ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತಿ ಆಚರಣೆ: ಹುಚ್ಚಾಟ ಸಲ್ಲದು- ಎಚ್.ಎಸ್.ದೊರೆಸ್ವಾಮಿ ಕಿಡಿ

Last Updated 11 ನವೆಂಬರ್ 2018, 19:21 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಮಹನೀಯರ ಜಯಂತಿ ಆಚರಣೆ ವಿಚಾರದಲ್ಲಿ ಹುಚ್ಚಾಟ, ಹುಡುಗಾಟ ನಡೆಸುವುದನ್ನು ನಿಲ್ಲಿಸಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಕಟುವಾಗಿ ಹೇಳಿದರು.

ದಿಶಾ ಚಾರಿಟಬಲ್‌ ಟ್ರಸ್ಟ್‌ ಹಾಗೂ ನವ್ಯ ನಾಟ್ಯ ಸಂಗಮವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಕನ್ನಡ ನುಡಿ ಹಬ್ಬ’ ಹಾಗೂ ‘ಟಿಪ್ಪು ಸುಲ್ತಾನ್‌ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಯಂತಿಗಳ ಆಚರಣೆ ಬೀದಿ ಜಗಳಕ್ಕೆ ಅವಕಾಶ ಮಾಡಿಕೊಡಬಾರದು. ಸರ್ಕಾರ ಬೇಡದ ವಿಷಯಗಳಿಗೆ ಕೈಹಾಕಿ ಜನ ಆಡಿ ಕೊಳ್ಳುವಂತೆ ನಡೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ಯಾವುದೇ ಪಕ್ಷದ ಸರ್ಕಾರವೇ ಇರಲಿ, ಜಯಂತಿಗಳ ಆಚರಣೆಗೆ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿರಬೇಕು. ಎಲ್ಲ ಜನಪ್ರತಿನಿಧಿಗಳು ಅದಕ್ಕೆ ಸಮ್ಮತಿಸಬೇಕು. ಟಿಪ್ಪು ಜಯಂತಿಗೆ ಅವರು ಬಂದಿಲ್ಲ, ಇವರು ಬಂದಿಲ್ಲ, ಅವರು ವಿರೋಧಿಸಿದರು, ಇವರು ಸಮರ್ಥಿಸಿದರು ಎಂಬಂತಹ ನಡೆ ಮಹನೀಯರಿಗೆ ಮಾಡುವ ಅಪಚಾರ’ ಎಂದು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮತ್ತು ಕಾರ್ಯಕ್ರಮದಿಂದ ದೂರವುಳಿದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ವಿರುದ್ಧ ಹರಿಹಾಯ್ದರು.

‘ಟಿಪ್ಪು ಸುಲ್ತಾನ್‌ ದೇಶಭಕ್ತ, ಉತ್ತಮ ಆಡಳಿತಗಾರ. ಅಧಿಕಾರದಲ್ಲಿದ್ದಾಗ ಬಿಜೆಪಿಗೆ ಟಿಪ್ಪು ಬೇಕಾಗಿದ್ದ. ಈಗ ಬೇಡವಾಗಿದ್ದಾನೆ. ಆ ಪಕ್ಷದವರಿಗೆ ಎರಡು ನಾಲಿಗೆ ಇದೆ’ ಎಂದು ಕುಟುಕಿದರು.

‘ಮುಸ್ಲಿಮರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹಿಂದುತ್ವದ ಬಗ್ಗೆ ಕೆಲವೇ ಜನ ಮಾತ್ರ ಮಾತನಾಡುತ್ತಾರೆ. ಬಹುತೇಕರು ಅಲ್ಪಸಂಖ್ಯಾತ ಸಮುದಾಯಗಳ ಪರ ಇದ್ದಾರೆ’ ಎಂದು ಧೈರ್ಯ ಹೇಳಿದರು.

‘ಮಹನೀಯರು ಎಲ್ಲರಿಗೂ ಸೇರಿದವರು. ಜನರೇ ಜಯಂತಿಗಳನ್ನು ಆಚರಣೆ ಮಾಡಲಿ. ಸರ್ಕಾರದ ಪ್ರತಿನಿಧಿಗಳು ಅದರಲ್ಲಿ ಭಾಗವಹಿಸಲಿ. ಸರ್ಕಾರದಿಂದಲೇ ಜಯಂತಿ ಆಚರಿಸುವುದು ಅಷ್ಟು ಒಳ್ಳೆಯದಲ್ಲ’ ಎಂದರು.

ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ, ಮಾಧ್ಯಮ, ರಾಜಕೀಯ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 15 ಜನರಿಗೆ ‘ಟಿಪ್ಪು ಸುಲ್ತಾನ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು.

*ಮುಸ್ಲಿಮರು ಮಸೀದಿಗಳಲ್ಲಿ ಕಾಲ ಕಳೆದರೆ ಸಾಲದು, ದೇಶ ನಮ್ಮದು ಎಂಬ ಭಾವನೆ ಬೆಳೆಸಿಕೊಳ್ಳಬೇಕು

-ಎಚ್.ಎಸ್. ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT