ಸೋಮವಾರ, ಸೆಪ್ಟೆಂಬರ್ 16, 2019
22 °C

ನೀರಿನ ದರ ಏರಿಕೆಗೆ ಜಲಮಂಡಳಿ ತಯಾರಿ

Published:
Updated:

ಬೆಂಗಳೂರು: ರಾಜಧಾನಿಯಲ್ಲಿ ನೀರಿನ ದರ ಏರಿಸಲು ಜಲಮಂಡಳಿ ಸಿದ್ಧತೆ ನಡೆಸಿದ್ದು, ಲೋಕಸಭಾ ಚುನಾವಣೆಯ ನೀತಿಸಂಹಿತೆ ಮುಕ್ತಾಯಗೊಂಡ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಿದೆ.

2013ರ ಜುಲೈನಲ್ಲಿ ನೀರಿನದರ ಪರಿಷ್ಕರಣೆಯಾಗಿತ್ತು. ಆಗ ಶೇ 270 ರಷ್ಟು ದರವನ್ನು ಏರಿಕೆ ಮಾಡುವ ಮೂಲಕ ಮಂಡಳಿಯು ಬಳಕೆದಾರರಿಗೆ ಆಘಾತ ನೀಡಿತ್ತು. ಅಪಾರ್ಟ್‌ಮೆಂಟ್‌ ಸಮುಚ್ಚಯಗಳು,ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಸತಿಗೃಹಗಳು, ವಿಲ್ಲಾಗಳಿಗೆ ಮಾತ್ರ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಲಾಗಿತ್ತು.

ನೀರಿನ ಬಿಲ್‌ಗಳೇ ಮಂಡಳಿಗೆ ಪ್ರಮುಖ ಆದಾಯದ ಮೂಲಗಳಾಗಿವೆ. ಒಳಚರಂಡಿಗಳ ಜಾಲ ನಿರ್ಮಾಣ, ಕೊಳವೆಬಾವಿಗಳ ನಿರ್ವಹಣೆ, ವಿದ್ಯುತ್‌ ದರ ಸೇರಿದಂತೆ ಮಂಡಳಿಯ ಕಾರ್ಯಾಭಾರದ ಖರ್ಚುಗಳು ಹೆಚ್ಚಿವೆ. ಮಂಡಳಿಗೆ ಸದ್ಯ ತಿಂಗಳಿಗೆ ಸರಾಸರಿ ₹ 90 ಕೋಟಿ ವರಮಾನ ಸಂಗ್ರಹವಾಗುತ್ತಿದೆ. ದರ ಪರಿಷ್ಕರಣೆಗೆ ಕರಡು ಸಿದ್ಧಪಡಿಸಲಾಗಿದ್ದು, ಶೇ 20ರಷ್ಟು ಪರಿಷ್ಕರಣೆ ಮಾಡಲು ಯೋಜಿಸಲಾಗಿದೆ. ನಗರಾಭಿವೃದ್ಧಿ ಇಲಾಖೆಯಿಂದ ಒಪ್ಪಿಗೆ ಸಿಕ್ಕ ಬಳಿಕ ಹೊಸ ದರ ಜಾರಿಗೆ ಬರಲಿದೆ.

‘ವಿವಿಧ ಯೋಜನೆಗಳಿಗೆ ಮಂಡಳಿ ಅಂದಾಜು ₹1,600 ಕೋಟಿ ಸಾಲ ಪಡೆದಿದೆ. ಅದರ ಅಸಲು ಮತ್ತು ಬಡ್ಡಿ ಪಾವತಿಗೆ ಹಣಕಾಸು ಬೇಕಿದೆ. ನಗರದಲ್ಲಿನ ಸುಮಾರು 7 ಸಾವಿರ ಕೊಳವೆ ಬಾವಿಗಳ ನಿರ್ವಹಣೆಗೂ ಹಣ ಹೊಂದಿಸಬೇಕಿದೆ. ಈ ಆರ್ಥಿಕ ಹೊರೆಯನ್ನು ಸರಿದೂಗಿಸಲು ದರ ಹೆಚ್ಚಳ ಮಾಡಲಾಗುತ್ತಿದೆ’ ಎಂದು ಮಂಡಳಿಯ ಮೂಲಗಳು ಹೇಳಿವೆ.

ಮಂಡಳಿಯು ಗೃಹ ಬಳಕೆಗೆ ಸರಬರಾಜು ಮಾಡುತ್ತಿರುವ ನೀರಿಗೆ ₹100 (ತಿಂಗಳಿಗೆ 8 ಸಾವಿರ ಲೀಟರ್‌ ವರೆಗೆ–ಕಾವೇರಿ ನೀರು), ₹ 200(8 ಸಾವಿರ ಲೀಟರ್‌ ವರೆಗೆ–ಮಂಡಳಿಯ ಕೊಳವೆ ಬಾವಿ ನೀರು) ನಿಗದಿಪಡಿಸಿದೆ.

* ದರ ಪರಿಷ್ಕರಣೆಯ ಕರಡು ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರಿಗೆ ಹೊರೆಯಾಗದ ರೀತಿಯಲ್ಲಿ ದರ ನಿಗದಿ ಮಾಡುತ್ತೇವೆ. ಶೀಘ್ರದಲ್ಲಿ ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸುತ್ತೇವೆ.

- ತುಷಾರ್‌ ಗಿರಿನಾಥ್‌, ಜಲಮಂಡಳಿ ಅಧ್ಯಕ್ಷ

Post Comments (+)