ರಾರಾಜಿಸಿದ ಕಾಂಗ್ರೆಸ್, ಜೆಡಿಎಸ್ ಬಾವುಟಗಳು

ಮಂಗಳವಾರ, ಏಪ್ರಿಲ್ 23, 2019
25 °C

ರಾರಾಜಿಸಿದ ಕಾಂಗ್ರೆಸ್, ಜೆಡಿಎಸ್ ಬಾವುಟಗಳು

Published:
Updated:
Prajavani

ಧಾರವಾಡ: ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ನಗರದಾದ್ಯಂತ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ಬಾವುಗಳ ರಾರಾಜಿಸಿದವು. ಹಳೆಯ ಎಪಿಎಂಸಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಜನ ಕಿಕ್ಕಿರಿದು ಸೇರಿದ್ದರು. ಚಕ್ಕಡಿ, ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.

ಇದಕ್ಕೂ ಮೊದಲು ಎಪಿಎಂಸಿಯ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಿನಯ ಕುಲಕರ್ಣಿ ವಿಶೇಷ ಪೂಜೆ ಸಲ್ಲಿಸಿದರು. ಮುರುಘಾಮಠಕ್ಕೆ ತೆರಳಿ ಮೃತ್ಯುಂಜಯ ಅಪ್ಪಗಳ ಆಶೀರ್ವಾದ ಪಡೆದು, ಶಿವಾಜಿ ವೃತ್ತದಲ್ಲಿ ಶಿವಾಜಿ ಮೂರ್ತಿ ಹಾಗೂ ವಿವೇಕಾನಂದ ಮೂರ್ತಿಗೆ ಮಾಲಾರ್ಪಣೆ ಮಾಡಿದರು. 

ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಗಣಪತಿ ದೇವಸ್ಥಾನ, ಉಳವಿ ಚನ್ನಬಸವೇಶ್ವರ ದೇವಸ್ಥಾನ, ವೀರಭದ್ರ ದೇವಸ್ಥಾನ, ಕೆಲಗೇರಿ ಸಾಯಿಬಾಬಾ ದೇವಸ್ಥಾನ, ಕಮಲಾಪುರದ ಪತ್ರೆಪ್ಪಜ್ಜನ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಮೆರವಣಿಗೆ ಶಿವಾಜಿ ವೃತ್ತ, ರೀಗಲ್‌ ವೃತ್ತ, ಮಾರುಕಟ್ಟೆ ಪ್ರದೇಶ, ಹಳೆಯ ಬಸ್‌ ನಿಲ್ದಾಣದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಡೊಳ್ಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಮೆರವಣಿಗೆ ಉದ್ದಕ್ಕೂ ಕಾಂಗ್ರೆಸ್‌ ಕಾರ್ಯಕರ್ತರು ಚೌಕಿದಾರ್‌ ಚೋರ್‌ ಹೇ, ಜೋಶಿ ಹಠಾವೋ ಧಾರವಾಡ ಬಚಾವೋ, ಮೋದಿ ಹಠಾವೋ ದೇಶ್‌ ಬಚಾವೋ, ವಿನಯ ಕುಲಕರ್ಣಿ ಅವರಿಗೆ ಜಯವಾಗಲಿ, ರಾಹುಲ್‌ ಗಾಂಧಿ ಅವರಿಗೆ ಜಯವಾಗಲಿ. ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿಯಲ್ಲಿ ಲೋಕಸಭಾ ಅಭ್ಯರ್ಥಿಯಾಗಿರುವ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಿ ಮತ ನೀಡಿ ಎಂಬ ಘೋಷಣೆಗಳನ್ನು ಕೂಗಿದರು.

ಕಾರ್ಯಕರ್ತರು ಕೊರಳಲ್ಲಿ ಕಾಂಗ್ರೆಸ್‌ ಶಲ್ಯ, ತಲೆ ಮೇಲೆ ಜೆಡಿಎಸ್‌ ಟೋಪಿ ಧರಿಸಿದ್ದರು. ಬೆಳಿಗ್ಗೆ 10.30ಕ್ಕೆ ಆರಂಭವಾದ ಮೆರವಣಿಗೆ ಮತ್ತು ಸಮಾವೇಶ ಸಂಜೆ 4.30ರವರೆಗೂ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಜನರನ್ನು ಉದ್ದೇಶಿಸಿ ಮಾತನಾಡಿದ ವಿನಯ ಕುಲಕರ್ಣಿ, ‘ನೀವು ಕಾಲಲ್ಲಿ ತೋರಿಸಿದ್ದನ್ನು ನಾನು ತಲೆ ಮೇಲಿಟ್ಟುಕೊಂಡು ಕೆಲಸ ಮಾಡಲಿದ್ದೇನೆ. ಕಳೆದ ಬಾರಿ ಸ್ವಲ್ಪ ಅಂತರದಿಂದ ಪರಾಭವಗೊಂಡೆ. ಆದರೆ ಈ ಬಾರಿ ಎರಡೂ ಪಕ್ಷಗಳ ಬೆಂಬಲ ಮತ್ತು ಉತ್ಸಾಹಿ ಕಾರ್ಯಕರ್ತರು ಇರುವುದರಿಂದ ಭಾರೀ ಗೆಲುವು ಲಭಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸಿ.ಎಸ್.ಶಿವಳ್ಳಿ ಅವರಿಲ್ಲದೆ ನಾವೆಲ್ಲರೂ ಅನಾಥರಾಗಿದ್ದೇವೆ. ಆದರೂ ಅವರ ಕುಟುಂಬ ವರ್ಗ ನಮಗೆ ಬೆಂಬಲವಾಗಿ ನಿಂತಿದೆ. ಸಿದ್ದರಾಮಯ್ಯ ಅವರ ಭಾಗ್ಯ ನಮಗೆ ನೆರವಾಗಿದೆ. ನಿಮ್ಮಲ್ಲರ ಮೂಗಿಗೂ ಭರವಸೆಗಳ ತುಪ್ಪ ಹಚ್ಚಿರುವ ಪ್ರಹ್ಲಾದ ಜೋಶಿ ಅವರನ್ನು ಈ ಬಾರಿ ಕಿತ್ತೊಗೆಯಬೇಕು’ ಎಂದರು.

ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ, ಶಾಸಕರಾದ ಅಬ್ಬಯ್ಯ ಪ್ರಸಾದ, ಶ್ರೀನಿವಾಸ ಮಾನೆ, ಮುಖ್ಯಮಂತ್ರಿ ಕಾರ್ಯದರ್ಶಿ ಎನ್‌.ಎಚ್‌. ಕೋನರೆಡ್ಡಿ, ಐ.ಜಿ. ಸನದಿ, ವೀರಣ್ಣ ಮತ್ತಿಕಟ್ಟಿ, ವಿನೋದ ಅಸೂಟಿ, ವಿಜಯಲಕ್ಷ್ಮೀ ಪಾಟೀಲ, ಶಿವಾನಂದ ಕರಿಗಾರ ಹಾಗೂ ಕಾರ್ಯಕರ್ತರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !