇಕಿತ್ತು. ಆದರೆ, ಈ ಭೇಟಿ ಕೊನೆಯ ಕ್ಷಣದಲ್ಲಿ ರದ್ದಾಯಿತು. ಒಂದೆರಡು ದಿನಗಳಲ್ಲಿ ಯಡಿಯೂರಪ್ಪ ಅವರೇ ತೇಜಸ್ವಿನಿ ಅವರ ಮನವೊಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT