ಇನ್ನು ಮುಂದೆ ವಾರ್ಡ್‌ ಸಮಿತಿ ಸಭೆಯೇ ಸುಪ್ರೀಂ!

7
‘ಕಾರ್ಪೊರೇಟರ್‌ ಕಪಿಮುಷ್ಟಿಯಿಂದ ಪಾರಾದೀತೇ ವಾರ್ಡ್‌ ಸಮಿತಿ’ ಎನ್ನುವುದು ತಜ್ಞರ ಆತಂಕ

ಇನ್ನು ಮುಂದೆ ವಾರ್ಡ್‌ ಸಮಿತಿ ಸಭೆಯೇ ಸುಪ್ರೀಂ!

Published:
Updated:
Deccan Herald

ಬೆಂಗಳೂರು: ವಾರ್ಡ್‌ ಸಮಿತಿ ಸಭೆಗಳನ್ನು ಡಿಸೆಂಬರ್‌ನಿಂದ ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಸಲು ತೀರ್ಮಾನ ಕೈಗೊಂಡಿದ್ದು, ಇನ್ನುಮುಂದೆ ವಾರ್ಡ್‌ನ ಬೇಕು ಬೇಡಗಳಿಗೆ ಈ ಸಭೆಯೇ ‘ಸುಪ್ರೀಂ’ ಎನಿಸಲಿದೆ. ಇದರ ಬೆನ್ನಲ್ಲೇ, ಕಾರ್ಪೊರೇಟರ್‌ಗಳ ಕಪಿಮುಷ್ಟಿಯಿಂದ ಅವುಗಳನ್ನು ಬಿಡಿಸಿ, ಇನ್ನಷ್ಟು ಜನಸ್ನೇಹಿಯನ್ನಾಗಿ ರೂಪಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ಈ ಹಿಂದೆ ಅನೇಕ ಕಡೆ ವಾರ್ಡ್‌ ಸಮಿತಿ ಪ್ರತಿ ತಿಂಗಳು ಸಭೆಯನ್ನೇ ನಡೆಸುತ್ತಿರಲಿಲ್ಲ. ನಡೆಸಿದರೂ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇರುತ್ತಿರಲಿಲ್ಲ. ಇದರಿಂದ ಈ ಸಮಿತಿ ರಚನೆಯ ಆಶಯಕ್ಕೇ ಹಿನ್ನಡೆ ಆಗಿತ್ತು.

‘ಮುಚ್ಚಿದ ಬಾಗಿಲಿನಲ್ಲಿ ಸಭೆ ನಡೆಸಿದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಜನರಿಗೆ ಪರಿಚಿತವಿರುವಂತಹ ಜಾಗದಲ್ಲೇ ಸಭೆಯನ್ನು ನಡೆಸಬೇಕು. ವಾರ್ಡ್‌ ಕಚೇರಿಗೆ ಸಮೀಪದಲ್ಲಿರುವ ಸಮುದಾಯ ಭವನಗಳು ಅಥವಾ ಶಾಲೆಗಳನ್ನು ಇದಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು. ಸಭೆಯನ್ನು ವೀಕ್ಷಿಸುವುದಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು’ ಎನ್ನುತ್ತಾರೆ ಸಿವಿಕ್‌ ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್‌.

‘ಸಭೆಯ ನಡಾವಳಿಯನ್ನು ಸಾರ್ವಜನಿಕರು ವಿಡಿಯೊ ಚಿತ್ರೀಕರಣ ನಡೆಸಲು ಅವಕಾಶ ಇದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಬೇಕು. ಹೆಚ್ಚು ಹೆಚ್ಚು ಜನರು ಈ ಸಭೆಗಳಲ್ಲಿ ಭಾಗವಹಿಸಿದರೆ ಸಮಿತಿಯ ಉತ್ತರದಾಯಿತ್ವವೂ ಹೆಚ್ಚುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ವಾರ್ಡ್‌ ಸಮಿತಿಗಳ ಮಹತ್ವದ ಬಗ್ಗೆ ಈಗಲೂ ಸಾರ್ವಜನಿಕರಿಗೆ ತಿಳಿವಳಿಕೆ ಇಲ್ಲ. ನಗರಾಡಳಿತವನ್ನು ಸಶಕ್ತಗೊಳಿಸುವಲ್ಲಿ ಈ ಸಮಿತಿಗಳಿಗೆ ಇರುವ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಇದೇ 29ರಂದು ವಿವಿಧ ಸಂಘಟನೆಗಳು ಸೇರಿಕೊಂಡು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಸ್ಥೆಯ ನೇತೃತ್ವದಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ’ ಎಂದು ಅವರು ತಿಳಿಸಿದರು.

ವಾರ್ಡ್‌ ಸಮಿತಿಯ ಕಾರ್ಯದರ್ಶಿಗಳಾಗಿ ನಿಯೋಜನೆಗೊಂಡಿರುವ ಕೆಲವು ಅಧಿಕಾರಿಗಳು ಸಭೆಗಳನ್ನು ಸರಿಯಾದ ರೀತಿಯಲ್ಲಿ ನಡೆಸುತ್ತಿಲ್ಲ. ಪಾಲಿಕೆ ಸದಸ್ಯರಿಗೂ ಈ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಸಭೆಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಸಮಿತಿಯ ಎಲ್ಲ ಕಾರ್ಯದರ್ಶಿಗಳಿಗೆ ವಿಸ್ತೃತವಾದ ಸುತ್ತೋಲೆ ಕಳುಹಿಸುವಂತೆ ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಪ್ರಮುಖರು ಇತ್ತೀಚೆಗೆ ಪಾಲಿಕೆ ಆಯುಕ್ತರನ್ನು ಕೋರಿದ್ದರು. ಡಿಸೆಂಬರ್‌ ತಿಂಗಳ ಮೊದಲ ಶನಿವಾರ ಒಂದನೇ ತಾರೀಕಿನಂದೇ ಬರಲಿದೆ. ಆದರೆ, ಇನ್ನೂ ಈ ಕುರಿತ ಸುತ್ತೋಲೆಯು ಸಮಿತಿ ಕಾರ್ಯದರ್ಶಿಗಳಿಗೆ ತಲುಪಿಲ್ಲ.

‘ವಾರ್ಡ್‌ ಸಮಿತಿ ಸಭೆಯನ್ನು ಹೇಗೆ ನಡೆಸಬೇಕು ಎಂಬ ಸಮಗ್ರ ವಿವರವುಳ್ಳ ಸುತ್ತೋಲೆಯನ್ನು ಎಲ್ಲ ಸಮಿತಿ ಕಾರ್ಯದರ್ಶಿಗಳಿಗೆ ಶೀಘ್ರವೇ ಕಳುಹಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ತಿಳಿಸಿದರು.

ವಾರ್ಡ್‌ ಸಮಿತಿಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು ಸಮಿತಿ ಕಾರ್ಯದರ್ಶಿಯ ಜವಾಬ್ದಾರಿ. ಸಭೆಯ ನಿರ್ಣಯ ಜಾರಿಗೊಳಿಸುವಲ್ಲಿ ಯಾವುದೇ ಅಧಿಕಾರಿ ಅಸಡ್ಡೆ ತೋರಿದರೆ, ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ವಾರ್ಡ್‌ ಸಮಿತಿಯು ಆಯುಕ್ತರಿಗೆ ಶಿಫಾರಸು ಮಾಡಬಹುದು. 

**

ವಾರ್ಡ್‌ ಸಮಿತಿ ಸಭೆ– ಪ್ರಮುಖ ಅಂಶಗಳು

* ಸಭೆಗಿಂತ ಒಂದು ವಾರದ ಮುಂಚೆ ಸಾರ್ವಜನಿಕರಿಗೆ ಹಾಗೂ ಸಮಿತಿ ಸದಸ್ಯರಿಗೆ ಮಾಹಿತಿ ನೀಡಬೇಕು.

* ಬಿಬಿಎಂಪಿ ವಾರ್ಡ್‌ ಕಚೇರಿ, ಆಸ್ಪತ್ರೆ, ಶಾಲಾ ಕಾಲೇಜುಗಳ ಸೂಚನಾಫಲಕಗಳಲ್ಲಿ ಈ ಮಾಹಿತಿಯನ್ನು ಪ್ರಕಟಿಸಬೇಕು

* ಬಿಬಿಎಂಪಿ ವೆಬ್‌ಸೈಟ್‌ನಲ್ಲೂ ಸಭೆಯ ಬಗ್ಗೆ ಮಾಹಿತಿ ಲಭ್ಯವಿರಬೇಕು

* ಜನರ ಅಹವಾಲುಗಳನ್ನು ಸಮಿತಿಯ ಕಾರ್ಯದರ್ಶಿ ಸಭೆಯ ಕಾರ್ಯಸೂಚಿಯಲ್ಲಿ ಅಳವಡಿಸಿಕೊಳ್ಳಬೇಕು

* ಜನರ ಅಹವಾಲುಗಳ ಕುರಿತೂ ಸದಸ್ಯರು ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಬೇಕು

* ಸಭೆಯ ನಿರ್ಣಯಗಳನ್ನು ಸಮಿತಿ ಕಾರ್ಯದರ್ಶಿ ಪಾಲಿಕೆ ಆಯುಕ್ತರಿಗೆ ಕಳುಹಿಸಬೇಕು

* ಸಭೆಯ ಕಾರ್ಯಸೂಚಿಗಳು ಹಾಗೂ ನಿರ್ಣಯಗಳು ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು

* ಹಿಂದಿನ ಸಭೆಯ ನಿರ್ಣಯಗಳ ಅನುಪಾಲನಾ ವರದಿಯನ್ನು ಸಭೆಯ ಆರಂಭದಲ್ಲಿ ಮಂಡಿಸಬೇಕು

* ಸಾರ್ವಜನಿಕರು ಸಭೆಗೆ ಒಂದು ವಾರ ಮುಂಚಿತವಾಗಿ ಅಹವಾಲುಗಳನ್ನು ಸಮಿತಿಗೆ ನೀಡಬಹುದು

* ತುರ್ತು ವಿಷಯಗಳಿದ್ದಲ್ಲಿ 48 ಗಂಟೆ ಮುಂಚಿತವಾಗಿ ಸದಸ್ಯರಿಗೆ ನೋಟಿಸ್‌ ನೀಡಿ ಸಭೆಯನ್ನು ಕರೆಯಬಹುದು

ಸಮಿತಿಗೆ ಆಯುಕ್ತರು (ಕಾರ್ಯದರ್ಶಿ ಮೂಲಕ) ಒದಗಿಸಬೇಕಾದ ಮಾಹಿತಿ

* ಸ್ಥಾಯಿ ಸಮಿತಿಗಳ ನಿರ್ಣಯಗಳು

* ಪಾಲಿಕೆ ಕೌನ್ಸಿಲ್‌ ಸಭೆಯ ನಿರ್ಣಯಗಳು

* ವಾರ್ಡ್‌ಗೆ ಹಂಚಿಕೆಯಾಗಿರುವ ಅನುದಾನಗಳ ವಿವರ

* ವಾರ್ಡ್‌ನ ನಕಾಶೆ

* ವಾರ್ಡ್‌ನಲ್ಲಿರುವ ಪಾಲಿಕೆ ಆಸ್ತಿಗಳ ವಿವರ

* ಪಾಲಿಕೆಗೆ ಬರಬೇಕಾದ ಆದಾಯದ ವಿವರ

**
ವಾರ್ಡ್‌ ಸಭೆಗಳ ನಡಾವಳಿಗಳನ್ನು ಪಾಲಿಕೆಯ ವೆಬ್‌ಸೈಟ್‌ನಲ್ಲಿ ಅಳವಡಿಸುವುಕ್ಕೆ ಕ್ರಮ ಕೈಗೊಳ್ಳುತ್ತೇನೆ
- ಎನ್‌.ಮಂಜುನಾಥ ಪ್ರಸಾದ್‌, ಪಾಲಿಕೆ ಆಯುಕ್ತ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !