ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ತಾಕೀತು: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಈಶಾನ್ಯ ವಲಯ ಪೊಲೀಸ್ ಅಧಿಕಾರಿಗಳ ಪರಾಮರ್ಶೆ ಸಭೆ
Last Updated 29 ಫೆಬ್ರುವರಿ 2020, 9:55 IST
ಅಕ್ಷರ ಗಾತ್ರ

ಕಲಬುರ್ಗಿ: ಈಶಾನ್ಯ ವಲಯದ ವ್ಯಾಪ್ತಿಯ ಕಲಬುರ್ಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಕ್ರಮ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಲೇಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿನ ಪೊಲೀಸ್‌ ಭವನದ ಐಜಿಪಿ ಕಚೇರಿಯಲ್ಲಿ ಶುಕ್ರವಾರ ಉನ್ನತ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕಲಬುರ್ಗಿ ಕಮಿಷನರೇಟ್‌ ಸೇರಿದಂತೆ ಈಶಾನ್ಯ ವಲಯದ ಮೂರು ಜಿಲ್ಲೆಗಳಲ್ಲಿ ಮಟಕಾ, ಜೂಜಾಟ, ಮರಳು ಸಾಗಣೆ ಮೊದಲಾದ ಅಕ್ರಮ ದಂಧೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕು. ಗಡಿ ಜಿಲ್ಲೆಗಳಲ್ಲಿ ಮಟಕಾ ಹಾವಳಿ ಹೆಚ್ಚಿರುವುದನ್ನು ನಿಗ್ರಹಿಸಬೇಕು. ಕಲಬುರ್ಗಿ–ಯಾದಗಿರಿ ಜಿಲ್ಲೆಯಲ್ಲಿನ ಅಕ್ರಮ ಮರಳುಗಾರಿಕೆ ನಡೆಯದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದೇನೆ. ರಾಜ್ಯದಲ್ಲಿ ಅಪರಾಧ ಪ್ರಕರಣ ಇಳಿಮುಖವಾಗಿವೆ. ಈ ಭಾಗದಲ್ಲಿ ಪ್ರಕರಣಗಳನ್ನು ಪತ್ತೆ ಮಾಡುವುದು ಮತ್ತು ಸಂತ್ರಸ್ತರಿಗೆ ಕಳೆದುಕೊಂಡ ವಸ್ತು ಹುಡುಕಿಕೊಡುವ ನಿಟ್ಟಿನಲ್ಲಿ ಸಮರ್ಥವಾಗಿ ಪೊಲೀಸಿಂಗ್ ಮಾಡುವಂತೆ ಸೂಚಿಸಿದ್ದೇನೆ’ ಎಂದರು.

ಶಸ್ತ್ರಾಸ್ತ್ರ ಪರವಾನಗಿ ಇಲ್ಲ: ಕಮಿಷನರೇಟ್‌ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಹೊಸ ಶಸ್ತ್ರಾಸ್ತ್ರ ಪರವಾನಗಿ ನೀಡದಂತೆ ಮತ್ತು ರೌಡಿಗಳ ಪಟ್ಟಿಯಿಂದ ಯಾರ ಹೆಸರನ್ನೂ ತೆಗೆಯದಂತೆಕಮಿಷನರ್‌ಗೆ ಸೂಚನೆ ನೀಡಲಾಗಿದೆ. ಬೀದರ್‌, ಕಲಬುರ್ಗಿ ಹಾಗೂ ಯಾದಗಿರಿ ಜಿಲ್ಲೆಗಳ ಎಸ್ಪಿಗಳಿಗೂ ಈ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಪಠಾಣ್ ಪ್ರಕರಣ ನಿರ್ದಾಕ್ಷಿಣ್ಯ ಕ್ರಮ: ಕಲಬುರ್ಗಿಯಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಎಐಎಂಐಎಂ ಪಕ್ಷದ ವಕ್ತಾರ, ಮಾಜಿ ಶಾಸಕ ವಾರಿಸ್ ಪಠಾಣ್ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಪಠಾಣ್‌ಗೆ ಈಗಾಗಲೇ ನೋಟಿಸ್‍ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ವಿಚಾರಣೆ ಬಳಿಕ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಮರಕುಮಾರ ಪಾಂಡೆ, ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್, ಪೊಲೀಸ್‌ ಕಮಿಷನರ್‌ ಎಂ.ಎನ್.ನಾಗರಾಜ, ಡಿಸಿಪಿ ಡಿ. ಕಿಶೋರಬಾಬು, ಬೀದರ್ ಎಸ್ಪಿ ನಾಗೇಶ ಡಿ.ಎಲ್‌., ಯಾದಗಿರಿ ಎಸ್ಪಿ ಹೃಷಿಕೇಶ ಭಗವಾನ್‌ ಸೋನವಾಣೆ, ಕಲಬುರ್ಗಿ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ ಸೇರಿದಂತೆ ಎಸಿಪಿಗಳು ಹಾಗೂ ಡಿಎಸ್ಪಿಗಳು ಪಾಲ್ಗೊಂಡಿದ್ದರು.

₹ 18.5 ಕೋಟಿ ವೆಚ್ಚದಲ್ಲಿ ಕಮಿಷನರ್‌ ಕಚೇರಿ

ಕಲಬುರ್ಗಿ ನಗರ ಪೊಲೀಸ್‌ ಕಮಿಷನರೇಟ್‌ಗೆ ನೂತನ ಕಟ್ಟಡ ನಿರ್ಮಿಸಲು ₹ 18.50 ಕೋಟಿ ಮೊತ್ತದ ಯೋಜನೆಯನ್ನು ರೂಪಿಸಲಾಗಿದ್ದು, ಅದರಲ್ಲಿ ಈಗಾಗಲೇ ₹ 6 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು. ಹಳೆ ಎಸ್ಪಿ ಕಚೇರಿ ಬಳಿಯೇ ಕಮಿಷನರ್‌ ಕಚೇರಿ ನಿರ್ಮಾಣವಾಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

36 ವಾಹನ ಹಾಗೂ ಬೈಕ್‍ಗಳ ಖರೀದಿಗೆ ₹ 3 ಕೋಟಿ, ಫರಹತಾಬಾದ್‌ನಲ್ಲಿ ಹೊಸ ಪೊಲೀಸ್ ಠಾಣೆ ನಿರ್ಮಿಸಲು ₹ 1.50 ಕೋಟಿ ಬಿಡುಗಡೆ ಮಾಡಲಾಗುವುದು ಎಂದರು.

ಈಶಾನ್ಯ ವಲಯದಲ್ಲಿ 300 ಹುದ್ದೆಗಳು ಖಾಲಿಯಿವೆ, ಕಲಬುರ್ಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ 254 ಹುದ್ದೆಗಳು ಮತ್ತು 250 ನಗರ ಮೀಸಲು ಪಡೆ ಸಿಬ್ಬಂದಿ ಹುದ್ದೆ ಖಾಲಿಯಿದ್ದು, ಶೀಘ್ರ ಭರ್ತಿ ಮಾಡಲಾಗುವುದು. ಪೊಲೀಸ್ ಇಲಾಖೆಯನ್ನು ಇನ್ನಷ್ಟು ಆಧುನೀಕರಣಗೊಳಿಸಲು ಮತ್ತು ಹೊಸ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲು ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಕೋರಲಾಗಿದೆ ಎಂದರು.

ಪ್ರಚೋದನಕಾರಿ ಭಾಷಣ ಮಾಡಿದ ಎಐಎಂಐಎಂ ಪಕ್ಷದ ವಕ್ತಾರ ವಾರಿಸ್‌ ಪಠಾಣ್‌ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ಮಾಡಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು

- ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT