ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಬಳಿ ಎಫ್‌ಎಸ್‌ಐ ಪ್ರಮಾಣ 5ಕ್ಕೆ ಹೆಚ್ಚಳ?

ಸಂಚಾರ ಆಧಾರಿತ ಅಭಿವೃದ್ಧಿ ನೀತಿಯ ಕರಡು ಪ್ರಕಟ
Last Updated 8 ಮೇ 2019, 20:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಮೂಹ ಸಾರಿಗೆ ಬಳಕೆಯನ್ನು ಉತ್ತೇಜಿಸಲು ‘ಸಮಗ್ರ ಸಂಚಾರ ಯೋಜನೆ’ (ಸಿಎಂಪಿ) ರೂಪಿಸಲು ರಾಜ್ಯ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಈ ಸಲುವಾಗಿ ಸಂಚಾರ ಆಧರಿತ ಅಭಿವೃದ್ಧಿ (ಟಿಒಡಿ) ನೀತಿಯ ಕರಡನ್ನು ಪ್ರಕಟಿಸಿದೆ.

ಪ್ರಮುಖ ಸಾರಿಗೆ ತಾಣಗಳ (ಮೆಟ್ರೊ ಮಾರ್ಗ) ಆಸುಪಾಸಿನಲ್ಲಿ ಫ್ಲೋರ್‌ ಸ್ಪೇಸ್‌ ಇಂಡೆಕ್ಸ್‌ (ಎಫ್‌ಎಸ್‌ಐ) ಪ್ರಮಾಣವನ್ನು 5ರವರೆಗೆ ಹೆಚ್ಚಿಸುವ ಮೂಲಕ ಇಂತಹ ಕಡೆ ಹೆಚ್ಚಿನ ಅಭಿವೃದ್ಧಿಗೆ ಉತ್ತೇಜನ ನೀಡುವ ಪ್ರಸ್ತಾಪವೂ ಈ ಕರಡಿನಲ್ಲಿದೆ.

ಮೋಟಾರು ಆಧರಿತ ಸಾರಿಗೆಯಲ್ಲಿ ಸಮೂಹ ಸಾರಿಗೆ ವ್ಯವಸ್ಥೆಯ (ರೈಲು, ಮೆಟ್ರೊ, ಕ್ಷಿಪ್ರ ಬಸ್‌ ಸಾರಿಗೆ ಇತ್ಯಾದಿ) ಪಾಲನ್ನು ಶೇ 70ರಷ್ಟಕ್ಕೆ ಹೆಚ್ಚಿಸುವುದು ಹಾಗೂ ತೀವ್ರ ದಟ್ಟಣೆಯ ಸಂಚಾರ ವಲಯಗಳಲ್ಲಿನ ಶೇ 60ರಷ್ಟು ಜನರಾದರೂ ಸಮೂಹ ಸಾರಿಗೆಯನ್ನು ನೆಚ್ಚಿಕೊಳ್ಳುವಂತೆ ಮಾಡುವುದು ಈ ನೀತಿಯ ಪ್ರಮುಖ ಉದ್ದೇಶ.

‘ಮೆಟ್ರೊ ರೈಲು ನೀತಿ– 2017’ರ ಪ್ರಕಾರ ರಾಜ್ಯ ಸರ್ಕಾರ ಟಿಒಡಿ ನೀತಿಯನ್ನು ರೂಪಿಸುವುದು ಹಾಗೂ ಸಮಗ್ರ ಸಾರಿಗೆ ಯೋಜನೆಯನ್ನು ಹೊಂದುವುದು ಕಡ್ಡಾಯ. ಜೊತೆಗೆ,ವಿವಿಧ ಸಾರಿಗೆ ವ್ಯವಸ್ಥೆಗಳನ್ನು ಒಂದೇ ವ್ಯವಸ್ಥೆಯಡಿ ತರಲು ‘ಏಕೀಕೃತ ಮಹಾನಗರ ಸಾರಿಗೆ ಪ್ರಾಧಿಕಾರ’ವನ್ನೂ (ಯುಎಂಟಿಎ) ರೂಪಿಸಬೇಕಿದೆ. ಈ ಸಲುವಾಗಿ ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ನೇತೃತ್ವದ ಸಮಿತಿ ಟಿಒಡಿ ನೀತಿಯ ಕರಡನ್ನು ಸಿದ್ಧಪಡಿಸಿದೆ.

ಪ್ರಮುಖ ಸಾರಿಗೆ ತಾಣಗಳನ್ನು ಕೇಂದ್ರೀಕರಿಸಿದ ಅಭಿವೃದ್ಧಿಗೆ ಆದ್ಯತೆ ನೀಡುವ ಬಗ್ಗೆ ಈ ನೀತಿಯ ಕರಡಿನಲ್ಲಿ ವಿವರಿಸಲಾಗಿದೆ. 2031ರ ವೇಳೆಗೆ ಸುಮಾರು 600 ಕಿ.ಮೀಗಳಷ್ಟು (ಪ್ರತಿ 1000 ಜನಸಂಖ್ಯೆಗೆ 0.03 ಕಿ.ಮಿ. ಪ್ರಕಾರ) ಸಮೂಹ ಸಾರಿಗೆ ಮಾರ್ಗಗಳನ್ನು ಅಭಿವೃದ್ಧಿ ಪಡಿಸುವ ಗುರಿ ಹೊಂದಿರುವ ಸರ್ಕಾರ ಇದಕ್ಕೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ಭೂಬಳಕೆಯಲ್ಲಿ ಮಹತ್ತರ ಬದಲಾವಣೆಗೆ ಅವಕಾಶ ಕಲ್ಪಿಸಲಿದೆ.

ನಗರದ ಪ್ರಮುಖ ಸಮೂಹ ಸಾರಿಗೆ ತಾಣಗಳಿಂದ 5ರಿಂದ 10 ನಿಮಿಷಗಳಲ್ಲೇ ನಡೆದುಕೊಂಡು ಮನೆ/ ಕಚೇರಿ ತಲುಪಬಹುದಾದ ರೀತಿ ಅಭಿವೃದ್ಧಿ ಸಾಧಿಸಲು ಮಿಶ್ರ ಭೂಬಳಕೆ (ಲ್ಯಾಂಡ್‌ಯೂಸ್‌) ಅವಕಾಶ ಕಲ್ಪಿಸುವುದು ಟಿಒಡಿ ನೀತಿಯ ಪ್ರಮುಖ ಅಂಶ. ಪ್ರಮುಖ ಸಾರಿಗೆ ತಾಣಗಳಿಂದ ಬೈಸಿಕಲ್‌, ಪೂರಕ ಸಂಪರ್ಕ ಸಾರಿಗೆ (ಫೀಡರ್‌) ಜಾಲವನ್ನು ಇಲ್ಲಿ ಅಭಿವೃದ್ಧಿಪಡಿಸುವ ಪ್ರಸ್ತಾಪ ಕರಡಿನಲ್ಲಿದೆ.

3 ಉಪವಲಯ: ಟಿಒಡಿ ಪ್ರದೇಶವನ್ನು ಮುಖ್ಯವಾಗಿ ಮೂರು ಉಪವಲಯಗಳನ್ನಾಗಿ ವಿಂಗಡಿಸಲಾಗುತ್ತದೆ. ಪ್ರಮುಖ ಸಾರಿಗೆ ಮಾರ್ಗದ (ಮೆಟ್ರೊ, ಬಿಆರ್‌ಟಿ ಇತ್ಯಾದಿ) ಇಕ್ಕೆಲಗಳಲ್ಲಿನ 500 ಮೀಟರ್‌ ವರೆಗಿನ ಪ್ರದೇಶವನ್ನು ತೀವ್ರ ದಟ್ಟಣೆಯ ವಲಯ, 500 ಮೀ ದೂರದಿಂದ 1,000 ಮೀ ದೂರದವರೆಗಿನ ಪ್ರದೇಶವನ್ನು ಸಾಧಾರಣ ದಟ್ಟಣೆಯ ವಲಯ ಹಾಗೂ 1,000 ಮೀ ದೂರದಿಂದ 2,000 ಮೀ ದೂರದವರೆಗಿನ ಪ್ರದೇಶವನ್ನು ಪರಿವರ್ತನಾ ವಲಯವನ್ನಾಗಿ ಗುರುತಿಸಲಾಗುತ್ತದೆ.

ಪ್ರಯಾಣಿಕ ರೈಲು ಸಾರಿಗೆಯಲ್ಲಿ ಎರಡು ನಿಲ್ದಾಣಗಳ ನಡುವೆ 1.5 ಕಿ.ಮೀಯಿಂದ 3 ಕಿ.ಮೀಗಳಷ್ಟು ಅಂತರವಿರುತ್ತದೆ. ಇಂತಹ ಕಡೆ ಸಾಧಾರಣ ದಟ್ಟಣೆ ಹಾಗೂ ತೀವ್ರ ದಟ್ಟಣೆ ಪ್ರದೇಶಗಳು ರೈಲು ನಿಲ್ದಾಣದಿಂದ ಕ್ರಮವಾಗಿ 500 ಮೀ ಹಾಗೂ 1000 ಮೀ ಪರಿಧಿಯ ವ್ಯಾಪ್ತಿಯಲ್ಲಿರುತ್ತವೆ.

ಮೂಲಸೌಕರ್ಯ ಅಭಿವೃದ್ಧಿಗೆ ಟಿಒಡಿ ನಿಧಿ

ಟಿಒಡಿ ವಲಯದಲ್ಲಿ ಹೆಚ್ಚುವರಿ ಮೂಲಸೌಕರ್ಯ ಕಲ್ಪಿಸಲು ಟಿಒಡಿ ನಿಧಿಯನ್ನು ರೂಪಿಸಲಾಗುತ್ತದೆ. ಮೂಲ ಎಫ್‌ಎಸ್‌ಐ ಅಲ್ಲದೇ ಹೆಚ್ಚುವರಿ ಎಫ್‌ಎಸ್‌ಐ (ಪ್ರೀಮಿಯಂ ಎಫ್‌ಎಸ್‌ಐ ) ಅನುಮತಿ ನೀಡುವ ಮೂಲಕ ಸರ್ಕಾರ ಶುಲ್ಕವನ್ನು ಸಂಗ್ರಹಿಸಲಿದೆ. ಪ್ರೀಮಿಯಂ ಎಸ್‌ಎಸ್‌ಐಗೆ ಸರ್ಕಾರ ಆ ಪ್ರದೇಶದ ಮಾರ್ಗಸೂಚಿ ದರದ ಆಧಾರದಲ್ಲಿ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಈ ಮೊತ್ತವನ್ನು ಟಿಒಡಿ ನಿಧಿಗೆ ಬಳಸಲಾಗುತ್ತದೆ.

ಟಿಒಡಿ ವಲಯದಲ್ಲಿ ಹೆಚ್ಚುವರಿ ಎಫ್‌ಎಸ್‌ಐ ಪಡೆಯಲು ನಿವೇಶನದ ವಿಸ್ತೀರ್ಣ ಕನಿಷ್ಠ 1000 ಚ.ಮೀ ಹಾಗೂ ಅದರ ಪಕ್ಕದ ರಸ್ತೆ ಕನಿಷ್ಠ 18 ಮೀ ಅಗಲ ಇರಲೇಬೇಕು. ಉಳಿದ ನಿವೇಶನಗಳಿಗೆ ಶೇ 20ರಷ್ಟು ಹೆಚ್ಚುವರಿ ಎಫ್‌ಎಸ್‌ಐ ಮಾತ್ರ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.

ಪ್ರೀಮಿಯಂ ಎಫ್‌ಎಸ್‌ಐ ನೀಡುವುದಲ್ಲದೇ, ಸುಧಾರಣಾ ಶುಲ್ಕ ವಿಧಿಸುವುದು, ಅಭಿವೃದ್ಧಿ ದಂಡನಾ ಶುಲ್ಕವನ್ನು ಏಕಕಂತಿನಲ್ಲಿ ವಸೂಲಿ ಮಾಡುವುದು, ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್), ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳ ಮೇಲೆ ಸೆಸ್‌ ವಿಧಿಸುವ ಮೂಲಕವೂ ಟಿಡಿಆರ್‌ ನಿಧಿಗೆ ಸಂಪನ್ಮೂಲ ಕ್ರೋಡೀಕರಿಸುವ ಬಗ್ಗೆ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಎಫ್‌ಎಸ್‌ಐ ಎಂದರೇನು?

ಪ್ಲೋರ್‌ ಸ್ಪೇಸ್‌ ಇಂಡೆಕ್ಸ್‌ (ಎಫ್‌ಎಸ್‌ಐ) ಎಂದರೆ ನಿರ್ದಿಷ್ಟ ನಿವೇಶನದಲ್ಲಿ ಎಷ್ಟು ವಿಸ್ತೀರ್ಣದ ಕಟ್ಟಡ ನಿರ್ಮಿಸಬಹುದು ಎಂಬುದನ್ನು ನಿರ್ಧರಿಸುವ ಸೂಚ್ಯಂಕ. ಉದಾಹರಣೆಗೆ 100 ಚ.ಮೀ ವಿಸ್ತೀರ್ಣದನಿವೇಶನದಲ್ಲಿ (ಸೆಟ್‌ಬ್ಯಾಕ್‌, ಪಾರ್ಕಿಂಗ್‌ ಪ್ರದೇಶ ಹೊರತುಪಡಿಸಿ) 200 ಚ.ಮೀ.ವರೆಗೆ ಕಟ್ಟಡ ಕಟ್ಟಲು ಅನುಮತಿ ನೀಡಬಹುದು ಎಂದರೆ ಅದರ ಎಫ್‌ಎಸ್‌ಐ 2 ಎಂದರ್ಥ. ಇದನ್ನು ಫ್ಲೋರ್ ಏರಿಯಾ ರೇಷಿಯೊ (ಎಫ್‌ಎಆರ್‌) ಎಂದು ಕೂಡಾ ಕರೆಯುತ್ತಾರೆ.

2015ರ ನಗರ ಮಹಾಯೋಜನೆ ಪ್ರಕಾರ ನಗರದಲ್ಲಿ ಗರಿಷ್ಠ 3.25ರಷ್ಟು ಎಫ್‌ಎಸ್‌ಐಗೆ ಮಾತ್ರ ಅವಕಾಶವಿದೆ. 2031ರ ನಗರ ಮಹಾ ಯೋಜನೆಯ ಕರಡಿನಲ್ಲಿ ಮೆಟ್ರೊ ನಿಲ್ದಾಣಗಳ ಬಳಿ ಗರಿಷ್ಠ 4 ಎಫ್‌ಎಸ್‌ಐವರೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪವಿತ್ತು.

***

ಟಿಒಡಿ ನೀತಿ ಸುಸ್ಥಿರ ಅಭಿವೃದ್ಧಿಗೆ ವೇದಿಕೆ ಕಲ್ಪಿಸಲಿದೆ. ಸಾರಿಗೆ ವ್ಯವಸ್ಥೆ ಹಾಗೂ ಅಭಿವೃದ್ಧಿ ಒಟ್ಟೊಟ್ಟಿಗೆ ಸಾಗಿದರೆ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗಲಿದೆ. ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೂ ನೆರವಾಗಲಿದೆ

–ಅಜಯ್‌ ಸೇಠ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT