ಗುರುವಾರ , ಆಗಸ್ಟ್ 5, 2021
24 °C
ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅಸಮಾಧಾನದ ಹೊಗೆ

ಮಧ್ಯಪ್ರದೇಶದಲ್ಲಿ ಬಿಜೆಪಿ ಮೂರು ಗುಂಪು: ಶತ್ರುಘ್ನ ಸಿನ್ಹಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ‘ಬಿಜೆಪಿ ಮೂರು ಗುಂಪುಗಳಾಗಿ ವಿಂಗಡಣೆಯಾಗಿದೆ’ ಎಂದು ಮಾಜಿ ಸಂಸದ ಶತ್ರುಘ್ನ ಸಿನ್ಹಾ  ಹೇಳಿದ್ದಾರೆ. 

‘ಈ ಬಗ್ಗೆ ನೀವು ಏನು ಹೇಳಲು ಬಯಸುವಿರಿ ಸರ್? ಮಧ್ಯಪ್ರದೇಶದಲ್ಲಿ ಬಿಜೆಪಿ ಮೂರು ಗುಂಪುಗಳಾಗಿ (ಮಹಾರಾಜ್, ನಾರಾಜ್‌ , ಶಿವರಾಜ್) ವಿಂಗಡಣೆಯಾಗಿದೆ. ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.  

ಮಾರ್ಚ್‌ನಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ನೇತೃತ್ವದಲ್ಲಿ ಒಟ್ಟು 22 ಶಾಸಕರು ಕಾಂಗ್ರೆಸ್ ತೊರೆದಿದ್ದರು. ಈ ಬೆಳವಣಿಗೆ ನಂತರ ರಾಜ್ಯದಲ್ಲಿ ಕಮಲ್‍ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು.

ಬಿಜೆಪಿ ನೇತೃತ್ವದ ಹೊಸ ಸರ್ಕಾರದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ನಂತರ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಿವರಾಜ್ ಅವರು ಸಿಂಧಿಯಾ ಅವರಿಗೆ ನಿಷ್ಠರಾಗಿದ್ದ 12 ಶಾಸಕರಿಗೆ ಸ್ಥಾನ ನೀಡಿದ್ದರು. ಈ ಬಗ್ಗೆಯೂ ಶತ್ರುಘ್ನ ಸಿನ್ಹಾ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. 

ಸಿನ್ಹಾ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ‘ನಾರಾಜ್‌’ ಪದವು ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬಗೆಗೆ ಬಿಜೆಪಿಯಲ್ಲಿರುವ ಇತರ ನಾಯಕರ ಅಸಮಾಧಾನವನ್ನು ಸೂಚಿಸುವಂತಿದೆ ಎನ್ನಲಾಗಿದೆ.  

ಮಧ್ಯಪ್ರದೇಶದಲ್ಲಿ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ  ಹಾಗೂ ಜುಲೈ 2ರಂದು ಎರಡನೇ  ಬಾರಿಗೆ ಸಂಪುಟ ವಿಸ್ತರಣೆಯಾಗಿದೆ. 28 ಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ ಬಳಿಕವೂ ಮುಖ್ಯಮಂತ್ರಿ ಚೌಹಾಣ್ ಅವರಿಗೆ ಇನ್ನೂ ಖಾತೆ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. 

ಈ ಕುರಿತು ಚರ್ಚಿಸಲು ಮುಖ್ಯಮಂತ್ರಿ ಚೌಹಾಣ್‌ ಅವರು ಈಚೆಗಷ್ಟೇ ದೆಹಲಿಯಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದರು. ‘ಖಾತೆ ಹಂಚಿಕೆ ಬಗ್ಗೆ ನಾನು ಕಾರ್ಯತತ್ಪರನಾಗಿದ್ದೇನೆ’ ಎಂದು ಅವರು ದೆಹಲಿಯಿಂದ ಹಿಂತಿರುಗಿದ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದರು. 

ಸಂಪುಟ ವಿಸ್ತರಣೆ ಬಳಿಕ ಶಾಸಕ ಅಜಯ್ ವಿಷ್ಣೋಯಿ ಅವರು, ‘ಜಬಲ್‌ಪುರ್ ಮತ್ತು ರೇವಾ ಕ್ಷೇತ್ರದ ಜನರು ಅಸಮಾಧಾನಗೊಂಡಿದ್ದಾರೆ’ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು