ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ 4ಸಾವಿರ ಕಿ.ಮೀ ಮಹಾ ಓಟ:ದಂಪತಿಗೆ ಅದ್ಧೂರಿ ಸ್ವಾಗತ

Last Updated 13 ಫೆಬ್ರುವರಿ 2019, 9:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಲಿ ಎಂಬ ಸಂಕಲ್ಪದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ‘ಮಹಾ ಓಟ’ ಆರಂಭಿಸಿರುವ ಕುಮಾರ್ ಮತ್ತು ರೂಪಾ ದಂಪತಿಗೆ ಹುಬ್ಬಳ್ಳಿಯಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ಗಬ್ಬೂರು ಕ್ರಾಸ್ ಮೂಲಕ ನಗರ ಪ್ರವೇಶಿಸಿ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದವರಿಗೆ ಟೀಮ್ ಮೋದಿ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರು ಮಾಲಾರ್ಪಣೆ ಮಾಡಿದರು. ಜೈಕಾರ ಕೂಗುವ ಮೂಲಕ ಅವರನ್ನು ಹುರಿದುಂಬಿಸಿದರು.

‘ಮೋದಿ ಅವರು ದೇಶದ ಪ್ರಧಾನಿಯಾಗಿ ನಾಲ್ಕೂವರೆ ವರ್ಷಗಳ ಕಾಲ ಜನಪರ ಕೆಲಸವನ್ನು ಮಾಡಿದ್ದಾರೆ. ಅವರು ಆರಂಭಿಸಿರುವ ಅಭಿವೃದ್ಧಿ ಪರ್ವ ಮುಂದುವರೆಯಬೇಕು, ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಈ ದೇಶದ ಎಲ್ಲ ಜನರಿಗೆ ಅವರು ಮಾಡಿದ ಕೆಲಸಗಳ ಪ್ರಯೋಜನಾ ಸಿಗಬೇಕು ಎಂಬ ಕಾರಣದಿಂದ ಈ ‘ಮಹಾ ಓಟ’ ಆರಂಭಿಸಲಾಗಿದೆ’ ಎಂದು ಕುಮಾರ್ ಹೇಳಿದರು.

‘ಕನ್ಯಾಕುಮಾರಿಯಿಂದ ಓಟ ಆರಂಭಿಸಲಾಯಿತು. ಈಗಾಗಲೇ 1,050 ಕಿ.ಮೀ ದೂರವನ್ನು ಕ್ರಮಿಸಲಾಗಿದೆ. ಪ್ರತಿ ದಿನ ಸುಮಾರು 60ರಿಂದ 70 ಕಿ.ಮೀ ಸಾಗುತ್ತಿದ್ದೇವೆ. ಇದರಲ್ಲಿ ಶೇ80ರಷ್ಟು ಓಟ ಹಾಗೂ ಶೇ20ರಷ್ಟು ನಡಿಗೆಯಾಗಿದೆ. ಇದಕ್ಕೆ ಆಗುತ್ತಿರುವ ಎಲ್ಲ ವೆಚ್ಚವನ್ನೂ ನಾವೇ ಭರಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಅನೇಕ ಸ್ನೇಹಿತರಿದ್ದು, ಈ ಊರು ಎಂದರೆ ಬಹಳ ಅಭಿಮಾನ ಎಂದು ಅವರು ಹೇಳಿದರು.

ಟೀಮ್ ಮೋದಿಯ ಮುಖಂಡ ಸುಭಾಷ್ ಸಿಂಗ್ ಜಮಾದಾರ ಮಾತನಾಡಿ, ‘ಒಟ್ಟು ನಾಲ್ಕು ಸಾವಿರ ಕಿ.ಮೀ ಅನ್ನು ಕ್ರಮಿಸುವುದು ಸುಲಭದ ಮಾತಲ್ಲ. ದೇಶದ ಬಗ್ಗೆ ಅಭಿಮಾನ ಪ್ರೀತಿ ಇದ್ದಾಗ ಮಾತ್ರ ದೇಹಕ್ಕೆ ಶಕ್ತಿ ಸಿಗಲು ಸಾಧ್ಯ’ ಎಂದರು.

ಬುಧವಾರ ಸರ್ಕಿಟ್ ಹೌಸ್‌ನಲ್ಲಿ ತಂಗುವ ದಂಪತಿ, ಗುರುವಾರ ಬೆಳಿಗ್ಗೆ 7 ಗಂಟೆಗೆ ಯಾತ್ರೆ ಮುಂದುವರೆಸುವರು. ಅವರಿಗೆ ಬೀಳ್ಕೊಡುಗೆ ನೀಡಲಾಗುವುದು ಹಾಗೂ ಅವರೊಂದಿಗೆ ಸ್ವಲ್ಪ ದೂರ ಓಡಲಾಗುವುದು ಎಂದು ಅವರು ತಿಳಿಸಿದರು.

ಉಪ ಮೇಯರ್ ಮೇನಕಾ ಹುರುಳಿ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಇದ್ದರು. ಈ ಮಹಾ ಓಟಕ್ಕಾಗಿಯೇ ಎಲ್ಲ ಸೌಲಭ್ಯಗಳಿರುವ ವಿಶೇಷ ಬಸ್ ಅನ್ನು ವಿನ್ಯಾಸಗೊಳಿಸಲಾಗಿದೆ. ವಾಹನ ಓಟಗಾರರೊಂದಿಗೆ ಸಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT